

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಚ್ಚರಿಕರ ರಾಜಕೀಯ ವಿದ್ಯಮಾನಗಳಿಗೆ ರಾಜಕೀಯ ರಂಗ ತೆರೆದುಕೊಳ್ಳಲಾರಂಭಿಸಿದೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಲು ಕಾರ್ಯೋನ್ಮುಖರಾಗಿದ್ದಾರೆ.
ಎ.ಎಸ್. ಪೊನ್ನಣ್ಣ ಬೆಂಬಲವಾಗಿ ವಿರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಲಿಸಬಾರದೆಂಬ ಒತ್ತಡ ಕೆಲವು ಮುಖಂಡರಿಂದ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಮಾಜಿ ಸಚಿವ ಎಂ.ಆರ್. ಸೀತಾರಾಮ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡುವ ಪ್ರಯತ್ನ ಉನ್ನತಮಟ್ಟದಲ್ಲಿ ನಡೆದಿದೆ.
ವಿರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಗೆಲ್ಲುವ ಶಕ್ತಿ ಇಲ್ಲ. ಜೆಡಿಎಸ್ ಸ್ಪರ್ಧೆಯಿಂದ ಜಾತ್ಯಾತೀತ ಮತ ವಿಭಜನೆಯಾಗಿ ಬಿಜೆಪಿಗೆ ಲಾಭ
ವಾಗುತ್ತದೆ. ಜಾತ್ಯಾತೀತ ಮತ ವಿಭಜನೆ ಆಗಬಾರದೆಂಬ ಕಾರಣಕ್ಕಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಯೋಚನೆ ಮಾಡುತ್ತಿದ್ದೇನೆಂದು ಸಂಕೇತ್ ಪೂವಯ್ಯ ತಮ್ಮ ಆತ್ಮೀಯರೊಂದಿಗೆ ಹೇಳಿಕೊಂಡಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಸಂಕೇತ್ ಕಳೆದ ಬಾರಿ ವಿರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ೧೧ ಸಾವಿರ ಮತ ಪಡೆದಿದ್ದರು. ತದನಂತರ ರಾಜಕೀಯವಾಗಿ ತಟಸ್ಥರಾಗಿದ್ದರು. ಕೆಲವು ತಿಂಗಳ ಹಿಂದೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುದ್ದೆಯೊಂದಿಗೆ ರಾಜ್ಯ ವಕ್ತಾರನ್ನಾಗಿ ನೇಮಕ ಮಾಡಲಾಗಿತ್ತು. ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೂಡ ನಿರ್ವಹಿಸುತ್ತಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿವವರಿಂದ ಕ್ಷೇತ್ರದ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಸಂಸ್ಥೆಯಿಂದ ಕೇಂದ್ರದವರೆಗೂ ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ಕುಂದುಕೊರತೆ ನಿವಾರಣೆಯಾಗಿಲ್ಲ. ಕಾಫಿ ಉದ್ದಿಮೆ, ವನ್ಯಜೀವಿ ಸಂಘರ್ಷ ಬಗ್ಗೆ ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆದಿಲ್ಲ. ನಮ್ಮ ಪ್ರತಿನಿಧಿ ಶಾಸನ ಸಭೆಯಲ್ಲಿ ಕ್ಷೇತ್ರದ ಸಮಸ್ಯೆ ಬಗ್ಗೆ ಗಟ್ಟಿಧ್ವನಿ ಮೊಳಗಿಸುತ್ತಿಲ್ಲ ಎಂದು ಸಂಕೇತ್ ಪೂವಯ್ಯ ಬೇಸರ ವ್ಯಕ್ತ ಪಡಿಸುತ್ತಾರೆ.
ನಾಪಂಡ ಮುತ್ತಪ್ಪ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಾರಂಭಿಸಿದ ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ನಾಪಂಡ ಮುತ್ತಪ್ಪಗೆ ನೀಡಿದ ನೋಟೀಸ್‌ಗೆ ಇನ್ನೂ ಉತ್ತರ ಬಂದಿಲ್ಲ. ಮುಂದೇನು ಮಾಡ ಬೇಕೆಂದು ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೇಳುವುದಾಗಿ ಗಣೇಶ್ ಹೇಳುತ್ತಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲು ಒಳ್ಳೆಯ ಸಮಯಕ್ಕಾಗಿ ಕಾಯುತ್ತಿರುವ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಅವರೊಂದಿಗೆ ಗಣೇಶ್ ಹಲವು ವರ್ಷದಿಂದ ಆಪ್ತ ಒಡನಾಟ ಹೊಂದಿದ್ದಾರೆ. ತಮ್ಮೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ವಿಶ್ವನಾಥ್ ಆಹ್ವಾನಿಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ವರಿಷ್ಠರೊಂದಿಗೆ ಚರ್ಚೆ
ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣಗೆ ಬೆಂಬಲವಾಗಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಬಾರದೆಂದು ಜೆಡಿಎಸ್ ವರಿಷ್ಠ ನಾಯಕರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಗಮನ ಸೆಳೆಯಲು ಫೆ.೧೮ ರಂದು ಬೆಂಗಳೂರಿಗೆ ತೆರಳಲು ಸಂಕೇತ್ ಪೂವಯ್ಯ ನಿರ್ಧರಿಸಿದ್ದಾರೆ. ಅಭ್ಯರ್ಥಿ ಹಾಕುವುದಾದ್ದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ವರಿಷ್ಠರಿಗೆ ನೇರವಾಗಿ ಹೇಳಲು ತೀರ್ಮಾನಿಸಿದ್ದಾರೆ.
