

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಜೇನು ವ್ಯವಹಾರದಲ್ಲಿ ೩ ಕೋಟಿ ರೂಪಾಯಿ ಕಮಿಷನ್ ವ್ಯವಹಾರ ನಡೆದಿರು ವುದು ಬೆಳಕಿಗೆ ಬಂದಿದೆ. ಜೇನು ಸರಬರಾಜು ಮಾಡುತ್ತಿದ್ದ ಸಂಸ್ಥೆ ಮಾಲೀಕರು ಸಹಕಾರ ಸಂಘದ ನಿರ್ದೇಶಕರಿಗೆ ಬರೆದಿರುವ ಪತ್ರ ಕಮಿಷನ್ ವ್ಯವಹಾರ ಬಹಿರಂಗ ಪಡಿಸಿದೆ.
ಭಾಗಮಂಡಲಕ್ಕೆ ಜೇನು ಮತ್ತು ಮೇಣ ಸರಬರಾಜು ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕೆಂದಲ್‌ಬೈಲಿನಲ್ಲಿರುವ ಶ್ರೀ ದುರ್ಗಾಶಕ್ತಿ ಇಂಡಸ್ಟ್ರೀಸ್ ಮಾಲೀಕ ಎಂ.ಎಚ್. ದೇವರಾಜ್, ಸಹಕಾರ ಸಂಘ ನಿರ್ದೇಶಕ ಕೋಡಿ ಮೋಟಯ್ಯ ಅವರಿಗೆ ಜೂನ್ ೧೫ ರಂದು ಬರೆದಿರುವ ಪತ್ರದಲ್ಲಿ ಕಮಿಷನ್ ವ್ಯವಹಾರ ಅನಾವರಣ ಗೊಂಡಿದೆ.
ಅಶೋಕ್ ಕಾರ್ಯದರ್ಶಿಯಾಗಿದ್ದ ವೇಳೆ ೧ ಕೆಜಿ ಜೇನಿಗೆ ೧೩೨ ರೂ. ಬಿಲ್ ಮಾಡುತ್ತಿದ್ದರು. ನಮ್ಮ ಸಂಸ್ಥೆಗೆ ೬೦ ರೂ. ನೀಡುತ್ತಿದ್ದು, ೭೨ ರೂ. ಕಮಿಷನ್ ಪಡೆದು ಕೊಳ್ಳುತ್ತಿದ್ದರು. ಕಮಿಷನ್ ಹಣ ಬೇರೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾ ಬಂದಿದ್ದೇವೆ. ೨೦೧೩ ರಿಂದ ೨೦೨೨ ರವರೆಗೆ ೪,೧೯,೮೭೨ ಕೆಜಿ ಜೇನು ಸರಬರಾಜು ಮಾಡಿದ್ದು, ೩.೨ ಕೋಟಿ ರೂ. ಕಮಿಷನ್ ನೀಡಿರುತ್ತೇವೆಂದು ಪತ್ರದಲ್ಲಿ ಉಲ್ಲೇಖಿಸಿ ದ್ದಾರೆ.
ನಿರ್ದೇಶಕರಾದ ಕೋಡಿ ಮೋಟಯ್ಯ ೨೦೨೧ನೇ ಇಸವಿ ಅಕ್ಟೋಬರ್‌ನಲ್ಲಿ ಅವ್ಯವಹಾರ ಬಗ್ಗೆ ಮಾಹಿತಿ ಕೇಳಿದ ಬಳಿಕ ತಿಂಗಳಿಗೆ ೪ ಟನ್‌ಗೆ ಸೀಮಿತಗೊಳಿಸಿದರು. ಅದಕ್ಕೂ ಮೊದಲು ತಿಂಗಳಿಗೆ ೧೪ ಟನ್ ಜೇನು ತೆಗೆದುಕೊಳ್ಳುತ್ತಿದ್ದರು. ಕಮಿಷನ್ ವಿಚಾರ ತಿಳಿಯುವ ಮುನ್ನ ಜೇನು ಕಳುಹಿಸಿದ ದಿನವೇ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಿದ್ದರು. ಕಮಿಷನ್ ವಿಷಯ ಗೊತ್ತಾಗುತ್ತಿದ್ದಂತೆ ೪ ಟನ್ ಜೇನಿನ ಹಣ ೨ ತಿಂಗಳು ಕಳೆದರೂ ಪಾವತಿಸಿಲಿಲ್ಲ ಎಂದು ದೂರಿದ್ದಾರೆ.
