

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆ.೨೪ ರಂದು ಬೆಳಗ್ಗೆ ೬ ಗಂಟೆಯಿಂದ ೨೭ ರಂದು ಬೆಳಗ್ಗೆ ೬ ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.
ಆ.೨೬ ರಂದು ಕಾಂಗ್ರೆಸ್ ಕರೆ ನೀಡಿದ್ದ ಮಡಿಕೇರಿ ಚಲೋ ಹಾಗೂ ಬಿಜೆಪಿ ಕರೆ ನೀಡಿದ್ದ ಜನಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ೨೪ ರಂದು ಮಧ್ಯರಾತ್ರಿ ೧೨ ಗಂಟೆಯಿಂದ ೨೭ ರಂದು ಮಧ್ಯರಾತ್ರಿ ೧೨ ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ.
ಜಿಲ್ಲೆಯ ಸ್ಥಿತಿಗತಿ ಹಾಗೂ ಈ ಹಿಂದೆ ನಡೆದ ಅಹಿತಕರ ಘಟನೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಿಖಿತವಾಗಿ ತಂದಿದ್ದಾರೆ. ಕೊಡಗು ಮತೀಯ ಸೂಕ್ಷ್ಮ ಪ್ರದೇಶವಾಗಿದೆ. ೧೯೯೭ ರಲ್ಲಿ ವಿರಾಜಪೇಟೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದ್ದಂತೆ ಜಿಲ್ಲೆಯಾದ್ಯಂತ ಕೋಮು ಗಲಭೆ ನಡೆದಿತ್ತು. ೨೦೦೧ ರಲ್ಲಿ ಪಾಲೂರು ಹರಿಶ್ಚಂದ್ರ ದೇವಸ್ಥಾನ ಭಗ್ನಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ದ್ದಂತೆ ಕೊಡಗಿನಾದ್ಯಂತ ಕೋಮು ಗಲಭೆ ಉಂಟಾಗಿತ್ತೆಂದು ಗಮನ ಸೆಳೆಯಲಾಗಿದೆ.
೨೦೧೫ ರಲ್ಲಿ ಟಿಪ್ಪು ಜಯಂತಿ ಆಚರಣೆ ಗಲಭೆ ಉಂಟಾಗಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ೪೭ ಪ್ರಕರಣ ದಾಖಲಾಗಿತ್ತು. ಇಬ್ಬರು ಮೃತ ಪಟ್ಟಿದ್ದರು. ಆ ಸಂದರ್ಭ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದರಿಂದ ೧ ತಿಂಗಳ ಕಾಲ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ೨೦೧೬, ೨೦೧೭, ೨೦೧೮ ರಲ್ಲಿ ನಿಷೇಧಾಜ್ಞೆ ನಡುವೆ ಟಿಪ್ಪು ಜಯಂತಿ ಆಚರಿಸಲಾಗಿತ್ತು ಎಸ್ಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದರೊಂದಿಗೆ ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳನ್ನೂ ಉಲ್ಲೇಖಿಸಲಾಗಿದೆ.
ನಿಷೇಧಾಜ್ಞೆ ಜಾರಿ
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಸಭೆ- ಸಮಾರಂಭ ನಡೆಸದಂತೆ, ಯಾವುಧೇ ಪ್ರತಿಭಟನೆ, ಮೆರವಣಿಗೆ, ರ‌್ಯಾಲಿ, ಜಾಥಾ ನಡೆಸದ್ದಂತೆ ಸೂಚನೆ ನೀಡಲಾಗಿದೆ. ಪೂರ್ವ ನಿಯೋಜಿತ ಮದುವೆ, ನಾಮಕರಣ, ಗೃಹ ಪ್ರವೇಶ, ಸರ್ಕಾರಿ ಕಾರ್ಯಕ್ರಮ ನಡೆಸಲು ನಿಬರ್ಂಧ ಇರುವುದಿಲ್ಲ. ೫ ಮತ್ತು ಅದಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ, ವಿಜಯೋತ್ಸವ ನಡೆಸದಂತೆ, ಪಟಾಕಿ ಸಿಡಿಸದಂತೆ, ಕಪ್ಪು ಪಟ್ಟಿ ಧರಿಸದಂತೆ ಮತ್ತು ಕಪ್ಪು ಬಾವುಟ ಹಿಡಿಯದಂತೆ, ಧ್ವನಿವರ್ಧಕ ಬಳಸಿ ಪ್ರಚೋದನಾತ್ಮಕ ಘೋಷಣೆ ಕೂಗದಂತೆ, ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ/ ಬಾವುಟ ಅಳವಡಿಸದಂತೆ ಆದೇಶಿಸಲಾಗಿದೆ.
ಯಾವ ವ್ಯಕ್ತಿಯೂ ಆಯುಧ ಹಿಡಿದುಕೊಂಡು ಸಾರ್ವಜನಿವವಾಗಿ ತಿರುಕಾಡದಂತೆಯೂ, ಭಾಷಣ ಮಾಡದಂತೆಯೂ ಹಾಗೂ ಯಾವುದೇ ವಾರದ ಸಂತೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.