ಡಿ೧೦, ೧೧ ರಂದು ಕೊಡಗು ಕಾಫಿ ಮೇಳ

5adarshkdga6
Published on

ಮಡಿಕೇರಿ: ಡಿ೧೦ ಮತ್ತು ೧೧ ರಂದು ಕೊಡಗು ಕಾಫಿ ಮೇಳವು ನಗರದ ರಾಜಾಸೀಟಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ತಿಳಿಸಿದ್ದಾರೆ.


ನಗರದ ದಾಸವಾಳ ರಸ್ತೆಯಲ್ಲಿರುವ ಕಾಫಿ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಡಿಸೆಂಬರ್ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಗ್ರೇಟರ್ ರಾಜಸೀಟಿನಲ್ಲಿ ಕೊಡಗು ಕಾಫಿ ಮೇಳವನ್ನು ಆಯೋಜಿಸಲಾಗಿದೆ. ವಾರಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜಸೀಟಿಗೆ ಭೇಟಿ ನೀಡುತ್ತಾರೆ. ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೊಡಗು ಕಾಫಿ ಮೇಳ ಆಯೋಜಿಸಲಾಗಿದೆ ಎಂದರು.


ಕೊಡಗು ಜಿಲ್ಲೆಯಲ್ಲಿ ಉತ್ಕೃಷ್ಟ ಕಾಫಿ ಬೆಳೆ ಬೆಳೆಯುತ್ತಿದೆ. ಈ ಕಾಫಿ ಬೆಳೆಯಿಂದ ಕಾಫಿ ಉತ್ಪಾದನೆ ಮತ್ತು ಮಾರಾಟ, ಕಾಫಿ ಬೀಜದಿಂದ ಚಿಕೋರಿ ಬಳಸಿ ಕಾಫಿ ಪುಡಿ ಮಾಡುವುದು ಹೀಗೆ ಪ್ರತಿ ಹಂತದಲ್ಲಿ ವಿವರಿಸಲಾಗುತ್ತದೆ. ಕೊಡಗಿನ ಕಾಫಿಯನ್ನು ಎಲ್ಲೆಡೆ ಪರಿಚಯಿಸುವುದು ಮೇಳದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಕೊಡಗು ಜಿಲ್ಲೆಯಿಂದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕಾಫಿ ಬೆಳೆ ಆಯ್ಕೆಯಾಗಿದ್ದು, ಕಾಫಿ ಬೆಳೆಗೆ ಮತ್ತಷ್ಟು ಮಾರುಕಟ್ಟೆ ಒದಗಿಸಬೇಕಿದೆ. ಕಾಫಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಇದುವರೆಗೆ ೧೨ ಕೋಟಿ ರೂ ಪರಿಹಾರ ಪಾವತಿಸಲಾಗಿದೆ. ೪೭೯ ರೈತರಿಗೆ ಕಾಫಿ ಬೆಳೆ ಪರಿಹಾರ ವಿತರಿಸಲಾಗಿದೆ ಎಂದರು.


ರಾಜಾಸೀಟು ಬಳಿ ಇರುವ ಕೂರ್ಗ್ ವಿಲೇಜ್‌ಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳ ಕ್ರೀಯಾಶೀಲ ಚಟುವಟಿಕೆಗೆ ಒತ್ತು ನೀಡಲಾಗುವುದು. ನೆಹರು ಮಂಟದಲ್ಲಿ ಬೆಳಗ್ಗೆ ೮ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜಸೀಟಿನಿಂದ ನೆಹರು ಮಂಟಪವರೆಗೆ ಕೇಬಲ್ ರೋಪ್ ಅಳವಡಿಸುವ ಚಿಂತನೆ ಇದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಈ ಕಾರ್ಯ ಆಗಬಹುದು ಎಂದು ತಿಳಿಸಿದರು.


ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕೊಡಗು ಕಾಫಿ ಮೇಳ ಇದೇ ಮೊದಲ ಬಾರಿಗೆ ರಾಜಸೀಟಿನಲ್ಲಿ ನಡೆಯುತ್ತಿದೆ. ಕೊಡಗು ಕಾಫಿ ಮೇಳದಲ್ಲಿ ಸ್ಟಾಲ್ ನಿರ್ಮಾಣಕ್ಕೆ ಕನಿಷ್ಠ ೫ ರಿಂದ ೧೫ ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ (೯೪೮೩೧೧೦೬೨೧), ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಅಜಿತ್ ಕುಮಾರ್ ರಾವುತ್(೭೦೦೮೮೫೯೨೦೪) ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net