

ಮಡಿಕೇರಿ: ರೈತ ಮುಖಂಡರ ಆಕ್ರೋಶಕ್ಕೆ ಮಣಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹುಲಿ ದಾಳಿಗೆ ಒಳಗಾಗಿರುವ ಬೆಳ್ಳೂರು ಗ್ರಾಮಕ್ಕೆ ಗುರುವಾರ ಭೇಟಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಸೋಮವಾರ ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಇದುವರೆಗೂ ಹುಲಿ ದಾಳಿಗೆ ಒಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡದಿರುವುದಕ್ಕೆ ಜಿಲ್ಲಾಧಿಕಾರಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.
ಹುಲಿ ದಾಳಿ ತೀವ್ರ ಸ್ವರೂಪ ಪಡೆದುಕೊಂಡು ೩ ವಾರ ಕಳೆದಿದ್ದರೂ ಡಿಸಿ ಸ್ಥಳಕ್ಕೆ ಭೇಟಿ ನೀಡದಿರುವುದು ಅವರು ಜವಾಬ್ದಾರಿ ನಿರ್ವಹಿಸಲು ವಿಫಲರಾಗಿರುವುದನ್ನು ಸೂಚಿಸುತ್ತದೆ. ನಿಮ್ಮ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಇಲ್ಲಿಂದ ತೊಲಗಿ ಎಂದು ರೈತ ಸಂಘ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಆಕ್ರೋಶ ವ್ಯಕ್ತ ಪಡಿಸಿದರು.
ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿಯಾಗುವ ನಿರೀಕ್ಷೆ ಇದೆ. ಇನ್ನೆರಡು ದಿನ ಮುಕ್ತವಾಗಿ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗುತ್ತದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಗುರುವಾರ ಬೆಳ್ಳೂರಿಗೆ ಭೇಟಿ ನೀಡುತ್ತೇನೆಂದು ಒತ್ತಡಕ್ಕೆ ಮಣಿದ ಡಿಸಿ ಒಪ್ಪಿಗೆ ಸೂಚಿಸಿದರು.
ಹುಲಿ ದಾಳಿ, ಸೆರೆ ಕಾರ್ಯಾಚರಣೆಗೆ ಸಂಬಂಧಿಸಿದ್ದಂತೆ ಪ್ರತಿನಿತ್ಯ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಲಾಗುತ್ತಿದೆ. ಹಲವು ವಿಚಾರಗಳಿಗೆ ಸಂಬಂಧಿಸಿದ್ದಂತೆ ತಮ್ಮ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪರಿಹಾರ ವಿಚಾರಕ್ಕೆ ಸಂಬಂಧಿಸಿದ್ದಂತೆ ಸರ್ಕಾರದ ಗಮನ ಸೆಳೆಯಲಾಗುವುದೆಂದು ಡಿಸಿ ಭರವಸೆ ನೀಡಿದರು.
ನಮ್ಮ ರಕ್ಷಣೆಗೆ ನೀವು ಇದ್ದೀರ. ನೀವು ಮಡಿಕೇರಿಯಲ್ಲಿ ಸಾಲದು. ನೇರವಾಗಿ ಹುಲಿ ಕಾರ್ಯಾಚರಣೆ ಜವಾಬ್ದಾರಿ ಹೊತ್ತುಕೊಳ್ಳಬೇಕು. ಬೆಳ್ಳೂರಿನಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದು, ಇಲ್ಲಿಯವರೆಗೂ ಏಕೆ ಭೇಟಿ ನೀಡಲಿಲ್ಲ ಎಂದು ಮನವಿ ಸ್ವೀಕರಿಸಲು ಆಗಮಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ರೈತ ಸಂಘ ಜಿಲ್ಲಾಧ್ಯಕ್ಷ ಮನು ಸೋಮಯ್ಯ ನೇರವಾಗಿ ಪ್ರಶ್ನಿಸಿದರು.
ರೈತರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹುಲಿ ಕಾಣಿಸುತ್ತಿದೆ. ಕಾರ್ಯಾಚರಣೆಯಲ್ಲಿರುವ ಅರಣ್ಯ ಇಲಾಖೆಯ ೧೫೦ ಜನರಿಗೆ ಹುಲಿ ಏಕೆ ಕಾಣಿಸುತ್ತಿಲ್ಲ. ಕೊಡಗನ್ನು ಕಾಡಾಗಿ ಮಾಡುವ ಹುನ್ನಾರ ನಡೆಯುತ್ತಿದೆಯೇ. ಹುಲಿ- ಕಾಡಾನೆ ಹಾವಳಿಗೆ ಸಂಬಂಧಿಸಿದ್ದಂತೆ ಜಿಲ್ಲಾಡಳಿತದ ಸ್ಪಂದನೆ ಸಿಕ್ಕಿಲ್ಲ. ಡಿಸಿಯಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಶಾಸಕರ ಸ್ಪಂದನೆಯೂ ಸಾಲದು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲು ಜಿಲ್ಲಾಡಳಿತ ಅವಕಾಶ ನೀಡಬಾರದು. ರೈತರು ಬೀದಿಗಿಳಿದು ಹೋರಾಟ ತೀವ್ರಗೊಳಿಸಲು ಅವಕಾಶ ನೀಡಬಾರದು. ಅರಣ್ಯ ಇಲಾಖೆಯಿಂದ ನರಹಂತಕ ಹುಲ್ಲಿ ಕೊಲ್ಲಲು ಸಾಧ್ಯವಾಗದಿ ದ್ದಲ್ಲಿ ಬಂದೂಕು ಬಳಸಲು ಅವಕಾಶ ನೀಡುವಂತೆ ಮನು ಸೋಮಯ್ಯ ಮನವಿ ಮಾಡಿದರು.
ಶಾಸಕರು ಹೇಳಿದ್ದಂತೆ ಹುಲಿ ಕೊಂದಲ್ಲಿ ನೀವು ನಾಲ್ಕೈದು ವರ್ಷ ಜೈಲಿನಲ್ಲಿ ಇರಬೇಕಾಗುತ್ತದೆ. ಅರಣ್ಯ ಇಲಾಖೆಗೆ ನರಹಂತಕ ಹುಲಿ ಕೊಲ್ಲಲು ಏಕೆ ಶಾಸಕರು ಸೂಚನೆ ನೀಡುವುದಿಲ್ಲ. ಪ್ರತಾಪ್ ಸಿಂಹಗೆ ಹುಲಿ ಭಯ ಇದೆ. ಶಾಸಕರು, ಸಂಸದರು ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿ, ಇಂದು ಇಲ್ಲಿಗೆ ಬರಬೇಕಾಗಿತ್ತೆಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ಹೇಳಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ವಕೀಲ ಹೇಮರಾಜ್, ರೈತ ಮುಖಂಡರಾದ ಪುಚ್ಚಿಮಾಡ ಹರೀಶ್, ಲೋಕೇಶ್ ಅರಸ್ ಮಾತನಾಡಿದರು.
ಡಿಸಿ ಕಚೇರಿಗೆ ಬೀಗ
ಹುಲಿ ದಾಳಿಗೆ ಇನ್ನೊಂದು ಜೀವ ಬಲಿ ಸಂಭವಿಸಿದ್ದಲ್ಲಿ ಡಿಸಿ ಕಚೇರಿಗೆ ಬೀಗ ಹಾಕಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಘೋಷಿಸಿದರು. ಸಾವಿರ ಪೊಲೀಸರನ್ನು ಹಾಕಿದ್ದರೂ, ರಾಜ್ಯದ ವಿವಿಧೆಡೆಯ ರೈತರೊಂದಿಗೆ ಆಗಮಿಸಿ ಡಿಸಿ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಸಿಐ ವಿರುದ್ಧ ಘೋಷಣೆ
ತಮ್ಮ ಜವಾಬ್ದಾರಿಯನ್ನು ರೈತ ಮುಖಂಡರು, ರೈತರು ಪ್ರಶ್ನಿಸುತ್ತಿದ್ದಂತೆ ಡಿಸಿ ಚಾರುಲತಾ ಸೋಮಲ್ ಸ್ವಲ್ಪ ತಾಳ್ಮೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದರು. ಪದೇ ಪದೇ ಡಿಸಿ ಜವಾಬ್ದಾರಿ ಬಗ್ಗೆ ಮಾತನಾಡಿ ಬೇಡಿ ಎಂದು ಹೇಳುತ್ತಿದ್ದಂತೆ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಐ.ಪಿ. ಮೇದಪ್ಪ, ಅನೂಪ್ ಮಾದಪ್ಪ ಪ್ರತಿಭಟನಾಕಾರರನ್ನು ತಡೆಯಲು ಮುಂದಾದರು.
ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಹೀರೋಸಂ ತೋರಿಸುತ್ತಾರೆ. ಅವರ ಬಾಡಿ ಲಾಂಗ್ವೇಜ್ ರೈತ ಹೋರಾಟ ಹತ್ತಿಕ್ಕುವಂತಿದೆ. ಡಿಸಿ ಕೂಲ್ ಆಗಿದ್ದಾರೆ. ಅನೂಪ್ ಏಕೆ ಹೀಗೆ ಆಡುತ್ತಾರೆ. ನಮ್ಮ ಹೋರಾಟದ ಸಂದರ್ಭ ಹೀಗೆ ಮಾಡುತ್ತಾ ಬಂದಿದ್ದಾರೆ ಎಂದು ಮನು ಸೋಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭ ರೈತ ಮುಖಂಡರು, ರೈತರು ಅನೂಪ್ ಮಾದಪ್ಪ ವಿರುದ್ಧ ಧಿಕ್ಕಾರ ಕೂಗಿದರು.
೧೦ ಬೇಡಿಕೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮೂಲಕ ಸರ್ಕಾರಕ್ಕೆ ೧೦ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ಮೂವರನ್ನು ಬಲಿ ತೆಗೆದುಕೊಂಡ ನರಹಂತಕ ಹುಲಿಯನ್ನು ತಕ್ಷಣ ಗುಂಡಿಕ್ಕಿ ಕೊಲ್ಲಬೇಕು. ಇದು ಸಾಧ್ಯವಾಗದಿದ್ದಲ್ಲಿ ಕಾನೂನಾತ್ಮಕವಾಗಿ ರೈತರಿಗೆ ಕೊಲ್ಲಲು ಅವಕಾಶ ಮಾಡಿಕೊಡಬೇಕು. ಅಕ್ಕಪಕ್ಕದ ಗ್ರಾಮಗಳಲ್ಲಿರುವ ಐದಾರು ಹುಲಿಗಳನ್ನು ತಕ್ಷಣ ಸ್ಥಳಾಂತರಿಸಬೇಕು. ತೋಟ ಗಳಲ್ಲಿರುವ ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು.
ಆನೆ, ಹುಲಿ ಸಂತತಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅರಣ್ಯದಿಂದ ನಾಡಿಗೆ ಬರುತ್ತಿರುವ ವನ್ಯಜೀವಿಗಳನ್ನು ಹ್ಯಾಗಿಂಗ್ ಸೋಲಾರ್ ವೈರ್ ಅಥವಾ ರೈಲ್ವೆ ಬ್ಯಾರಿಕೇಡ್ ಅಥವಾ ಕಂದಕ ನಿರ್ಮಿಸಿ ಇದರ ಹಾವಳಿ ನಿಯಂತ್ರಿಸಬೇಕು. ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದ್ದಂತೆ ಸಾರ್ವಜನಿಕರು ಒಡಾಡಲು ಭಯಭೀತರಾಗಿದ್ದು, ಇಲಾಖೆಯಿಂದ ಸಾರಿಗೆ ವ್ಯವಸ್ಥೆ ಹಾಗೂ ಮನೆಗಳಿಗೆ ಗನ್‌ಮೆನ್ ವ್ಯವಸ್ಥೆ ಮಾಡಬೇಕು.
ವನ್ಯಪ್ರಾಣಿಗಳಿಂದ ಹುತಾತ್ಮರಾದ ಕುಟುಂಬಕ್ಕೆ ೫೦ ಲಕ್ಷ ರೂ. ಪರಿಹಾರ ಸ್ಥಳದಲ್ಲೆ ನೀಡಬೇಕು. ರೈತರ ಹಸುಗಳು ವನ್ಯಜೀವಿಗಳಿಂದ ಮೃತ ಪಟ್ಟಲ್ಲಿ ಅವರಿಗೆ ಕೊಡುತ್ತಿರುವ ಪರಿಹಾರವನ್ನು ೫ ಪಟ್ಟು ಹೆಚ್ಚಿಸಬೇಕು ಮತ್ತು ಸ್ಥಳದಲ್ಲೆ ಕೊಡುವಂತಾಗಬೇಕು. ಕಾಡುಪ್ರಾಣಿಗಳಿಗೆ ಅರಣ್ಯ
ದೊಳಗೆ ನೀರು, ಆಹಾರ ಶಾಶ್ವತವಾಗಿ ಕೊಡುವಂತೆ ಯೋಜನೆ ಕೈಗೆತ್ತಿಕೊಳ್ಳಬೇಕು. ವನ್ಯಜೀವಿಗಳಿಂದ ಮಾನವ ಪ್ರಾಣ ಕಳೆದುಕೊಂಡ ಸಂದರ್ಭ ಕೆಎಸ್‌ಆರ್‌ಟಿಸಿ ಮಾದರಿಯ ವಿಮೆ ಪರಿಹಾರ ಅರಣ್ಯ ಇಲಖೆಯು ಅಳವಡಿಸಿಕೊಳ್ಳಬೇಕು.
=====