

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಕಾವೇರಿ ಹಾಗೂ ಕೊಡವ ಯುವತಿಯರ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಯುವಕನ ಬಂಧನ ಬಳಿಕ ಪೋಸ್ಟ್ ಉದ್ದೇಶ ಬಗ್ಗೆ ಚರ್ಚೆ ನಡೆಯುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ ಬಹಿರಂಗ ಪಡಿಸದರಿಂದ ಅವಹೇಳನಕಾರಿ ಪೋಸ್ಟ್ ಉದ್ದೇಶ ನಿಗೂಢವಾಗಿ ಉಳಿದುಕೊಂಡಿದೆ.
ಬಂಧಿತ ದಿವಿನ್ ದೇವಯ್ಯಗೆ ವಿವಾಹ ಮಾಡಿಸಲು ತಮ್ಮ ಸಿರಿವಂತಿಕೆಗೆ ತಕ್ಕ ಕುಟುಂಬದ ಯುವತಿಯನ್ನು ಪಾಲಕರು ಹುಡುಕುತ್ತಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಯುವತಿಯರ ಬಗ್ಗೆ ಈತನಿಗೆ ಸದಾಭಿಪ್ರಾಯ ಹೊಂದಿರಲಿಲ್ಲ. ಕೊಡಗಿನಲ್ಲಿ ನೆಲೆಸಿರುವ ಆಸ್ತಿಪಾಸ್ತಿ ಕಡಿಮೆ ಇರುವ ಕುಟುಂಬದ ಯುವತಿಯನ್ನು ವಿವಾಹವಾಗಲು ಪಾಲಕರು ಒಪ್ಪುತ್ತಿರಲಿಲ್ಲ. ಆ ಕಾರಣಕ್ಕಾಗಿ ಕೊಡವತಿಯರ ಬಗ್ಗೆ ಈತನಿಗೆ ಅಸಮಾಧಾನ ಇತ್ತೆಂಬ ಮಾಹಿತಿ ಲಭ್ಯವಾಗಿದೆ.
ಇನ್ಸ್ಟಾಗ್ರಾಮ್ ಗ್ರೂಪ್‌ನಲ್ಲಿ ಟಿಪ್ಪು ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಇದು ನಮ್ಮನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯ ವಿಚಾರವಲ್ಲ. ಟಿಪ್ಪು ವಿಚಾರದಿಂದ ನಮಗೇನು ಆಗಬೇಕೆಂಬ ನಿಲುವು ಹೊಂದಿದ್ದ ಈತ, ನಕಲಿ ಖಾತೆ ಮೂಲಕ ಕೊಡವತಿಯರು, ಕಾವೇರಿ ಮಾತೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎನ್ನಲಾಗುತ್ತಿದೆ.
ಅವಹೇಳನ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಜು.೨೯ ರಂದು ಕೊಡವ ಸಮಾಜಗಳ ಒಕ್ಕೂಟ ಕರೆ ನೀಡಿದ್ದ ಮಡಿಕೇರಿ ಪ್ರತಿಭಟನೆ ಹಿಂಪಡೆದುಕೊಂಡಿದೆ. ಕೊಡವ ಸಮಾಜಗಳ ಒಕ್ಕೂಟ, ಅಖಿಲ ಕೊಡವ ಸಮಾಜ, ವಿವಿಧ ಕೊಡವ ಸಮಾಜ- ಸಂಘ- ಸಂಸ್ಥೆಗಳ ಮೂಲಕ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಅಂತರ್ಮುಖಿ ದಿವಿನ್
ತಮ್ಮ ಮಗ ಕೆಟ್ಟು ಹೋಗುತ್ತಾನೆಂದು ಮೂರು ವರ್ಷದ ಹಿಂದೆ ಪಾಲಕರು ಬೆಂಗಳೂರಿನಿಂದ ಮನೆಗೆ ಕರೆಸಿಕೊಂಡಿದ್ದರು. ಅಂತರ್ಮುಖಿ ಯಾಗಿದ್ದ ದಿವಿನ್ ದೇವಯ್ಯ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು, ಊರಿನವರು ಸೇರಿದ್ದಂತೆ ಯಾರೊಂದಿಗೆ ಬೆರೆಯುತ್ತಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅಡ್ಮಿನ್ ಬಿಜೆಪಿ ಮುಖಂಡನ ಸಂಬಂಧಿ !
