

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಗಡ ಪತ್ರದಲ್ಲಿ ಕೊಡವ ಜನಾಂಗದ ಅಭಿವೃದ್ಧಿಗೆ ಘೋಷಿಸಿರುವ ೧೦ ಕೋಟಿ ರೂಪಾಯಿ ಅನುದಾನ ಬಳಕೆಗೆ ಸಂಬಂಧಿಸಿದ್ದಂತೆ ಭಿನ್ನಾಭಿಪ್ರಾಯ ಮೂಡಿದೆ. ಅನುದಾನ ಹಂಚಿಕೆಗೆ ಸಂಬಂಧಿಸಿದ್ದಂತೆ ಶಾಸಕರು ಹಾಗೂ ಬಿಜೆಪಿ ಮುಖಂಡರಿಂದ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.
ಮುಂಗಡ ಪತ್ರದಲ್ಲಿ ಘೋಷಿಸಿದ್ದ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಲು ಸರ್ಕಾರ ಮುಂದಾಗಿದೆ. ಈ ಅನುದಾನ ವನ್ನು ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ತರಲಾಗಿದೆ. ಈ ಅನುದಾನ ಬಳಕೆಗೆ ಸಂಬಂಧಿಸಿದ್ದಂತೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬೆಂಗಳೂರಿನಲ್ಲಿ ಕರೆದಿದ್ದ ಸಭೆಯಲ್ಲಿ ಶಾಸಕರು ಹಾಗೂ ಬಿಜೆಪಿ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ.
ಕೊಡವರ ಐನ್‌ಮನೆಗಳಿಗೆ ತಲಾ ೫ ಲಕ್ಷ ರೂ. ಯಂತೆ ೫ ಕೋಟಿ ರೂ. ವಿನಿಯೋಗಿಸಬೇಕು. ಉಳಿದ ಹಣವನ್ನು ಕೊಡವ ಸಮಾಜಗಳ ಅಭಿವೃದ್ಧಿಗೆ ವಿನಿಯೋಗಿಸಬೇಕೆಂಬ ಪಕ್ಷದ ಅಭಿಪ್ರಾಯವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ನೇತೃತ್ವದ ಬಿಜೆಪಿ ಕೊಡವ ಮುಖಂಡರ ನಿಯೋಗ ಸಚಿವರ ಗಮನಕ್ಕೆ ತಂದಿದೆ.
ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಒಂದಿಷ್ಟು ಅನುದಾನವನ್ನು ಕೊಡವ ಸಮಾಜಗಳಿಗೆ ನೀಡಬೇಕೆಂಬ ಅಭಿಪ್ರಾಯವನ್ನು ಒಬ್ಬ ಜನಪ್ರತಿನಿಧಿ ವ್ಯಕ್ತ ಪಡಿಸಿದರು. ಶಿಕ್ಷಣ, ವೈಯುಕ್ತಿಕವಾಗಿ ಕೊಳವೆ ಬಾವಿ ನಿರ್ಮಾಣ ಸೇರಿದ್ದಂತೆ ವೈಯುಕ್ತಿಕ ಸವಲತ್ತು ಒದಗಿಸಲು ಅನುದಾನ ಒದಗಿಸುವ ಅಭಿಪ್ರಾಯವನ್ನು ಮತ್ತೊಬ್ಬ ಜನಪ್ರತಿನಿಧಿ ವ್ಯಕ್ತ ಪಡಿಸಿ ದರು.
ಕೊಡವ ಸಮಾಜಗಳ ಒಕ್ಕೂಟ ಕೈಗೆತ್ತಿಕೊಂಡಿರುವ ಸರ್ವಾಂಗೀಣ ಅಭಿವೃದ್ಧಿಗೆ ವಿನಿಯೋಗಿಸುವುದು ಸೂಕ್ತ. ಮುಂದ್ ಮನೆ, ಕೊಡವ ಸಾಂಸ್ಕೃತಿಕ ಮ್ಯೂಸಿಯಂ, ಕೊಡವ ಸಾಂಸ್ಕೃತಿಕ ಲೋಕ ಸ್ಥಾಪಿಸಲು ಅನುದಾನ ಒದಗಿಸುವಂತೆ ಜನಪ್ರತಿನಿಧಿಯೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಶಾಸಕರು- ಬಿಜೆಪಿ ಮುಖಂಡರ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಅನುದಾನಕ್ಕೆ ಸಂಬಂಧಿಸಿದ್ದಂತೆ ಮೂಡಿರುವ ಭಿನ್ನಾಭಿಪ್ರಾಯದ ಬಗ್ಗೆ ಕೊಡವ ಜನಾಂಗ ಹಾಗೂ ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆ ನಡೆಯುತ್ತಿದೆ.
ಶಾಸಕರು ಹಾಗೂ ಬಿಜೆಪಿ ಕೊಡವ ಮುಖಂಡರ ಭಿನ್ನಾಭಿಪ್ರಾಯದಿಂದ ಅನುದಾನ ಬಳಕೆಗೆ ಸಂಬಂಧಿಸಿದ್ದಂತೆ ಸಚಿವರ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಮುಂದೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಸಹಜ ಕುತೂಹಲ ಮೂಡಿದೆ.
ಯುಕೊ ಪ್ರಯತ್ನದ ಫಲ
ಕೊಡವ ಅಭಿವೃದ್ಧಿ ಮಂಡಳಿ ರಚನೆಗೆ ಯುನೈಟೆಡ್ ಕೊಡವ ಆರ್ಗನೈಷೇಷನ್ (ಯುಕೊ) ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಸತತ ಪ್ರಯತ್ನ ನಡೆದಿತ್ತು. ವಿವಿಧ ಜನಾಂಗದ ಮಂಡಳಿ ರಚನೆ ಬೇಡಿಕೆ ಬಂದಿದ್ದರಿಂದ ಮುಖ್ಯಮಂತ್ರಿ ಅಂತಿಮ ಕ್ಷಣದಲ್ಲಿ ಕೊಡವ ಅಭಿವೃದ್ಧಿ ಮಂಡಳಿ ರಚಿಸುವ ನಿರ್ಧಾರ ಕೈಬಿಟ್ಟರು. ಆದರೆ, ಮಂಡಳಿ ರಚನೆಗೆ ಯುಕೊ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರಯತ್ನ ದ ಫಲವಾಗಿ ಮುಂಗಡ ಪತ್ರದಲ್ಲಿ ೧೦ ಕೋಟಿ ರೂ. ಅನುದಾನ ಘೋಷಿಸಲಾಯಿತು. ಆದರೆ, ಈ ಅನುದಾನ ಹಂಚಿಕೆಗೆ ಸಂಬಂಧಿಸಿದ್ದಂತೆ ಇದುವರೆಗೂ ಯುಕೊ ಸಂಘಟನೆಯ ಅಭಿಪ್ರಾಯವೇ ಕೇಳಲಿಲ್ಲ.
ಕುಮಾರಸ್ವಾಮಿ ೧೫ ಕೋಟಿ ಘೋಷಣೆ
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಕೊಡವ ಸಮಾಜಗಳಿಗೆ ೧೦ ಕೋಟಿ ಹಾಗೂ ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಹಾಕಿ ಮೈದಾನ ಅಭಿವೃದ್ಧಿಗೆ ೫ ಕೋಟಿ ರೂ. ಘೋಷಿಸಿದ್ದರು. ಆದರೆ, ಈ ಅನುದಾನದಲ್ಲಿ ಇದುವರೆಗೂ ನಯಾಪೈಸೆ ಬಿಡುಗಡೆಯಾಗಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕೊಡವ ಸಮಾಜಗಳಿಗೆ ನೀಡಲು ಉದ್ದೇಶಿಸಿದ್ದ ೧೦ ಕೋಟಿ ರೂ. ಅನುದಾನ ಬಳಕೆಗೆ ಸಂಬಂಧಿಸಿ ದ್ದಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಕೊಡವ ಸಮಾಜಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತೆಂದು ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾಹಿತಿ ನೀಡಿದ್ದಾರೆ.
ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಘೋಷಿಸಿದ್ದ ಅನುದಾನ ಬಳಕೆಗೆ ಸಂಬಂಧಿಸಿದ್ದಂತೆ ಕೊಡವ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಯೂ ಚರ್ಚೆ ನಡೆದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯಿಂದ ನಿರ್ಗಮಿಸಿದ್ದ ಹಿನ್ನೆಲೆಯಲ್ಲಿ ಮುಂಗಡ ಪತ್ರದಲ್ಲಿ ಘೋಷಿಸಿತ ಅನುದಾನ ಪಡೆಯಲು ಸಾಧ್ಯವಾಗಲಿಲ್ಲ.
**
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಗಡ ಪತ್ರದಲ್ಲಿ ಘೋಷಿತ ಅನುದಾನ ಬಳಕೆ ಬಗ್ಗೆ ಚರ್ಚೆ ನಡೆದಿದೆ. ಸಭೆಯಲ್ಲಿ ಪಾಲ್ಗೊಂಡಿದ್ದವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೊಡವ ಸಮಾಜ, ಐನ್‌ಮನೆಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಬಗ್ಗೆ ಚರ್ಚೆ ನಡೆದಿತ್ತು. ಶಾಸಕರು, ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅನುದಾನ ಹಂಚಿಕೆಗೆ ಸಂಬಂಧಿಸಿದ್ದಂತೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾಧ್ಯಕ್ಷರು, ಬಿಜೆಪಿ.
**
ಕೊಡವ ಅಭಿವೃದ್ಧಿ ಮಂಡಳಿ ರಚಿಸಿ, ಮಂಡಳಿ ಮೂಲಕ ಕೊಡವ ಜನಾಂಗದ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಬೇಕು. ಇಲ್ಲದಿದ್ದಲ್ಲಿ ಮುಂಗಡ ಪತ್ರದ ಅನುದಾನ ಸಮರ್ಪಕವಾಗಿ ಬಳಕೆಯಾಗುವುದಿಲ್ಲ. ರಾಜಕೀಯ ಪ್ರೇರಿತವಾಗಿ ಅನುದಾನ ಹಂಚಿಕೆ ಮಾಡುವುದರಿಂದ ಜನಾಂಗಕ್ಕೆ ಪ್ರಯೋಜನವಾಗುವುದಿಲ್ಲ. ಕೊಕ್ಕಲೇಮಾಡ ಮಂಜು ಚಿಣ್ಣಪ್ಪ, ಅಧ್ಯಕ್ಷರು, ಯುಕೊ.
**
ಕೊಡಗಿನ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಬೇಕು. ಕೊಡವ ಭಾಷೆ, ಸಂಸ್ಕೃತಿ ಏಳಿಗೆಗೆ ಅಗತ್ಯ ಯೋಜನೆ ರೂಪಿಸಬೇಕು. ೮ನೇ ಪರಿಚ್ಛೇದಕ್ಕೆ ಸೇರಿಸುವುದು, ಕೊಡವ ಭಾಷೆ ಕಲಿಕೆಗೂ ಯೋಜನೆ ರೂಪಿಸಬೇಕು. ಕೊಡವ ಸಮಾಜಗಳಿಗೂ ಅನುದಾನ ಒದಗಿಸ ಬೇಕು. ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಅಧ್ಯಕ್ಷರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ.