

ಮಡಿಕೇರಿ:
ಪಕ್ಕದ ವಯನಾಡಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಬೆನ್ನಲ್ಲೇ ಕೊಡಗಿನಲ್ಲೂ ಆತಂಕ ಶುರುವಾಗಿದೆ. 2018ರಲ್ಲೂ ವಯನಾಡಿನಲ್ಲೇ ಮೊದಲು ಈ ರೀತಿಯ ದುರಂತ ಸಂಭವಿಸಿತ್ತು. ಈ ಬೆನ್ನಲ್ಲೇ ಕೊಡಗಿನಲ್ಲೂ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ 19 ಜನರನ್ನು ಬಲಿ ತೆಗೆದುಕೊಂಡಿತ್ತು. ಆದರೆ ಅಂಥ ದುರ್ಘಟನೆ ಈ ಬಾರಿ ನಡೆಯುವುದಿಲ್ಲ ಎಂದು ತಜ್ಞರು ಧೈರ್ಯ ತುಂಬಿದ್ದಾರೆ. ಆದರೂ ಸಂಭಾವ್ಯ ಆಗಸ್ಟ್ ಕಂಟಕದಿAದ ಪಾರಾಗಲು ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ಕಳೆದ ಮೂರು ವರ್ಷಗಳಲ್ಲಿ ಇಲ್ಲದಿದ್ದ ಆಗಸ್ಟ್ ಕಂಟಕದ ಆತಂಕ ಈ ಬಾರಿ ಕೊಡಗಿನಲ್ಲಿ ಕಾಣಿಸಿಕೊಂಡಿದೆ. ಕೇರಳದ ವಯನಾಡಿನಲ್ಲಿ ದುರಂತ ಸಂಭವಿಸಿದ ನಂತರ ಈ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪುಷ್ಯ ಮಳೆ ಗುರುವಾರ (ಅ.1) ಮುಗಿಯಲಿದ್ದು, ಅ.2ರಿಂದ ಆಶ್ಲೇಷ ಮಳೆ ಶುರುವಾಗಲಿದೆ. 2018, 2019 ಹಾಗೂ 2020ರಲ್ಲಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹಾನಿಗೆ ಕಾರಣವಾಗಿದ್ದು ಇದೇ ಆಶ್ಲೇಷ ಮಳೆ. ಹಾಗಾಗಿ ಆಗಸ್ಟ್ ಶುರುವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಹಳೆಯ ನೆನಪುಗಳು ದುಃಸ್ವಪ್ನಗಳಂತೆ ಕಾಡಲಾರಂಭಿಸಿದೆ.
ಯಾವತ್ತೂ ಮಳೆಗೆ ಹೆದರದ ಕೊಡಗಿನವರನ್ನು 2018ರ ಮುಂಗಾರು ಅಕ್ಷರಶಃ ತತ್ತರಿಸುವಂತೆ ಮಾಡಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವೆಡೆ ಸಂಭವಿಸಿದ ಭೂಕುಸಿತ ಬೆಚ್ಚಿಬೀಳಿಸಿತ್ತು. ಕುಶಾಲನಗರ ಭಾಗದಲ್ಲಿ ನದಿ ತೀರದ ಬಡಾವಣೆಗಳಲ್ಲಿ ಪ್ರವಾಹದ ಸ್ಥಿತಿ ಕಾಣಿಸಿಕೊಂಡು ನಿವಾಸಿಗಳು ಕಾಳಜಿ ಕೇಂದ್ರ ಸೇರುವಂತಾಯಿತು. ಸಾವಿರಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತವಾದವು. 19ಜನರು ಪ್ರಾಣ ಕಳೆದುಕೊಳ್ಳುವಂತಾಯಿತು.
2019ರಲ್ಲೂ ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿ ಪುನರಾವರ್ತನೆ ಆಯಿತು. ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ಬೆಟ್ಟ ಕುಸಿದು 10 ಜನರು ಮತ್ತು ಮಡಿಕೇರಿ ತಾಲೂಕು ಕೋರಂಗಾಲದಲ್ಲಿ ಮನೆ ಮೇಲೆ ಬರೆ ಜರಿದು ಐವರು ಸೇರಿ 17 ಜನರು ಮೃತಪಟ್ಟಿದ್ದರು. ಕಾವೇರಿ ನದಿಯಲ್ಲಿನ ಪ್ರವಾಹದಿಂದಾಗಿ 900ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು.
