ಜನೋತ್ಸವಕ್ಕೆ ಜಂಬೂ ಸವಾರಿ ಆಕರ್ಷಣೆ

10mdka1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ರಾಜರ ಆಳ್ವಿಕೆ ಕಾಲಘಟ್ಟದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಮೆರವಣಿಗೆ ಮೂಲಕ ಮಡಿಕೇರಿ ದಸರಾ ಪ್ರಾರಂಭವಾಯಿತು. ತದನಂತರ ಮಡಿಕೇರಿ ವ್ಯಾಪ್ತಿಯಲ್ಲಿರುವ ಹತ್ತು ದೇವಾಲಯಗಳಿಂದ ಮಂಟಪ ಶೋಭಾಯಾಗ್ರೆ ಮೂಲಕ ದಸರಕ್ಕೆ ವಿಶೇಷ ಮೆರಗು ನೀಡಿತ್ತು. ದಕ್ಷಿಣ ಕೊಡಗಿನ ಕೇಂದ್ರ ಸ್ಥಾನ ಗೋಣಿಕೊಪ್ಪದಲ್ಲಿಯೂ ಕಳೆದ ವರ್ಷದಿಂದ ದಸರಾ ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಹಲವು ಹೊಸ ಚಿಂತನೆಯೊಂದಿಗೆ ಜನೋತ್ಸವದ ಮೆರಗು ಹೆಚ್ಚಿಸಲಾಗುತ್ತಿದೆ. ಕೆಲವು ವರ್ಷಗಳಿಂದ ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ ಮೂಲಕ ಸಂಭ್ರಮ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಜಂಬೂ ಸವಾರಿ ಆಯೋಜಿಸುವ ಬಗ್ಗೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಘೋಷಿಸುವುದರ ಮೂಲಕ ಜನೋತ್ಸವಕ್ಕೆ ಮತ್ತಷ್ಟು ಮೆರಗು ನೀಡುವತ್ತ ಹೆಜ್ಜೆ ಹಾಕಿರುವುದು ಗಮನ ಸೆಳೆದಿದೆ.

ಜಂಬೂ ಸವಾರಿ ಮೂಲಕ ಮೈಸೂರು ದಸರಾ ವಿಶ್ವವಿಖ್ಯಾತಿ ಹೊಂದಿದೆ. ಅದೇ ರೀತಿ ಕೊಡಗಿನಲ್ಲಿಯೂ ಜಂಬೂ ಸವಾರಿ ಪ್ರಾರಂಭಿಸುವು ದರ ಮೂಲಕ ಮಡಿಕೇರಿ ದಸರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಲಾಗಿದೆ. ಮಡಿಕೇರಿ ಯೊಂದಿಗೆ ಗೋಣಿಕೊಪ್ಪ ದಸರದಲ್ಲಿಯೂ ಜಂಬೂ ಸವಾರಿ ಮಾಡುವ ಬೇಡಿಕೆ ವ್ಯಕ್ತವಾಗಿದೆ.

ಚಾಮುಂಡಿ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡುವುದರ ಮೂಲಕ ಗೋಣಿಕೊಪ್ಪ ದಸರಾ ಪ್ರಾರಂಭವಾಗುತ್ತದೆ. ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ವೇದಿಕೆಯಲ್ಲಿ ಪ್ರತಿನಿತ್ಯ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಡಿಕೇರಿ, ಗೋಣಿಕೊಪ್ಪ ದಸರಾ ಸಂದರ್ಭ ವಿಜಯದಶಮಿಯಂದು ಜಂಬೂ ಸವಾರಿ ಆಯೋಜಿಸುವುದು ದಸರಾ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ.