೧೧-೫-೨೦೨೨ ರಂದು ೬ ಟನ್ ಜೇನು ಕಳುಹಿಸಿದ್ದು, ನಮ್ಮ ಸಂಸ್ಥೆಯಲ್ಲಿ ಜಾಗವಿಲ್ಲ ಮತ್ತು ನಿರ್ದೇಶಕರು ಬೈಯುತ್ತಾರೆಂದು ಹಾಲಿ ಕಾರ್ಯದರ್ಶಿ ಸುಧಾ ೨ ಸಾವಿರ ಕೆಜಿ ಜೇನು ವಾಪಾಸು ಕಳುಹಿಸಿದ್ದಾರೆ. ಆದರೆ, ಒಂದೇ ವಾರದಲ್ಲಿ ಗುಂಡ್ಲುಪೇಟೆಯಿಂದ ೬ ಸಾವಿರ ಕೆಜಿ ಜೇನು ತರಿಸಿಕೊಂಡಿದ್ದಾರೆ.
ಬ್ಯಾಂಕ್ ಖಾತೆಗೆ ೪೫ ಲಕ್ಷ
ಮಾಜಿ ಕಾರ್ಯದರ್ಶಿ ಆಪ್ತರ ಬ್ಯಾಂಕ್ ಖಾತೆಗೆ ೪೫ ಲಕ್ಷ ರೂ. ಹಾಕಿದ್ದೇನೆ. ಜೇನು ತೆಗೆದುಕೊಂಡು ಹೋಗುವಾಗ ಡ್ರೈವರ್ ಮತ್ತು ರೈಟರ್ ಮೂಲಕ ಕಮಿಷನ್ ಹಣ ಮಡಿಕೇರಿಯಲ್ಲಿ ತೆಗೆದುಕೊಳ್ಳುತ್ತಿದ್ದರು. ಸಂಸ್ಥೆಯಿಂದ ಕಂಪ್ಯೂಟರ್ ಬಿಲ್ ಕೊಡ್ತುತ್ತಿರಲಿಲ್ಲ. ತೂಕದ ಬಿಲ್ ಮಾತ್ರ ನೀಡುತ್ತಿದ್ದರು. ಒಂದು ಖಾಲಿ ಬಿಲ್ಲನ್ನು ತೆಗೆದುಕೊಂಡು ಅದಕ್ಕೆ ಅಂದಿನ ತೂಕ ಹಾಕಿ, ೧೩೨ ರೂ. ದರ ಹಾಕುತ್ತಿದ್ದರು. ನಮ್ಮ ಲೆಕ್ಕ ದಲ್ಲಿ ೧೩೨ ರೂ. ತೋರಿಸಬೇಕು.
