

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತ. ಚುನಾವಣಾ ಆಯೋಗ ಚುನಾವಣೆಗೆ ಸಿದ್ಧತೆ ಪ್ರಾರಂಭಿಸಿದೆ. ಏತನ್ಮಧ್ಯೆ, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಟಿಕೆಟ್ ಆಕಾಂಕ್ಷಿಗಳು ವರಿಷ್ಠರ ವಿಶ್ವಾಸ ಸಂಪಾದಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ವಿವಿಧ ಜಿಲ್ಲೆಗಳಿಗೆ ರಾಷ್ಟ್ರ- ರಾಜ್ಯಮಟ್ಟದ ನಾಯಕರು ಭೇಟಿ ನೀಡುವುದರ ಮೂಲಕ ಚುನಾವಣಾ ಕಣ ರಂಗೇರುವಂತೆ ಮಾಡಿದೆ. ಆದರೆ, ಇದುವರೆಗೂ ಕೊಡಗಿಗೆ ಯಾವ ಪಕ್ಷದ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ನಾಯಕರು ಆಗಮಿಸಲಿಲ್ಲ. ಪಕ್ಷಗಳಿಂದ ಸಮಾವೇಶಗಳೂ ಆಯೋಜನೆಗೊಂಡಿಲ್ಲ. ಚುನಾವಣಾ ಕಣ ರಂಗೇರುವಂತೆ ಮಾಡಲು ರಾಷ್ಟ್ರ- ರಾಜ್ಯಮಟ್ಟದ ನಾಯಕರು ಆಗಮಿಸ ಬೇಕೆಂಬ ನಿರೀಕ್ಷೆಯಲ್ಲಿ ಪಕ್ಷದ ಮುಖಂಡರು- ಕಾರ್ಯಕರ್ತರು, ಬೆಂಬಲಿಗರು ಇದ್ದಾರೆ.
ಮಳೆಯಿಂದ ಎದುರಾಗಿದ್ದ ಕಷ್ಟನಷ್ಟದ ಮಾಹಿತಿ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದರು. ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಅವರು ತೆರಳುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಯಿತು. ಬಿಜೆಪಿ- ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆಯಾಗಿತ್ತು.
ಸಿದ್ದರಾಮಯ್ಯ ನೇತೃತ್ವದಲ್ಲಿ ಮಡಿಕೇರಿ ಚಲೋ ಹಾಗೂ ಮಡಿಕೇರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಸಲು ಮುಂದಾಗಿತ್ತು. ಒಂದೇ ದಿನ ಎರಡೂ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಉದ್ವಿಗ್ನಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರುವುದರ ಮೂಲಕ ಬಿಜೆಪಿ- ಕಾಂಗ್ರೆಸ್ ರಾಜಕೀಯ ಸಂಘರ್ಷಕ್ಕೆ ತಡೆವೊಡ್ಡಿತ್ತು. ತದನಂತರ ಪರ- ವಿರುದ್ಧದ ರಾಜಕೀಯ ಹೇಳಿಕೆಗೆ ಸೀಮಿತಗೊಂಡಿತ್ತು.
ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್ಸಿನಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಪ್ರತಿನಿಧಿಸುತ್ತಿರುವ ಹಾಲಿ ಶಾಸಕದ್ವಯರು ಮತ್ತೊಂದು ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಹೊಸಮುಖಕ್ಕೆ ಅವಕಾಶ ಸಿಗಬಹು ದೆಂಬ ನಿರೀಕ್ಷೆಯಲ್ಲಿ ೨ನೇ ಸಾಲಿನ ನಾಯಕರು ಆಶಾಭಾವನೆಯಲ್ಲಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಘಟಾನುಘಟಿ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಒಮ್ಮತ್ತದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಟಿಕೆಟ್ ವಂಚಿತರು ಅನ್ಯ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಅಪಾಯ ಕಾಂಗ್ರೆಸ್ ಎದುರಿಸುತ್ತಿದೆ.
ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಪಂಡ ಮುತ್ತಪ್ಪ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಕಾಂಗ್ರೆಸ್ ಟಿಕೆಟ್ ವಂಚಿತರಿಗೆ ವರಿಷ್ಠರು ಅವಕಾಶ ಕಲ್ಪಿಸಿದ್ದಲ್ಲಿ ಮುತ್ತಪ್ಪ ಸ್ಪರ್ಧೆಯಿಂದ ಹಿಂದೆ ಸರಿಯುವ ಅನಿವಾರ್ಯತೆ ಎದುರಾಗಬಹುದು ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು.
ವಿರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಖಂಡ ನಾಪೋಕ್ಲುವಿನ ಮನ್ಸೂರ್ ಆಲಿ, ವಿರಾಜಪೇಟೆ ಕ್ಷೇತ್ರದ ಅಧ್ಯಕ್ಷ ಪಿ.ಜಿ. ಮಂಜುನಾಥ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ದುರ್ಬಲವಾಗಿರುವುದರಿಂದ ಕಾಂಗ್ರೆಸ್ಸಿಂದ ಕಾನೂನು ತಜ್ಞ
ಎ.ಎಸ್. ಪೊನ್ನಣ್ಣ ಸ್ಪರ್ಧಿಸಿದ್ದಲ್ಲಿ ಅವರಿಗೆ ಬೆಂಬಲ ನೀಡುವ ಕುರಿತು ಚರ್ಚೆ ನಡೆದಿದೆ.
ಬಿಜೆಪಿ ಮೋರ್ಚಾ ಸಮಾವೇಶ
ಮಾರ್ಚ್ ೧೫ ರೊಳಗೆ ಬಿಜೆಪಿ ವಿವಿಧ ಮೋರ್ಚಾಗಳ ಜಿಲ್ಲಾಮಟ್ಟದ ಸಮಾವೇಶ ಆಯೋಜಿಸುವುದರ ಮೂಲಕ ಚುನಾವಣೆಗೆ ಸಿದ್ಧತೆ ಮಾಡಲು ಚರ್ಚಿಸಲಾಗಿದೆ. ಯುವ ಮೋರ್ಚಾ, ಮಹಿಳಾ ಮೋರ್ಚಾ, ಒಬಿಸಿ ಮೋರ್ಚಾ, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಮೋರ್ಚಾ, ವೈದ್ಯಕೀಯ ಪ್ರಕೋಷ್ಠ ಸೇರಿದ್ದಂತೆ ವಿವಿಧ ಮೋರ್ಚಾಗಳ ಸಮಾವೇಶ ವಿವಿಧೆಡೆಯಲ್ಲಿ ಆಯೋಜಿಸಲು ಉದ್ದೇಶಿಸ ಲಾಗಿದೆ.
ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಡಗಿಗೆ ಬರುವಂತೆ ಮಾಡಲು ಜಿಲ್ಲೆಯ ಮುಖಂಡರು ರಾಜ್ಯ ಮುಖಂಡರ ಗಮನ ಸೆಳೆದಿದ್ದಾರೆ. ಮೋದಿ ಅಥವಾ ಯೋಗಿ ಬಂದು ಹೋದರೆ ಒಳ್ಳೆಯದೆಂಬ ಭಾವನೆ ಜಿಲ್ಲಾ ಬಿಜೆಪಿ ಮುಖಂಡರಲ್ಲಿದೆ.
ಜೆಡಿಎಸ್ ಪಂಚರತ್ನ ರಥಯಾತ್ರೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಮಾರ್ಚ್ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಚರಿಸ ಲಿದೆ. ಅದಕ್ಕೂ ಮೊದಲು ಕೊಡಗಿನಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಆಯೋಜಿಸಲು ಜೆಡಿಎಸ್ ಜಿಲ್ಲಾ ಮುಖಂಡರು ನಿರ್ಧರಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರ ಸದಸ್ಯ ಪ್ರಜ್ವಲ್ ರೇವಣ್ಣ ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಪಾಲ್ಗೊಂಡಿರಲಿಲ್ಲ. ಅದಕ್ಕೂ ಮೊದಲು ಸಮಾವೇಶ ರದ್ದು ಪಡಿಸುವಂತೆ ಹಾಗೂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಮಡಿಕೇರಿ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪಗೆ ಜಿಲ್ಲಾಧ್ಯಕ್ಷರು ನೋಟೀಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರಜ್ವಲ್ ರೇವಣ್ಣ ಬಹಿರಂಗವಾಗಿ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು.
ನಾಪಂಡ ಮುತ್ತಪ್ಪ ಅವರಿಗೆ ನೀಡಿದ ನೋಟೀಸ್‌ಗೆ ಇದುವರೆಗೂ ಉತ್ತರ ನೀಡಿಲ್ಲ. ಈ ಬಗ್ಗೆ ಮುಂದೇನು ಮಾಡಬೇಕೆಂದು ವರಿಷ್ಠ ರನ್ನು ಕೇಳುತ್ತೇನೆ. ಅಭ್ಯರ್ಥಿ ಆಯ್ಕೆಯಾದ್ದಲ್ಲಿ ನಮ್ಮಲ್ಲಿರುವ ಗೊಂದಲ ನಿವಾರಣೆಯಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಹೇಳುತ್ತಾರೆ.