೮ ಸಾವಿರ ಫಾಲೋಅರ್ ಹೊಂದಿರುವ ಇನ್ಸ್ಟಾಗ್ರಾಮ್ ಗ್ರೂಪ್‌ನಲ್ಲಿ ಕರಿನೆರವಂಡ ದಿವನ್ ದೇವಯ್ಯ ವಿವಾದಿತ ಪೋಸ್ಟ್ ಹಾಕಿರುವ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಈ ಗ್ರೂಪ್ ಅಡ್ಮಿನ್, ಕೊಡವ ಸಮಾಜವೊಂದರ ಅಧ್ಯಕ್ಷರಾಗಿರುವ ಬಿಜೆಪಿ ಮುಖಂಡನ ಸಂಬಂಧಿ ಎನ್ನುವುದು ಬೆಳಕಿಗೆ ಬಂದಿದೆ. ಮಡಿಕೇರಿ ಪ್ರತಿಭಟನೆಗೆ ನೇತೃತ್ವ ವಹಿಸಿದ್ದವರ ಪೈಕಿ ಒಬ್ಬರಾಗಿದ್ದ ಮುಖಂಡ ಈಗ ತೀವ್ರ ಕಸಿವಿಸಿಗೆ ಒಳಗಾಗಿದ್ದಾರೆ. ಗ್ರೂಪ್ ಅಡ್ಮಿನ್ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮಡಿಕೇರಿ ಮೂಲದವನಾಗಿದ್ದಾನೆ.
ಮತ್ತೊಂದು ನಿಗೂಢತೆ
ಸಿದ್ದಾಪುರದ ಮುಸ್ಲಿಂ ಯುವಕನ ಭಾವಚಿತ್ರ ಹಾಗೂ ಹೆಸರು ಅವಹೇಳನಕಾರಿ ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದು ಹೇಗೆಂಬ ನಿಗೂಢತೆ ಕಾಡುತ್ತಿದೆ. ಯುವಕನ ಪಾಲಕರು ಕೂಡ ಅನಗತ್ಯವಾಗಿ ತಮ್ಮ ಮಗನ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಕೋರುತ್ತಿದ್ದಾರೆ.
ಬಂಧಿತ ಯುವಕ, ಸಿದ್ದಾಪುರದ ಯುವಕನ ಹೆಸರು ಮತ್ತು ಭಾವಚಿತ್ರ ಬಳಸಿಕೊಂಡು ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದ. ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಆ ಖಾತೆಯನ್ನು ಕ್ಲೋಸ್ ಮಾಡಿಕೊಂಡಿದ್ದ. ಸಿದ್ದಾಪುರದ ಯುವಕನ ಹೆಸರಿನಲ್ಲಿದ್ದ ಖಾತೆ ಹುಡುಕಾಟದಲ್ಲಿದ್ದವರಿಗೆ, ನಕಲಿ ಖಾತೆ ಕ್ಲೋಸ್ ಆಗಿದ್ದರಿಂದ ಮೂಲ ಖಾತೆ ಪತ್ತೆಯಾಗಿದೆ. ಅಲ್ಲಿಂದ ವಿಳಾಸ ಮತ್ತು ಭಾವಚಿತ್ರವನ್ನು ತೆಗೆದುಕೊಂಡಿದ್ದಾರೆಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಈ ವಿಚಾರ ಇನ್ನೂ ಕೂಡ ಖಚಿತವಾಗಿಲ್ಲ.
**
ಅವನಹೇಳಕಾರಿ ಪೋಸ್ಟ್‌ಗೆ ಕಾರಣವನ್ನು ಬಂಧಿತ ವ್ಯಕ್ತಿ ಹೇಳಬೇಕು. ಕಾವೇರಿ ತೀರ್ಥದಲ್ಲಿ ಪಾದ ತೊಳೆದು, ಮಸೀದಿಗೆ ಪ್ರವೇಶಿಸು ತ್ತೇನೆಂದು ಹೇಳಿರುವ ಕುಲದ್ರೋಹಿ ಬಾಯಿಯಿಂದ ಸತ್ಯ ಹೊರ ಬರುವಂತೆ ಮಾಡಬೇಕು. ಇದು ತಾಯಿ ಕಾವೇರಿ ವಿಷಯ. ಕೊಡವ, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂದು ಯೋಚಿಸದೆ ಬಂಧಿನ ಬಾಯಿ ಬಿಡಿಸಲು ಪೊಲೀಸರ ಮೇಲೆ ಒತ್ತಡ ಹಾಕಬೇಕು. ಉಳ್ಳಿಯಡ ಡಾಟಿ ಪೂವಯ್ಯ, ಮಾಜಿ ಅಧ್ಯಕ್ಷೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ.
**