೨೦೧೩ ರಿಂದ ೨೦೨೨ ರವರೆಗೆ ೪,೧೯,೮೭೨ ಕೆಜಿ ಜೇನು ಕೊಟ್ಟಿರುತ್ತೇವೆ. ೨೦೧೬ ರಲ್ಲಿ ನೋಟ್ ಬ್ಯಾನ್ ಆದ ನಂತರ ಜಿಎಸ್‌ಟಿ ಬಂದ ಮೇಲೆ ಕಮಿಷನ್ ಅನ್ನು ಬೇನಾಮಿ ಖಾತೆಗೆ ವರ್ಗಾವಣೆ ಮಾಡಲು ಕಾರ್ಯದರ್ಶಿ ಸೂಚನೆ ನೀಡಿದ್ದರು. ಕಮಿಷನ್ ಹಣ ನನಗೆ ಹಿಂದಕ್ಕೆ ಕೊಡ ಬೇಕು ಹಾಗೂ ಸಂಪೂರ್ಣ ಜೇನು ಪೂರೈಕೆ ಜವಾಬ್ದಾರಿ ನಮಗೆ ವಹಿಸಬೇಕು. ಇಲ್ಲದಿದ್ದಲ್ಲಿ ಸಹಕಾರ ಸಂಘಗಳ ನಿಬಂಧಕರು, ಉಪ ನಿಬಂಧಕರಿಗೆ ದಾಖಲೆ ಸಲ್ಲಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಸಚಿವರಿಗೆ ದೂರು
ಕಮಿಷನ್ ವ್ಯವಹಾರದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಮಾತನಾಡಿದ್ದೇನೆ. ಈ ಬಗ್ಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ಗೆ ಮಾಹಿತಿ ನೀಡಿದ್ದು, ನನ್ನನ್ನು ಬೆಂಗಳೂರಿಗೆ ಆಹ್ವಾನಿಸಿದ್ದಾರೆ. ಮಾಜಿ ಕಾರ್ಯದರ್ಶಿಯ ಅವ್ಯವಹಾರ ಇಲ್ಲಿಯೇ ಮುಚ್ಚಿ ಹಾಕುವುದಾದರೆ ಈ ವಿಷಯವನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಂಕ್ ಖಾತೆಗೆ ಕಮಿಷನ್ ಹಣ
ಕೂರ್ಗ್ ಬ್ಯುಲ್ಡ್ ಖಾತೆಗೆ ೨೫-೮-೨೦೨೦, ೯-೯-೨೦೨೦, ೧೦-೨-೨೦೨೧ ರಂದು ತಲಾ ೩ ಲಕ್ಷ, ೧೭-೧೦-೨೦೨೦ ರಂದು ವೆಂಕಟೇಶ್ವರ ಖಾತೆಗೆ ೨ ಲಕ್ಷ, ಅಶೋಕ ಖಾತೆಗೆ ೨೨-೧-೨೦೨೦ ರಂದು ೬ ಲಕ್ಷ, ೨೮-೧೨-೨೦೨೦ ರಂದು ೨ ಲಕ್ಷ, ೨೭-೯-೨೦೧೮ ರಲ್ಲಿ ೧ ಲಕ್ಷ, ೯-೧೧-೨೦೧೮ ರಲ್ಲಿ ೧ ಲಕ್ಷ, ಕೆ.ಎ. ಹಾಸಿಮ್ ಖಾತೆಗೆ ೧೭-೧೧-೨೦೨೨, ೯-೨-೨೦೨೧ ರಂದು ತಲಾ ೩ ಲಕ್ಷ, ಕೆ.ಎನ್. ಹನೀಫ್ ಖಾತೆಗೆ ೨೬-೩-೨೦೨೧ ರಂದು ೩ ಲಕ್ಷ, ಕೆ.ಎಚ್. ಆಶೀಕ್ ಖಾತೆಗೆ ೩೧-೩-೨೦೨೧ ರಂದು ೩ ಲಕ್ಷ ಜಮಾ ಮಾಡಲಾಗಿದೆ.
