ಕೊಡಗಿನ ಗೌರಮ್ಮ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಸಹನಾ ಕಾಂತಬೈಲು

22mdka4 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕೊಡಗು ಜಿಲ್ಲೆಯ ಮೊದಲ ಮಹಿಳಾ ಸಾಹಿತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಮೈಸೂರು ಕುವೆಂಪು ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಎನ್.ಕೆ. ಲೋಲಾಕ್ಷಿ ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೨೦೨೧-೨೨ನೇ ಸಾಲಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು.

೨೭ ವರ್ಷ ಬದುಕಿದ ಗೌರಮ್ಮ ಇಂದು ಕೂಡ ಸ್ಮರಣೀಯರು. ಸ್ವಾತಂತ್ರೃ ಬದುಕಿನ ಹೋರಾಟಗಾರ್ತಿ, ಕಥೆಗಾರ್ತಿಯಾಗಿ ಗೌರಮ್ಮ ಅವರನ್ನು ನೋಡಬಹುದು. ವಸಹತುಶಾಯಿ ಚೌಕಟ್ಟಿನಲ್ಲಿದ್ದ ಸಂದರ್ಭ ರಾಷ್ಟ ಪರಕೀಯರ ಅಕ್ರಮಣದಿಂದ ತುತ್ತಾಗಿ ನಲುಗಿತ್ತು. ಈ ಸಂದರ್ಭ ಜನಿಸಿದ ಗೌರಮ್ಮ ಇಂಗ್ಲೀಷ್ ಶಿಕ್ಷಣ ಪಡೆದುಕೊಂಡರು. ಟೆನ್ನಿಸ್, ಈಜು ಕಲಿತು ವಿವಿಧ ಭಾಷೆ ಅಭ್ಯಸಿಸಿ ಸಾಹಿತ್ಯವನ್ನು ಕರಗತ ಮಾಡಿಕೊಳ್ಳುತ್ತಾರೆ. ಗಾಂಧಿಜೀ ಸ್ವಾತಂತ್ರ್ಯ ಹೋರಾಟಕ್ಕಿಳಿದ ಸಂದರ್ಭ ಅವರನ್ನು ನೋಡಬೇಕೆಂದು ಉಪವಾಸ ಸತ್ಯಾಗ್ರಹ ನಡೆಸುತ್ತಾರೆ. ಅದನ್ನು ಗಮನಿಸಿ ಗಾಂಧಿ ಗೌರಮ್ಮರನ್ನು ಭೇಟಿಯಾದ ಸಂದರ್ಭ ಅವರಲ್ಲಿದ್ದ ಒಡವೆಯನ್ನು ದೇಶದ ಹಿತಕ್ಕೆ ನೀಡಿ ತಮ್ಮ ದೇಶಪ್ರೇಮ ಮೆರೆದಿದ್ದರು. ಬಾಲ್ಯದಲ್ಲೆ ತಾಯಿ ಕಳೆದುಕೊಂಡು ಹೋರಾಟದ ಬದುಕು ನಡೆಸಿದ ಗೌರಮ್ಮ ಅವರು ಕೊಡಗಿನ ಗಾಂಧಿ ಎಂದು ಬಣ್ಣಿಸಿದರು.

ನಿಸ್ವಾರ್ಥ ಸೇವೆಯಿಂದ ದೇಶ ಕಟ್ಟಿದ ರೀತಿ ಇಂದಿನ ತಲೆಮಾರು ನೆನಪಿಸಿಕೊಳ್ಳಬೇಕು. ಅದನ್ನು ಮರೆತರೆ ವರ್ತಮಾನ ನಾಶವಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯ ಮೂಲಕ ಕೊಡಗಿನ ಗೌರಮ್ಮ ಅಧ್ಯಯನ ಪೀಠ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕು. ಈ ಪೀಠದ ಮೂಲಕ ಮಹಿಳಾ ಸಾಹಿತ್ಯ ಪರ, ಗೌರಮ್ಮ ಅವರನ್ನು ಮರುನೆನಪಿಸುವ ಕಾರ್ಯವಾಗಬೇಕು. ಇದಕ್ಕೆ ಕಸಾಪ. ಮುಂದಾಗಬೇಕು. ಸರ್ಕಾರ ಹಾಗೂ ವಿಶ್ವವಿದ್ಯಾನಿಲಯದ ಗಮನ ಸೆಳೆಯಬೇಕೆಂದು ಲೋಲಾಕ್ಷಿ ಸಲಹೆ ನೀಡಿದರು.