2020ರ ಮಳೆಗಾಲವೂ ಆಗಸ್ಟ್ನಲ್ಲಿ ಕಹಿ ನೆನಪುಗಳನ್ನು ಉಳಿಸಿ ಹೋಯಿತು. ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದ ಮೂವರು ಸೇರಿ ಐವರು ಭೂ ಸಮಾಧಿ ಆಗಿದ್ದರು. ಕಾವೇರಿ, ಲಕ್ಷ್ಮಣತೀರ್ಥ ಹಾಗೂ ಜಿಲ್ಲೆಯ ಇತರ ನದಿಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದ ಸಾಕಷ್ಟು ಹಾನಿಯೂ ಸಂಭವಿಸಿತ್ತು. ಆಗಸ್ಟ್ನಲ್ಲೇ ಜಿಲ್ಲೆಯಲ್ಲಿ ಮಳೆಗಾಲದ ಅನಾಹುತಗಳು ಸಂಭವಿಸುತ್ತಿದ್ದ ಕಾರಣ ಆಗಸ್ಟ್ ತಿಂಗಳು ಬಂದರೆ ಸಾಕು ಬೆಚ್ಚಿಬೀಳುವಂತಾಗಿತ್ತು.
2021, 2022 ಹಾಗೂ 2023ರಲ್ಲಿ ಆಗಸ್ಟ್ ಸೇರಿದಂತೆ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಹಾನಿ ಆಗಿರಲಿಲ್ಲ. ಹಾಗಾಗಿ ಜಿಲ್ಲೆಗೆ ಅಂಟಿಕೊAಡಿದ್ದ ಆಗಸ್ಟ್ ಕಂಟಕ್ಕೆ ಮುಕ್ತಿ ಸಿಕ್ಕಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆಯೇ ಈ ವರ್ಷ ಮತ್ತೆ ಆಗಸ್ಟ್ನ ಆತಂಕದ ಕರಿಮೋಡ ಕಾಣಿಸಿಕೊಂಡಿದೆ. ಜುಲೈ ಆರಂಭದಿAದಲೇ ಪ್ರತಾಪ ತೋರಿಸುತ್ತಿರುವ ಮಳೆರಾಯ ಈಗ ಮತ್ತೊಮ್ಮೆ ಅಬ್ಬರಿಸಿದ್ದು, ಕಾವೇರಿ, ಹಾರಂಗಿ, ಲಕ್ಷö್ಮಣತೀರ್ಥ, ಹೇಮಾವತಿ ಸೇರಿದಂತೆ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಆ.4ರ ಪ್ರಕಾರ ಕೊಡಗಿನಲ್ಲಿ ಭಾರಿ ಮಳೆ ಆಗಲಿದೆ. ಈಗಾಗಲೇ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮಳೆಯ ಪ್ರಮಾಣ ಮತ್ತೆ ಜಾಸ್ತಿ ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಪ್ರವಾಹಕ್ಕೆ ಒಳಗಾಗುವ ಕುಶಾಲನಗರದ ನದಿ ಪಾತ್ರದ ಬಡಾವಣೆಗಳು, ಚೆರಿಯಪರಂಬು, ನೆಲ್ಲಿಹುದಿಕೇರಿ, ಕರಡಿಗೋಡು ಭಾಗದ ನದಿ ಬದಿಯ ಜನವಸತಿ ಪ್ರದೇಶಗಳಿಗೆ ಈಗಾಗಲೇ ನೀರು ನುಗ್ಗಿದೆ. ಅಲ್ಲಿನ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮಳೆಯ ಪ್ರಮಾಣ ಈ ವರ್ಷ ಹೆಚ್ಚಾಗುತ್ತಿರುವುದರಿಂದ ಅಲ್ಲಲ್ಲಿ ಭೂಕುಸಿತ ಪ್ರಕರಣಗಳು ವರದಿಯಾಗುತ್ತಿದೆ. ಸಂಪಾಜೆ, ಭಾಗಮಂಡಲ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಆಗಿದೆ. ಮಡಿಕೇರಿ-ಮಂಗಳೂರು ರಾಷ್ಟೀಯ ಹೆದ್ದಾರಿಯ ಕರ್ತೋಜಿ ಎಂಬಲ್ಲಿ ಹೆದ್ದಾರಿಯೇ ಅಪಾಯದಲ್ಲಿದೆ. ಭೂಕುಸಿತದ ಕಾರಣಕ್ಕೆ ಶ್ರೀಮಂಗಲ-ಕುಟ್ಟ ಮಧ್ಯೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಆಗಸ್ಟ್ನಲ್ಲೂ ಭಾರಿ ಮಳೆ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತವೂ ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು, ಅನಾಹುತದ ಮಾಹಿತಿ ಸಿಕ್ಕಿದ ಕೂಡಲೇ ಸ್ಪಂದಿಸಲು ತಯಾರಾಗಿದ್ದಾರೆ.
