

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸೇವಾದಳ ಸಮಿತಿಯ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇವಾದಳದ ರಾಜ್ಯ ಮುಖ್ಯ ಸಂಘಟಕ ಎಂ.ರಾಮಚಂದ್ರ, ಭಾರತ್ ಸೇವಾದಳವನ್ನು ೧೯೨೩ ಡಿ.೨೬ ರಂದು ಎನ್.ಎಸ್.ಹಾರ್ಡಿಕರ್ ಅವರು ಸ್ಥಾಪನೆ ಮಾಡಿದ್ದು, ಇದೀಗ ೧೦೦ ವರ್ಷ ಪೂರೈಸುತ್ತಿದೆ. ಶತಮಾನೋತ್ಸವದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅ.೨೯ ರಂದು ಪಾದಯಾತ್ರೆ ಮತ್ತು ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪರವರ ನೇತೃತ್ವದಲ್ಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಆಯೋಜಿಸಲಾಗುವ ಸೇವಾದಳ ಸಮಿತಿಯ ರಾಜ್ಯ ಮಟ್ಟದ ಸಮಾವೇಶ, ಮುಂಬರುವ ಜಿ.ಪಂ, ತಾ.ಪಂ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸೇವಾದಳ ಸಕ್ರಿಯವಾಗುವ ಹಾಗೂ ಜಿಲ್ಲಾ, ಬ್ಲಾಕ್, ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭ ಎಂ.ರಾಮಚಂದ್ರರವರನ್ನು ಸೇವಾದಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ತೆರೆಸಾ ವಿಕ್ಟರ್, ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್, ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಅನಿಶ್ ಅಹಮ್ಮದ್, ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್, ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಸೇವಾದಳದ ಬ್ಲಾಕ್ ಅಧ್ಯಕ್ಷರುಗಳಾದ ಹಯಾತ್, ಡಿಸಿಸಿ ಗೌರವ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಇತರರು ಉಪಸ್ಥಿತರಿದ್ದರು.