ಗೌರಮ್ಮ ಬದುಕಿದಿದ್ದರೆ ಅವರ ಸಾಹಿತ್ಯ ಸೇವೆ, ಸ್ವಾತಂತ್ರ್ಯ ಹೋರಾಟ, ಚಿಂತನೆ ಬೇರೆ ಕೊಡಗನ್ನು ಸ್ಥಾಪಿಸುತಿತ್ತು. ಗೌರಮ್ಮ ಸಮಾಜದ ನೋವು- ನಲಿವನ್ನು ಕಥೆ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರಲಿಲ್ಲ. ವಿಚಾರಗಳನ್ನು ಬರೆದು ಹೆಸರು ಬಹಿರಂಗ ಪಡಿಸುವ ಭಯ ಇತ್ತು. ಆ ವೇಳೆಯಲ್ಲಿ ಪತ್ರ ಮಾತನಾಡುವ ಸೂತ್ರದಲ್ಲಿ ಕಥೆಯನ್ನು ಬರೆದು ನಿರೂಪಿಸಿದ್ದಾರೆ. ಮತಾಂತರ, ಬಾಲ್ಯ ವಿವಾಹ, ವರದಕ್ಷಿಣೆ ಪಿಡುಗು ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ವಿರುದ್ಧ ಲೇಖನ ಬರೆದಿದ್ದರು. ಇಂದಿಗೂ ಈ ರೀತಿಯ ಸಮಸ್ಯೆಗಳು ಸಮಾಜದಲ್ಲಿ ಜೀವಂತವಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಡಿ. ಜವರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗಿನ ಗೌರಮ್ಮ ಸಾಹಿತ್ಯ ಲೋಕ ಎಂದು ಮರೆಯದ ಹೆಸರು. ಅವರು ಎಲ್ಲರಿಗೂ ಆದರ್ಶರಾಗಿದ್ದಾರೆ. ಅವರ ಸಾಹಿತ್ಯ ಸೇವೆಯೊಂದಿಗೆ ದೇಶ ಪ್ರೇಮ ಎಲ್ಲರಿಗೂ ಮಾದರಿ. ಓದಿನ ಅಭಿರುಚಿಯಿಂದ ವಿಶಾಲ ಮನೋಭಾವನೆ ಬೆಳೆಯುತ್ತದೆ. ವಿದ್ಯಾರ್ಥಿಗಳು ಓದು ಹಾಗೂ ಬರಹದ ಹವ್ಯಾಸ ರೂಢಿಸಿಕೊಂಡು ಉತ್ತಮ ಚಿಂತಕರಾಗಿ ಹೊರಹೊಮ್ಮುವಂತೆ ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತವಿಕವಾಗಿ ಮಾತನಾಡಿ, ಗೌರಮ್ಮ ಅವರ ಮಗ ವಸಂತ್ ಸ್ಥಾಪಿಸಿರುವ ಗೌರಮ್ಮ ಪ್ರಶಸ್ತಿಯನ್ನು ಇದುವರೆಗೂ ೧೮ ಲೇಖಕಿಯರು ಪಡೆದುಕೊಂಡಿದ್ದಾರೆ. ೧೨ನೇ ಶತಮಾನದಲ್ಲಿ ವಚನ ರಚಿಸುವ ಮೂಲಕ ಅಕ್ಕಮಹಾದೇವಿ ಮೊದಲ ಮಹಿಳಾ ಸಾಹಿತಿಯಾದರು. ಅವರ ಬಳಿಕ ಅನೇಕ ಮಹಿಳೆಯರು ಸೂಕ್ಷ್ಮ ಸಂವೇದನೀಯ ಬರಹಗಳು ಮೆಚ್ಚುಗೆಗೆ ಪಾತ್ರವಾಗಿವೆ. ಹಲವು ಮಹಿಳಾ ಸಾಹಿತ್ಯರು ಕನ್ನಡ ನಾಡಿನ ಸಾಹಿತ್ಯ ಲೋಕವನ್ನು ಬೆಳಗಿದ್ದಾರೆದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿದರು.

ಗೌರಮ್ಮ ದತ್ತಿನಿಧಿ ಪ್ರಶಸ್ತಿಯನ್ನು ಸಾಹಿತಿ ಸಹನಾ ಕಾಂತಬೈಲು ಅವರಿಗೆ ಗಣ್ಯರು ಪ್ರದಾನ ಮಾಡಿದರು. ಸಣ್ಣ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿ ಸಂತ ಜೋಸೇಫರ ಶಾಲೆ ವಿದ್ಯಾರ್ಥಿನಿ ಎನ್. ಸೌಜನ್ಯ, ದ್ವಿತೀಯ ಸ್ಥಾನ ಪಡೆದ ಕೂಡಿಗೆ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಬಿ.ಪಿ. ತಾರುಣ್ಯ, ಮೂರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪಿ.ಡಿ. ಕವನ ಅವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೇಕಲ್ಲು ನವೀನ್ ಕುಶಾಲಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಮುನೀರ್ ಅಹಮ್ಮದ್, ರೇವತಿ ರಮೇಶ್, ಖಜಾಂಚಿ ಎಂ.ಬಿ. ಜೋಯಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net