2018ರ ಆಗಸ್ಟ್ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಆದ ಅನಾಹುತಗಳ ಹಿನ್ನೆಲೆಯಲ್ಲಿ ಈ ಬಾರಿಯೂ ಮಳೆಯಿಂದ ಆಗುವ ಅನಾಹುತಗಳನ್ನು ತಡೆಯಲು ಅಧಿಕಾರಿಗಳ ಜೊತೆಗೆ ಎಲ್ಲಾ ನಾಗರಿಕರು ಸಜ್ಜಾಗಿರಬೇಕು. ಮಳೆ, ಗಾಳಿಗೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಸಹಜವಾಗಿ ಹದಗೆಡುತ್ತದೆ. ಈ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವAತಾಗಬೇಕು. ಸಾರ್ವಜನಿಕರು ಅಧಿಕಾರಿ, ಸಿಬ್ಬಂದಿಗಳಿಗೆ ಕರೆ ಮಾಡುತ್ತಾರೆ. ಈ ವೇಳೆ ಕರೆಯನ್ನು ಸ್ವೀಕರಿಸುವ ಸೌಜನ್ಯ ಇಟ್ಟುಕೊಳ್ಳಬೇಕು.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳ ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವAತೆ ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ತಹಸೀಲ್ದಾರರು, ತಾ.ಪಂ. ಇಒಗಳು ಹಾಗೂ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಪ್ರವಾಹ ಮತ್ತು ಭೂಕುಸಿತ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಮತ್ತು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವ ಜೊತೆಗೆ ಕಾಳಜಿ ಕೇಂದ್ರದಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸಲು ಸೂಚಿಲಾಗಿದೆ
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜು.31ರಿಂದ ಆ.4ರ ತನಕ ಕೊಡಗಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಾಧಾರಣದಿಂದ ಅತಿ ಹೆಚ್ಚು ಮಳೆ ಬರುವ ಸಂಭವವಿದೆ. ಗಂಟೆಗೆ 7-9 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾದ್ಯತೆಯಿದೆ. ಗರಿಷ್ಠ ಉಷ್ಣಾಂಶ 25.6-27.5 ಡಿ.ಸೆ. ಮತ್ತು ಕನಿಷ್ಠ ಉಷ್ಣಾಂಶ 16.5-18.3 ಡಿ.ಸೆ. ವರೆಗೆ ದಾಖಲಾಗುವ ಸಾಧ್ಯತೆಯಿದೆ.
ಡಾ. ಜಿ.ವಿ. ಸುಮಂತ್‌ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ
ಸಕ್ರಿಯ ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಬಾರಿ ಭಾರತಕ್ಕೆ ಹತ್ತಿರದಲ್ಲಿ ಇಂತಹ ಯಾವುದೇ ಜ್ವಾಲಾಮುಖಿಗಳು ಕಂಡುಬರುತ್ತಿಲ್ಲ. 2019ರಲ್ಲಿ ಭಾರಿ ಮಳೆಯ ನನ್ನ ಭವಿಷ್ಯ ಸರಿಯಾಗಿತ್ತು. 2020, 2021, 2022 ರಲ್ಲಿ ನಾನು ಸಾಮಾನ್ಯ ಮುಂಗಾರು ಊಹಿಸಿದ್ದೆ. ಅದು ಕೂಡ ಸರಿಯಾಯಿತು. 2023ಕ್ಕೆ ನಾನು ನೈಋತ್ಯ ಮತ್ತು ಈಶಾನ್ಯ ಮುಂಗಾರಿನಲ್ಲೂ ಮಳೆಯ ಕೊರತೆ ಊಹಿಸಿದ್ದು ಕೂಡ ಸರಿ ಎಂದು ಸಾಬೀತಾಗಿದೆ. 2024ರಲ್ಲೂ ಇದು ಮುಂದುವರಿಯಲಿದೆ. ಕೊಡಗಿನಲ್ಲಿ ಮಳೆಯಿಂದ ದೊಡ್ಡ ಮಟ್ಟದ ಹಾನಿ ಆಗುವುದಿಲ್ಲ.
ಡಾ. ಹೆಚ್.ಎಸ್.ಎಂ. ಪ್ರಕಾಶ್, ಭೂ ವಿಜ್ಞಾನಿ, ಬೆಂಗಳೂರು