ಫೆ.೨೨ ರಂದು ವಿರಾಜಪೇಟೆಯಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ಆಯೋಜಿಸುವುದರ ಮೂಲಕ ಸಂಕೇತ್ ಪೂವಯ್ಯ ಅವರನ್ನು ಕಾಂಗ್ರೆಸ್ ಸೇರಿಸಿಕೊಳ್ಳಲು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಆತೂರ ತೋರುತ್ತಿದ್ದಾರೆ. ೩ ದಶಕದ ರಾಜಕೀಯ ನೈಪುಣ್ಯ ಹೊಂದಿರುವ ಸಂಕೇತ್ ಪೂವಯ್ಯ ಒಂದಿಷ್ಟು ಕಾಲಾವಕಾಶ ಕೇಳುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಹರೀಶ್ ಬೋಪಣ್ಣಗೆ ಟಿಕೆಟ್
ವಿರಾಜಪೇಟೆ ಕ್ಷೇತ್ರದಲ್ಲಿ ಕದ್ದಣಿಯಂಡ ಹರೀಶ್ ಬೋಪಣ್ಣಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠರು ಆಸಕ್ತಿ ಹೊಂದಿದ್ದಾರೆ. ವರಿಷ್ಠ ನಾಯಕರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಹರೀಶ್ ಬೋಪಣ್ಣ ಮಾತುಕತೆ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುವ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ಜೆಡಿಎಸ್ ಅಭ್ಯರ್ಥಿಯಾಗಲು ಒತ್ತಡ ಇರುವುದು ನಿಜ ಎಂದು ತಮ್ಮ ಆತ್ಮೀಯರೊಂದಿಗೆ ಹೇಳಿಕೊಂಡಿದ್ದಾರೆ.
ಎಂ.ಆರ್. ಸೀತಾರಾಮ್ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಆಪ್ತ ಸಹಾಯಕರಾಗಿ ವಿರಾಜಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವುದರ ಮೂಲಕ ಜನಮೆಚ್ಚುಗೆಗೆ ಭಾಜನರಾಗಿದ್ದಾರೆ. ಸೀತಾರಾಮ್ ಒಡನಾಟ ತೊರೆದು ಜೆಡಿಎಸ್ ಸೇರಲು ಸಾಧ್ಯ ವಾಗದ ತೊಳಲಾಟಕ್ಕೆ ಹರೀಶ್ ಬೋಪಣ್ಣ ಸಿಲುಕಿದ್ದಾರೆ.
ಕೊಡವ ಸಮುದಾಯಕ್ಕೆ ಸೇರಿದ ಹರೀಶ್ ಬೋಪಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಲ್ಲಿ ಕೊಡವರ ಒಂದಿಷ್ಟು ಮತ ಸೆಳೆಯುವ ಸಾಧ್ಯತೆ ಇದೆ. ಆದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಸಂಘಟನಾತ್ಮಕವಾಗಿ ದುರ್ಬಲವಾಗಿದ್ದು, ಅಲ್ಪಾವಧಿಯಲ್ಲಿ ಪಕ್ಷ ಸಂಘಟನೆ ಮಾಡಲು ಎಷ್ಟರಮಟ್ಟಿಗೆ ಸಾಧ್ಯ ಎಂಬ ಚರ್ಚೆ ನಡೆದಿದೆ.
**
ವಿರಾಜಪೇಟೆ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದಾರೆ. ಎ.ಎಸ್. ಪೊನ್ನಣ್ಣ ಶಕ್ತಿಶಾಲಿ ಅಭ್ಯರ್ಥಿ ಹಾಗೂ ಕ್ಷೇತ್ರದ ಕುಂದುಕೊರತೆ ನಿವಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೆಡಿಎಸ್ ರಾಜ್ಯದ ೨೨೪ ಕ್ಷೇತ್ರಕ್ಕೂ ಅಭ್ಯರ್ಥಿ ಹಾಕಲಿದ್ದಾರೆ. ಈ ಸಂದರ್ಭ ಜೆಡಿಎಸ್‌ನಲ್ಲಿದ್ದ ಪೊನ್ನಣ್ಣಗೆ ಬೆಂಬಲ ವ್ಯಕ್ತ ಪಡಿಸುವುದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ಅದಕ್ಕಾಗಿ ನಾಯಕರ ಒಪ್ಪಿಗೆ ಪಡೆದು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಮೇರಿಯಂಡ ಸಂಕೇತ್ ಪೂವಯ್ಯ, ರಾಜ್ಯ ಕಾರ್ಯದರ್ಶಿ, ಜೆಡಿಎಸ್.
**
ಸಂಕೇತ್ ಪೂವಯ್ಯ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಷಯದ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ. ಎಚ್.ಡಿ. ಕುಮಾರಸ್ವಾಮಿ ನಾಯಕತ್ವದ ಮೇಲೆ ವಿಶ್ವಾಸ ಹೊಂದಿರುವ ನಾನು ಜೆಡಿಎಸ್ ತೊರೆಯುವ ಯೋಚನೆ ಮಾಡಿಲ್ಲ. ಅಡಗೂರು ಎಚ್. ವಿಶ್ವನಾಥ್ ಕಾಂಗ್ರೆಸ್ ಸೇರಲು ಆಹ್ವಾನಿಸಿರುವುದು ನಿಜ. ಕೆ.ಎಂ. ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು.