

ಮಡಿಕೇರಿ: ಆಲೋಚನಾ ವಿಧಾನ ವೃದ್ಧಿ ಮಾಡುವುದೇ ಶಿಕ್ಷಣ. ಖಚಿತತೆಯ ದಾರಿಯಲ್ಲಿ ಸಾಗುವ ಗುಣ ರೂಢಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಕೊಳ್ಳಬೇಕೆಂದು ಸಾಹಿತಿ ಚೆಟ್ನಳ್ಳಿ ಮಹೇಶ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ’ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ ೨೦೨೨’ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದರು.
ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು. ವಿದ್ಯೆ ಕೈ ವಶವಾದರೆ ಸಮಾಜದಲ್ಲಿ ಮಾತ್ರವಲ್ಲದೆ ದೇವರಿಗೂ ಅರ್ಪಿತನಾಗುತ್ತಾನೆ. ನಾಗರೀಕತೆಯ ಪ್ರತೀಕವಾದ ಗುಣಲಕ್ಷಣ ಹೊಂದಿರುವ ಮನುಷ್ಯ ಸಂಸ್ಕೃತಿಗಳ ಮೌಲ್ಯ ಮರೆಯುತ್ತಿದ್ದಾನೆ.
ತಿಳುವಳಿಕೆ ಮತ್ತು ನಡವಳಿಕೆ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಸಂವಹನದ ಮುಖಾಂತರ ಪರಿಚಯ ಮಾಡಿಕೊಡುವ ಜವಾಬ್ದಾರಿ ಮತ್ತು ಎಚ್ಚರಿಕೆ ಇರಬೇಕಂದರು.
ಸ್ಫೂರ್ತಿಯ ಚಿಲುಮೆ ಬತ್ತಿ ಹೋಗಬಾರದು. ಬದುಕಿನ ಅರಿವಿನ ವಿಸ್ತಾರವಾಗುವುದು ಹಿರಿಯರ ಒಡನಾಟದಿಂದ ಮಾತ್ರ. ಹಿರಿಯರು ಒಂದು ವಿಶ್ವಕೋಶದಂತೆ. ಸಂಸ್ಕೃತಿಯ ಪುನರ್ ನಿರ್ಮಾಣ ಆಗಬೇಕು. ಚರಿತ್ರೆಯ, ಸಂಸ್ಕೃತಿಯ ನೆನಪು ಇರಬೇಕು. ಪ್ರತಿಭೆಯನ್ನು ಒಳಗೊಂಡಿರುವ ವಿದ್ಯಾರ್ಥಿಗಳನ್ನು ಸೂಕ್ತ ದಾರಿಗೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಶಿಕ್ಷಕನದೆಂದರು.
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ನಿರ್ದೇಶಕ ಪ್ರೊ.ಕೆ.ಎಸ್. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಕೊಡಗು ವಿಶ್ವವಿದ್ಯಾನಿಲಯ ಆಗುವುದಕ್ಕೆ ಬೇಕಾಗುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಹೊಂದಿದೆ. ನಮ್ಮ ಸಂಸ್ಥೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಉನ್ನತ ವ್ಯಾಸಂಗ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆಂದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ಕೆ. ಕೆ.ಧರ್ಮಪ್ಪ ವಾರ್ಷಿಕ ವರದಿ ವಾಚಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಿತಿ ಸಂಯೋಜಕ ರಾಜಕುಮಾರ್ ಮೇಟಿ, ದೈಹಿಕ ಶಿಕ್ಷಕ ಎಚ್.ಆರ್. ವಿಜಯ್ ಮತ್ತಿತರರು ಇದ್ದರು.