

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಜೇನು ಖರೀದಿಯಲ್ಲಿ ನಡೆದಿರುವ ಕಮಿಷನ್ ವ್ಯವಹಾರ ಮುಚ್ಚಿ ಹಾಕಲು ರಾಜಕೀಯ ಪ್ರಭಾವ ಬೀರಲಾರಂಭಿಸಿದ್ದಾರೆ. ಸ್ವಪಕ್ಷೀಯರೆಂಬ ರಾಜಕೀಯ ದಾಳ ಉರುಳಿಸುವುದರ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ’ದೊಡ್ಡವರ’ ಸಹಾಯ ಪಡೆಯಲಾಗಿದೆ.
ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ೧೦.೩೦ ಗಂಟೆಗೆ ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಅಧ್ಯಕ್ಷತೆಯಲ್ಲಿ ಜೇನು ಕೃಷಿಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಪ್ರಾರಂಭವಾಗಲಿದೆ. ಜೇನು ಖರೀದಿ ಅವ್ಯವಹಾರ ಕುರಿತು ಚರ್ಚಿಸಲು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ರಾಜೀವ್ ಕಳುಹಿಸಿರುವ ಠರಾವು ಬಗ್ಗೆ ಕುತೂಹಲ ಮೂಡಿದೆ.
ಠರಾವು ಮಂಡನೆ ವೇಳೆ ಜೇನು ಕೃಷಿಕರ ಸಹಕಾರ ಸಂಘದ ಅಸ್ತಿತ್ವಕ್ಕೆ ಧಕ್ಕೆಯಾಗದ್ದಂತೆ ಹಾಗೂ ಅಧ್ಯಕ್ಷರ ಹೆಸರು ಕೆಡದಂತೆ ನೋಡಿಕೊಳ್ಳ ಬೇಕೆಂಬ ಪ್ರಯತ್ನ ದೊಡ್ಡವರಿಂದ ಪ್ರಾರಂಭವಾಗಿದೆ. ಠರಾವು ಮೇಲೆ ಚರ್ಚಿಸಲು ಸಿದ್ಧತೆ ಮಾಡಿಕೊಂಡಿರುವವರನ್ನು ದೊಡ್ಡವರು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆಂಬ ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ.
ಜೇನು ಸರಬರಾಜು ಮಾಡುತ್ತಿದ್ದಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಶ್ರೀ ದುರ್ಗಾಶಕ್ತಿ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕರಾದ ಎಂ.ಎಚ್. ದೇವರಾಜ್ ಲಿಖಿತವಾಗಿ ಕಮಿಷನ್ ವ್ಯವಹಾರ ಬಹಿರಂಗ ಪಡಿಸಿರುವುದು ಸಂಚಲನ ಮೂಡಿಸಿದೆ. ಕಮಿಷನ್ ವ್ಯವಹಾರ ಬಯಲು ಶಿರೋನಾಮೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸುವುದರ ಮೂಲಕ ಜನತೆ ಮುಂದೆ ಅವ್ಯವಹಾರವನ್ನು ತೆರೆದಿಟ್ಟಿದೆ.
ವಾರ್ಷಿಕ ಮಹಾಸಭೆಯಲ್ಲಿ ಠರಾವು ಮಂಡನೆ ವೇಳೆ ಮಾತಾಡದಂತೆ ಜಿಲ್ಲಾ ಪಂಚಾಯಿತಿ ಭಾಗಮಂಡಲ ಕ್ಷೇತ್ರದ ಮಾಜಿ ಸದಸ್ಯ ಪಿ.ಎಂ. ರಾಜೀವ್, ಭಾಗಮಂಡಲ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಆಮೆ ಬಾಲಕೃಷ್ಣ ಅವರಿಗೆ ದೊಡ್ಡವರು ಕರೆ ಮಾಡಿ ಸೂಚನೆ ನೀಡಿ ದ್ದಾರೆ.
ಕರಿಕೆ ನಿವಾಸದಲ್ಲಿ ಶನಿವಾರ ಬಿಜೆಪಿ ಹಿರಿಯ ಮುಖಂಡ ಕೋಡಿ ಪೊನ್ನಪ್ಪ ಅವರನ್ನು ಭೇಟಿ ಮಾಡಿದ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ತಮ್ಮಿಂದ ಯಾವ ತಪ್ಪು ಆಗಿಲ್ಲ. ಹಿರಿಯರಾದ ತಾವು ಸಂಸ್ಥೆಗೆ ಧಕ್ಕೆಯಾಗದ್ದಂತೆ ಸಹಕರಿಸಬೇಕೆಂಬ ಮನವಿ ಮಾಡಿಕೊಂಡಿ ದ್ದಾರೆ. ನಿಮ್ಮಿಂದ ತಪ್ಪು ನಡೆಯದಿದ್ದಲ್ಲಿ ತನಿಖೆಗೆ ಆದೇಶಿಸಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಕೋಡಿ ಪೊನ್ನಪ್ಪ ಹೇಳಿರುವ ಮಾಹಿತಿ ಲಭ್ಯ ವಾಗಿದೆ.
ಬಹುಕೋಟಿ ಹಗರಣ
೨೦೨೧-೨೨ನೇ ಆರ್ಥಿಕ ಸಾಲಿನಲ್ಲಿ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ೬೩ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಏತನ್ಮಧ್ಯೆ, ಬಹುಕೋಟಿ ಹಗರಣ ಬೆಳಕಿಗೆ ಬರುವುದರ ಮೂಲಕ ಸಂಸ್ಥೆ ಆಡಳಿತ ಮಂಡಳಿ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ನಿವೃತ್ತ ಕಾರ್ಯದರ್ಶಿ ಮೇಲೆ ನೇರ ಆರೋಪ ಹೊರಿಸಲಾಗಿದೆ. ಆದರೆ, ಅಧ್ಯಕ್ಷರು ಸೇರಿದ್ದಂತೆ ನಿರ್ದೇಶಕರು ಹೆಚ್ಚು ಚಿಂತಕ್ರಾಂತರಾಗಿದ್ದಾರೆ.
ಅಧ್ಯಕ್ಷರು ಸೇರಿದ್ದಂತೆ ಆಡಳಿತ ಮಂಡಳಿಯವರು ಕಮಿಷನ್ ವ್ಯವಹಾರದಲ್ಲಿ ಶಾಮೀಲಾಗದಿದ್ದಲ್ಲಿ ಕಮಿಷನ್ ವ್ಯವಹಾರ ಬಗ್ಗೆ ಸೂಕ್ತ ತನಿಖೆ ಆಗುವಂತೆ ಭಾನುವಾರ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಹಕರಿಸಲಿ ಎಂದು ಹಿರಿಯ ಬಿಜೆಪಿ ಮುಖಂಡ ಕೋಡಿ ಪೊನ್ನಪ್ಪ ಆಗ್ರಹಿಸಿದ್ದಾರೆ.
ಕಿಂಗ್‌ಪಿನ್ ಶ್ರೀಮಂತ
ಭಾಗಮಂಡಲ ಕಚೇರಿಗೆ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿ ಈಗ ಕೋಟ್ಯಾಧಿಪತಿ. ಮಡಿಕೇರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಟ್ಟಡ ಕಟ್ಟಿದ್ದಾರೆ. ರೆಸಾರ್ಟ್ ಹೊಂದಿದ್ದಾರೆ. ೫ ಎಕರೆ ಕುಟುಂಬ ಜಾಗದಲ್ಲಿ ವರ್ಷಕ್ಕೆ ೨ ಲಕ್ಷ ರೂಪಾಯಿ ಆದಾಯ ಬರುವುದಿಲ್ಲ. ಹೀಗಿರು ವಾಗ ಕೋಟ್ಯಂತರ ರೂಪಾಯಿ ಹೇಗೆ ಸಂಪಾದಿಸಿದ್ದಾರೆಂದು ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೂಡಕಂಡಿ ಸಿ. ದಯಾನಂದ ಪ್ರಶ್ನಿಸಿದ್ದಾರೆ.
ತೀರ್ಥಹಳ್ಳಿಯ ಜೇನು ಸರಬರಾಜುದಾರರು ಪತ್ರದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳನ್ನು, ಬ್ಯಾಂಕ್ ಖಾತೆಗೆ ಹಾಕಿರುವ ಹಣದ ವಿವರ ಕುರಿತು ಸಮಗ್ರ ತನಿಖೆ ನಡೆಸಿದ್ದಲ್ಲಿ ಮತ್ತಷ್ಟು ಸತ್ಯಾಂಶ ಬೆಳಕಿಗೆ ಬರಲಿದೆ. ಈ ಕೆಲಸ ತಕ್ಷಣ ಆಗಬೇಕೆಂದು ಸಾಕಷ್ಟು ಜನ ವಿಜಯವಾಣಿ ಮೂಲಕ ಒತ್ತಾಯಿಸಿದ್ದಾರೆ.