ಕೊಡಗಿನಲ್ಲಿ ಮೂರು ಸಾಕಾನೆ ಶಿಬಿರ ಇದೆ. ಮೈಸೂರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಹುತೇಕ ಸಾಕಾನೆಗಳು ಕೊಡಗಿನ ಸಾಕಾನೆ ಶಿಬಿರದಿಂದ ತೆರಳುತ್ತದೆ. ಪ್ರಸ್ತುತ ೭೦ ಸಾಕಾನೆಗಳು ಕೊಡಗಿನ ಮೂರು ಆನೆ ಶಿಬಿರದಲ್ಲಿವೆ. ದಸರಾ ವೇಳೆ ಜಂಬೂ ಸವಾರಿ ಆಯೋಜಿಸು ವುದರ ಮೂಲಕ ಸಾಕಾನೆಗಳನ್ನು ರಾಜಬೀದಿಯಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ವನ್ಯಜೀವಿ ಸಪ್ತಾಹ ವೇಳೆ ವ್ಯಕ್ತ ಪಡಿಸಿದ್ದ ವಿಚಾರಕ್ಕೆ ಸಂಬಂಧಿಸಿ ದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

**
ಮಡಿಕೇರಿ ದಸರಾ ಆಚರಣೆಗೆ ಮುಂದಿನ ವರ್ಷದಿಂದ ಜಂಬೂ ಸವಾರಿ ಸೇರ್ಪಡೆ ಮಾಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸ ಲಾಗಿದೆ. ಜಂಬೂ ಸವಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೊಡಗಿನ ಸಾಕಾನೆ ಶಿಬಿರದಲ್ಲಿ ೭೦ ಆನೆಗಳಿದ್ದು, ಜಂಬೂ ಸವಾರಿ ಸೇರ್ಪಡೆ ಯಾದ್ದಲ್ಲಿ ದಸರಕ್ಕೆ ಮತ್ತಷ್ಟು ಮೆರಗು ಸಿಗಲಿದೆ. ನಿರಂಜನ್ ಮೂರ್ತಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ.

**
ಜಂಬೂ ಸವಾರಿ ಪ್ರಾರಂಭಿಸುವ ಬಗ್ಗೆ ಸಿಸಿಎಫ್ ವ್ಯಕ್ತ ಪಡಿಸಿರುವ ಅಭಿಪ್ರಾಯ ಸ್ವಾಗತರ್ಹ. ಜಂಬೂ ಸವಾರಿಗೆ ಸರ್ಕಾರದಿಂದ ಅನುಮತಿ ಪಡೆಯುವ ಮುನ್ನ ಸಾಧಕ- ಬಾಧಕದ ಕುರಿತು ಹಿರಿಯರು, ಅನುಭವಿಗಳು ಸೇರಿ ಚರ್ಚಿಸಬೇಕು. ದೇವಿ ಪ್ರತಿಷ್ಠಾಪನೆ, ಮೆರವಣಿಗೆ ಸೇರಿ ದ್ದಂತೆ ವಿವಿಧ ವಿಚಾರಕ್ಕೆ ಸಂಬಂಧಿಸಿದ್ದಂತೆ ಎದುರಾಗುವ ಪ್ರಶ್ನೆಗಳಿಗೆ ಅಷ್ಟಮಂಗಲ ಪ್ರಶ್ನೆ ಮೂಲಕ ಉತ್ತರ ಕಂಡುಕೊಳ್ಳಬೇಕಾಗಿದೆ. ಕೆ.ಎಸ್. ರಮೇಶ್, ಕಾರ್ಯಾಧ್ಯಕ್ಷರು, ಮಡಿಕೇರಿ ನಗರ ದಸರಾ ಸಮಿತಿ.

**
ಕರಗ ಮೆರವಣಿಗೆ, ದಶಮಂಟಪ ಶೋಭಾಯಾತ್ರೆ ಮೂಲಕ ಜನೋತ್ಸವ ಮಡಿಕೇರಿ ದಸರಾ ನಾಡಿನ ಗಮನ ಸೆಳೆದಿದೆ. ಜಂಬೂ ಸವಾರಿ ಸೇರ್ಪಡೆಯಿಂದ ಪ್ರವಾಸಿಗರನ್ನು ಮತ್ತಷ್ಟು ಸೆಳೆಯಬಹುದು. ವಿಜಯದಶಮಿಯಂದು ಜಂಬೂ ಸವಾರಿ ಮಾಡಬಹುದು. ಈ ಬಗ್ಗೆ ಸಾಧಕ- ಬಾಧಕ ಕುರಿತು ಚರ್ಚಿಸಿದ ಬಳಿಕ ಸೂಕ್ತ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಮನು ಮಂಜುನಾಥ್, ಅಧ್ಯಕ್ಷರು, ಮಡಿಕೇರಿ ನಗರ ದಸರಾ ಸಮಿತಿ.