ನಗದು ಹಸ್ತಾಂತರ
೧೬-೪-೨೦೧ ರಂದು ಅಶೋಕರ ರೆಸಾರ್ಟ್‌ನಲ್ಲಿ ದೇವರಾಜ ಕೈಯಿಂದ ೬ ಲಕ್ಷ ೨೧-೫-೨೦೧ ರಲ್ಲಿ ಚಾಲಕನ ಕೈಯಿಂದ ೨ ಲಕ್ಷ, ೯-೮-೨೦೧೮ ರಲ್ಲಿ ಸಿಂಡಿಕೇಟ್ ಬ್ಯಾಂಕ್ ಖಾತೆಯಿಂದ ೧ ಲಕ್ಷ ನೀಡಲಾಗಿದೆ. ೧೩,೦೭,೫೭೦ ರೂಪಾಯಿ ಕಮಿಷನ್ ಹಣವನ್ನು ಅಶೋಕ್ ರೆಸಾರ್ಟ್‌ನಲ್ಲಿ ದೇವರಾಜ ಮೂಲಕ ನೀಡಲಾಗಿದೆ. ೨೦೧೦ ರಿಂದ ೨೦೧೩ ರವರೆಗೆ ನಡೆದಿರುವ ಕಮಿಷನ್ ವ್ಯವಹಾರದ ಲೆಕ್ಕ ಇರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
**
ಜೇನು ಖರೀದಿಸಿದ ಹಣವನ್ನು ಸರಬರಾಜು ಸಂಸ್ಥೆ ಖಾತೆಗೆ ನೇರವಾಗಿ ಜಮಾ ಮಾಡುತ್ತಾ ಬಂದಿದ್ದೇವೆ. ಸಂಸ್ಥೆಯಿಂದ ಹೊರಗೆ ನಡೆದಿದೆ ಎನ್ನಲಾಗಿರುವ ಕಮಿಷನ್ ವ್ಯವಹಾರ ನಮಗೆ ಸಂಬಂಧವಿಲ್ಲ. ಕಾರ್ಯದರ್ಶಿಯಾಗಿದ್ದ ಅಶೋಕ್ ನಿವೃತ್ತರಾದ ಬಳಿಕ ಪತ್ರ ಬರೆದಿರುವ ಹಿಂದೆ ಷಡ್ಯಂತ್ರ ಅಡಗಿದೆ. ಭಾನುವಾರ ಆಯೋಜಿಸಿರುವ ಮಹಾಸಭೆಯಲ್ಲಿ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲಾಗುವುದು. ಹೊಸೂರು ಸತೀಶ್‌ಕುಮಾರ್ ಜೋಯಪ್ಪ, ಅಧ್ಯಕ್ಷರು, ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ, ಭಾಗಮಂಡಲ.
**
ಸಹಕಾರ ಸಂಘದ ನಿರ್ದೇಶಕನಾಗಿರುವುದರಿಂದ ಮಾಧ್ಯಮಕ್ಕೆ ಯಾವ ಹೇಳಿಕೆಯೂ ನೀಡುವುದಿಲ್ಲ. ಈ ವಿಷಯ ಭಾನುವಾರ ಆಯೋಜಿ ಸಿರುವ ಮಹಾಸಭೆಯಲ್ಲಿ ಚರ್ಚೆಗೆ ಬರಲಿದೆ. ಪ್ರತಿಯೊಬ್ಬ ಸದಸ್ಯರಿಗೂ ವ್ಯವಹಾರದ ಬಗ್ಗೆ ಚರ್ಚಿಸಲು ಅಂದು ಮುಕ್ತ ಅವಕಾಶ ಸಿಗಲಿದೆ. ಮಹಾಸಭೆ ಬಳಿಕ ಮಾಹಿತಿ ನೀಡುತ್ತೇನೆ. ಕೋಡಿ ಮೋಟಯ್ಯ, ನಿರ್ದೇಶಕರು, ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ, ಭಾಗಮಂಡಲ.
**
೨೦೧೦ ರಿಂದ ಹೆಜ್ಜೇನು ಸರಬರಾಜು ಮಾಡುತ್ತಿದ್ದೆ. ೬ ತಿಂಗಳಿನಿಂದ ಸರಬರಾಜು ಮಾಡುತ್ತಿಲ್ಲ. ಭಾಗಮಂಡಲ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಅಶೋಕ್ ಕಮಿಷನ್ ಹಣ ನೀಡುವಂತೆ ನಿರಂತರ ಮಾನಸಿಕ ಹಿಂಸೆ ನೀಡುತ್ತಿದ್ದರು. ಸಹಕಾರ ಸಂಘದ ನಿರ್ದೇಶಕ ಕೋಡಿ ಮೋಟಯ್ಯ ಅವರಿಗೆ ಲಿಖಿತವಾಗಿ ಸಮಗ್ರ ಮಾಹಿತಿ ನೀಡಿದ್ದೇನೆ. ಎಂ.ಎಚ್. ದೇವರಾಜ್, ಮಾಲೀಕರು, ಶ್ರೀ ದುರ್ಗಾಶಕ್ತಿ ಇಂಡಸ್ಟ್ರೀಸ್, ಕೆಂದಲ್‌ಬೈಲಿ, ತೀರ್ಥಹಳ್ಳಿ.