

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ವನ್ಯಜೀವಿಗಳನ್ನು ಸಂರಕ್ಷಿಸುವ ಮೂಲಕ ಉತ್ತಮ ಪರಿಸರ ಕಾಪಾಡಬೇಕೆಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಕರೆ ನೀಡಿದ್ದಾರೆ.
ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೬೮ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ಲಾಸ್ಟಿಕ್‌ನಿಂದ ವನ್ಯಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ಎಸೆಯಬಾರದು. ಜಿಲ್ಲೆ ಯಲ್ಲಿ ಪ್ರವಾಸೋದ್ಯಮ, ಪರಿಸರ, ಅರಣ್ಯ ಸಂಪತ್ತು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ. ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಪ್ರವಾಸಿಗರಿಗೆ ಸರಿಯಾದ ಮಾಹಿತಿ ದೊರೆಯುವಂತಾಗಬೇಕೆಂದರು.
ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಮಾತನಾಡಿ, ವನ್ಯಪ್ರಾಣಿ ಮತ್ತು ಮಾನವನ ಸಂಬಂಧ ಉತ್ತಮ ವಾಗಿರಲು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಅತ್ಯವಶ್ಯಕ ಎಂದರು.
ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ಸಮತೋಲನ ಕಾಪಾಡಲು ಗಿಡಮರ ಬೆಳೆಸಬೇಕು. ಜಲಮೂಲ ಸಂರಕ್ಷಣೆ ಮಾಡಬೇಕೆಂದರು.
ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಅರಣ್ಯ ಇಲಾಖೆಯಿಂದ ಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಸಂಬಂಧಿಸಿದಂತೆ ಹೆಚ್ಚಿನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಬೆಂಗಳೂರಿನ ಅಡ ವೈಲ್ಡ್ ಅಲರ್ಟ್ ಸಂಸ್ಥೆ ಪವನ್ ಜೋ, ಕ್ಲಬ್ ಮಹೀಂದ್ರ ರೆಸಾರ್ಟ್‌ನ ಅರವಿಂದ ಕುಮಾರ್ ಶರ್ಮ, ಮಂಜಪ್ಪ ಮತ್ತಿತರರು ಇದ್ದರು.
ಪರಿಸರ ಹಾಗೂ ವನ್ಯಜೀ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಕರ್ನಾಟಕ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಟಿ.ಜಿ. ಪ್ರೇಮ್ ಕುಮಾರ್ ಬೋಧಿಸಿದರು. ಅನಿತಾ ನಿರೂಪಿಸಿದರು. ಶಿವರಾಮ ಬಾಬು ಸ್ವಾಗತಿಸಿದರು. ಕಾಂತಮಣಿ ಪ್ರಾರ್ಥಿಸಿದರು.