ಡಿಸಿಸಿ ಸಭೆ ಬಳಿಕ ನಿರ್ಧಾರ
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅಧ್ಯಕ್ಷತೆಯಲ್ಲಿ ಫೆ.೧೫ ರಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರನ್ನು ಆಹ್ವಾನಿಸುವುದು, ಸಮಾವೇಶ ಆಯೋಜಿಸುವ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ.
ರಾಹುಲ್ ಗಾಂಧಿ ಪಾದಯಾತ್ರೆ ವೇಳೆ ಚಾಮರಾಜನಗರ ಜಿಲ್ಲೆಗೆ ಕೊಡಗಿನಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ತೆರಳಿದ್ದರು. ರಾಜ್ಯದ ವಿವಿಧೆಡೆಯಲ್ಲಿ ಸಂಚರಿಸುತ್ತಿರುವ ಪ್ರಜಾಪ್ರತಿನಿಧಿ ಯಾತ್ರೆ ಕೊಡಗಿಗೆ ಆಗಮಿಸಲಿಲ್ಲ. ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರು ಇದುವರೆಗೂ ಕೂಡ ಕೊಡಗಿಗೆ ಆಗಮಿಸಿಲ್ಲ.
ಕ್ಷೇತ್ರ ವ್ಯಾಪ್ತಿಗೆ ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರು ಆಗಮಿಸುವ ನಿರೀಕ್ಷೆಯಲ್ಲಿ ಮುಖಂಡರು- ಕಾರ್ಯಕರ್ತರಿದ್ದಾರೆ. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿರುವ ಡಾ.ಮಂಥರ್ ಗೌಡ, ಹರಪಳ್ಳಿ ರವೀಂದ್ರ, ಎ.ಎಸ್. ಪೊನ್ನಣ್ಣ
ವೈಯುಕ್ತಿಕ ನೆಲೆಗಟ್ಟಿನಲ್ಲಿ ದೊಡ್ಡಮಟ್ಟದ ಖರ್ಚು ಮಾಡುತ್ತಿದ್ದಾರೆ.
**
ಮಾರ್ಚ್ ೧೫ ರೊಳಗೆ ಬಿಜೆಪಿಯ ವಿವಿಧ ಮೋರ್ಚಾಗಳ ಜಿಲ್ಲಾಮಟ್ಟದ ಸಮಾವೇಶ ಆಯೋಜಿಸಲಾಗುವುದು. ರಾಷ್ಟ್ರ- ರಾಜ್ಯಮಟ್ಟ ದ ನಾಯಕರು ಕೊಡಗು ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮ ನಿಗದಿಯಾಗಿಲ್ಲ. ಚುನಾವಣೆಗೆ ಮುನ್ನ ಮೋದಿ- ಯೋಗಿ ಪೈಕಿ ಒಬ್ಬರು ಬಂದಲ್ಲಿ ಒಳ್ಳೆಯದೆಂಬ ಭಾವನೆ ನಮ್ಮದಾಗಿದೆ. ಪಳೆಯಂಡ ರಾಬಿನ್ ದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರು.
**
ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಶೀಘ್ರ ಆಯೋಜಿಸಲಾಗುವುದು. ಮಡಿಕೇರಿ, ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಘೋಷಣೆ ಯಾದ್ದಲ್ಲಿ ಪಕ್ಷದೊಳಗೆ ಇರುವ ಗೊಂದಲ ನಿವಾರಣೆಯಾಗಲಿದೆ. ಕೆ.ಎಂ.ಬಿ. ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು.
**
ಫೆಬ್ರವರಿ ೧೫ ರಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತದೆ. ತದನಂತರ ರಾಷ್ಟ್ರೀಯ, ರಾಜ್ಯ ನಾಯಕರನ್ನು ಕೊಡಗಿಗೆ ಆಹ್ವಾನಿಸಲಾಗುತ್ತದೆ. ಕಾರ್ಯಕರ್ತರಲ್ಲಿ ಹುರುಪು ತುಂಬಲು ಸಮಾವೇಶಗಳನ್ನು ಆಯೋಜಿಸಲಾಗುತ್ತದೆ. ತೆನ್ನೀರ ಮೈನಾ, ಕಾಂಗ್ರೆಸ್ ಜಿಲ್ಲಾ ವಕ್ತಾರ.