**
ತೀರ್ಥಹಳ್ಳಿ ಭಾಗದ ದಟ್ಟಾರಣ್ಯದಲ್ಲಿ ಹೇರಳ ಪ್ರಮಾಣದಲ್ಲಿ ಹೆಜ್ಜೇನು ದೊರೆಯುತ್ತದೆ. ಅರಣ್ಯ ಉತ್ಪನ್ನ ಸಂಗ್ರಹಿಸುವ ಗುತ್ತಿಗೆ ಪಡೆದು ಕೊಂಡಿದ್ದು, ನಿಗ್ರೋ ಜನರ ಮೂಲಕ ಹೆಜ್ಜೇನು ಸಂಗ್ರಹಿಸುತ್ತೇವೆ. ಪುತ್ತೂರು, ಭಾಗಮಂಡಲಕ್ಕೆ ಕಚ್ಚಾ ಜೇನು ಪೂರೈಕೆ ಮಾಡುತ್ತಿದ್ದೇವು. ಕಮಿಷನ್ ವ್ಯವಹಾರ ಗೊತ್ತಾಗುತ್ತಿದ್ದಂತೆ ೬ ತಿಂಗಳಿಂದ ಭಾಗಮಂಡಲಕ್ಕೆ ಸರಬರಾಜು ಮಾಡುತ್ತಿಲ್ಲ. ಎಂ.ಎಚ್. ದೇವರಾಜ್, ಮಾಲೀಕರು, ಶ್ರೀ ದುರ್ಗಾಶಕ್ತಿ ಇಂಡಸ್ಟ್ರೀಸ್, ತೀರ್ಥಹಳ್ಳಿ.
**
ಜೇನು ಖರೀದಿ ವ್ಯವಹಾರ ಹಾಗೂ ಕೂರ್ಗ್ ಹನಿ ಗುಣಮಟ್ಟದ ಬಗ್ಗೆ ದಶಕದಿಂದ ಚರ್ಚೆ ನಡೆಯುತ್ತಿದೆ. ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇತ್ತು. ಆದರೆ, ವಿಜಯವಾಣಿ ವಿಶೇಷ ವರದಿ ಪ್ರಕಟಿಸುವುದರ ಮೂಲಕ ಪ್ರತಿಯೊಬ್ಬರಿಗೂ ಅವ್ಯವಹಾರದ ಅರಿವು ಮೂಡುವಂತೆ ಮಾಡಲಾಗಿದೆ. ಇದು ಶ್ರೇಷ್ಠ ಪತ್ರಿಕೋದ್ಯಮ. ಕುಪ್ಪಂಡ ಛಾಯಾ ನಂಜಪ್ಪ, ಮಾಲೀಕರು, ನೆಕ್ಟರ್ ಪ್ರೆಶ್, ಮೈಸೂರು.
**
ಇದು ಭಾಗಮಂಡಲ ಜೇನು ಕೃಷಿಕರ ಸಹಕಾರ ಸಂಘದೊಂದಿಗೆ ಕೊಡಗಿನ ಪ್ರತಿಷ್ಠೆಯ ಪ್ರಶ್ನೆ. ಇದು ಸರಿಯಾಗಿ ಮೂರು ಕೋಟಿ, ಎರಡು ಲಕ್ಷದ ಮೂವತ್ತು ಸಾವಿರದ, ಏಳುನೂರ ಎಂಭತ್ತ ನಾಲ್ಕು ರೂಪಾಯಿಗಳ ಹಗರಣ. ಈ ಹಗರಣ ನಿಜವಾಗಿಯೂ ಹೌದಾದರೆ, ಇಲ್ಲಿ ಜೇನಿನ ಕಮಿಷನ್ ಸವಿರುಚಿ ನೋಡಿದವರೆಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು. ಬಿ.ಕೆ. ಬೋಪಣ್ಣ, ರಾಜ್ಯ ಕಾರ್ಯದರ್ಶಿ, ಕೆಪಿಸಿಸಿ ಕಾನೂನು ಘಟಕ.