**
ಮಡಿಕೇರಿ ದಸರಾದಲ್ಲಿ ಜಂಬೂ ಸವಾರಿ ಸೇರ್ಪಡೆ ವಿಚಾರ ಸ್ವಾಗತಾರ್ಹ. ಆನೆ ನಡೆದಾಡಲು ತೊಂದರೆಯಾಗುವುದಿಲ್ಲ. ಆದರೆ, ದೇವರ ಮೂರ್ತಿ, ವಿಗ್ರಹ ಹೊತ್ತು ಆನೆ ನಡೆಯಬೇಕಾದರೆ ಇಳಿಜಾರು, ಎತ್ತರ ಪ್ರದೇಶ ತೊಂದರೆಯಗಬಹುದು. ಈ ಬಗ್ಗೆಯೂ ಚರ್ಚಿಸಿ ನಿರ್ಧರಿಸಬೇಕಿದೆ. ಕೊಲ್ಲೀರ ಯು. ಬೋಪಣ್ಣ, ಸಮಾಜ ಸೇವಕ, ಕುಟ್ಟಂದಿ ಗ್ರಾಮ.

**
ಜಂಬೂ ಸವಾರಿ ವೀಕ್ಷಣೆಗೆ ಅವಕಾಶ ಮಾಡುವುದರಿಂದ ಮಡಿಕೇರಿ ದಸರಾಕ್ಕೆ ವಿಶೇಷ ಆಕರ್ಷಣೆಯಾಗಬಹುದು. ಆಚರಣೆ ನಂತರವೂ ಮುಂದುವರಿಸುವ ಬಗ್ಗೆ ಅಂತಿಮ ನಿರ್ಧಾರ ಅವಶ್ಯ. ಮೈಸೂರು ದಸರಾ ಜಂಬೂ ಸವಾರಿಯೊಂದಿಗೆ ಜಿಲ್ಲೆಯಲ್ಲಿಯೂ ಆಚರಿಸಿದ ಹೆಗ್ಗಳಿಕೆ ಬರಲಿದೆ. ಬಿ.ಆರ್. ದಿಲೀಪ್, ಉದ್ಯಮಿ, ಗೋಣಿಕೊಪ್ಪ.

**
ಈ ಹಿಂದೆ ಕೂಡ ಗೋಣಿಕೊಪ್ಪ ದಸರಾದಲ್ಲಿ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಆನೆ ಸವಾರಿ ಮಾಡಿರುವ ಹಿನ್ನೆಲೆ ಇದೆ. ಆದ್ದರಿಂದ ಜಂಬೂ ಸವಾರಿ ಚಿಂತನೆಯನ್ನು ಗೋಣಿಕೊಪ್ಪ ದಸರಾಕ್ಕೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಕೂಡ ಸೂಕ್ತ ಸ್ಪಂದನೆ ನೀಡಬೇಕಿದೆ. ಬಿ.ಎನ್. ಪ್ರಕಾಶ್, ಅಧ್ಯಕ್ಷರು, ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪ.

**
೪೪ ವರ್ಷ ಇತಿಹಾಸ ಹೊಂದಿರುವ ಗೋಣಿಕೊಪ್ಪ ದಸರಾ, ಈ ಬಾರಿ ಹೆಚ್ಚು ಅರ್ಥಪೂರ್ಣವಾಗಿ ನಡೆದಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಮಡಿಕೇರಿ ದಸರಾಕ್ಕೂ ಮಿಗಿಲಾದ ಕಾರ್ಯಕ್ರಮ ನೀಡಲಾಗಿದೆ. ಹೀಗಿರುವಾಗ ಮುಂದಿನ ವರ್ಷಗಳಲ್ಲಿ ಜಂಬೂ ಸವಾರಿ ಸೇರ್ಪಡೆ ಮಾಡಿದರೆ ಸ್ಥಳೀಯರಿಗೂ ಕುಶಿ ತರಲಿದೆ. ಚೈತ್ರಾ ಬಿ. ಚೇತನ್, ಅಧ್ಯಕ್ಷೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net