

ಮಡಿಕೇರಿ:
ಪ್ರವಾಸಕ್ಕೆ ಸೂಕ್ತ ಸ್ಥಳ ಯಾವುದು ಎನ್ನುವುರ ಬಗ್ಗೆ ಗೂಗಲ್‌ನಲ್ಲಿ ಭಾರತೀಯರು ಹುಡುಕಾಡಿದ ಟಾಪ್ ಟೆನ್ ಸ್ಥಳಗಳ ಪೈಕಿ ಕೊಡಗು ೭ನೇ ಸ್ಥಾನದಲ್ಲಿದೆ. ವರ್ಷ ಪೂರ್ತಿ ಸತತ ದುಡಿಮೆಯಿಂದ ಜಡ್ಡಗಟ್ಟಿದ ಮನಸ್ಸುಗಳಿಗೆ ಒಂದಿಷ್ಟು ಹುರುಪು ನೀಡುವ ನಿಟ್ಟಿನಲ್ಲಿ ಉತ್ತಮ ತಾಣಗಳಿಗೆ ಪ್ರವಾಸ ಹೋಗುವುದು ಇತ್ತೀಚಿನ ಟ್ರೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಅಂತಹ ಆಕರ್ಷಕ ಸ್ಥಳಗಳಿಗಾಗಿ ೨೦೨೩ರಲ್ಲಿ ನಡೆದ ಹುಡುಕಾಟದ ವಿವರಗಳನ್ನು ಗೂಗಲ್ ಬಿಡುಗಡೆ ಮಾಡಿದ್ದು, ದೇಶ ವಿದೇಶಗಳ ಪ್ರವಾಸಿತಾಣಗಳ ಪಟ್ಟಿಯಲ್ಲಿ ಕೊಡಗು ಕೂಡ ಸ್ಥಾನ ಪಡೆದುಕೊಂಡಿರುವುದು ಜಿಲ್ಲೆಯ ಪ್ರವಾಸೋದ್ಯಮಿಗಳ ಮುಖದಲ್ಲಿ ನಗು ಅರಳಲು ಕಾರಣವಾಗಿದೆ.
ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್ ಎಂದು ಕರೆಯಲಾಗುತ್ತದೆ. ದಕ್ಷಿಣದ ಕಾಶ್ಮೀರ ಎನ್ನುವ ಹೆಗ್ಗಳಿಯೂ ಇದೆ. ಪಶ್ಚಿಮಘಟ್ಟದ ಸರಗಿನಲ್ಲಿ ಮಲೆನಾಡಿನ ಮಡಿಲಲ್ಲಿರುವ ಇರುವ ಕೊಡಗು ತನ್ನ ಅತ್ಯದ್ಭುತ ಪ್ರಾಕೃತಿಕ ಸೌಂದರ್ಯದಿಂದಲಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕರಾವಳಿ ಪ್ರವಾಸೋದ್ಯಮ ಉತ್ತುಂಗದಲ್ಲಿದ್ದ ಸಮಯದಲ್ಲಿ ೨೦೦೪ರಲ್ಲಿ ದೇಶದ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರ ಪ್ರವಾಸಿಗರ ಆದ್ಯತೆಯ ಕ್ಷೇತ್ರ ಬದಲಾಯಿತು. ಪಶ್ಚಿಮಘಟ್ಟದ ಗಿರಿ ಶ್ರೇಣಿಗಳ ಕಡೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಹೀಗೆ ಕಳೆದ ೨ ದಶಕಗಳಿಂದ ಈಚೆಗೆ ಕೊಡಗಿನಲ್ಲಿ ವಾಣಿಜ್ಯಿಕವಾಗಿ ಶುರುವಾದ ಪ್ರವಾಸೋದ್ಯಮ ಈಗ ಒಂದು ಹಂತಕ್ಕೆ ತಲುಪಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗಿದೆ.
೨೦೧೮ರ ನಂತರ ಸತತ ಮೂರು ವರ್ಷಗಳ ಕಾಲ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿಕ ವಿಕೋಪ, ಅತಿವೃಷ್ಠಿ ಹಾಗೂ ನಂತರ ಜಗತ್ತಿಗೆ ಕಂಟಕವಾಗಿದ್ದ ಕೊರೊನಾ ಕೊಡಗಿನ ಪ್ರವಾಸೋದ್ಯಮಕ್ಕೆ ಸ್ವಲ್ಪ ಹಿನ್ನಡೆಯನ್ನುಂಟುಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಚೇತರಿಸಿಕೊಂಡ ಜಿಲ್ಲೆ ಈಗ ಮತ್ತೆ ಪುಟಿದೆದ್ದಿದೆ. ಕಳೆದ ೨ ವರ್ಷದಿಂದ ಈಚೆಗೆ ಪ್ರವಾಸಿಗರ ಸಂದಣಿ ಪುನಃ ಮೊದಲಿನಂತೆ ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಪ್ರವಾಸಿ ಚಟುವಟಿಕೆಗಳು ಬಿರುಸುಗೊಂಡಿದ್ದು, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ನಡೆದಿದೆ. ಮಾರ್ಚ್‌ನಿಂದ ಮೇ ತನಕದ ಪ್ರವಾಸಿ ಸೀಸನ್, ಜೂನ್‌ನಿಂದ ಆಗಸ್ಟ್ ತನಕ ಮಳೆಗಾಲದ ಪ್ರವಾಸೋದ್ಯಮ, ಅಕ್ಟೋಬರ್‌ನಲ್ಲಿ ದಸರಾ ರಜೆ, ಡಿಸೆಂಬರ್ ಮತ್ತು ಜನವರಿಯಲ್ಲಿ ವರ್ಷಾಂತ್ಯ ಮತ್ತು ಹೊಸ ವರ್ಷಾರಂಭದ ಸಂಭ್ರಮ.. ಹೀಗೆ ಒಂದಿಲ್ಲೊಂದು ಕಾರಣಕ್ಕೆ ಕೊಡಗನಲ್ಲಿ ಪ್ರವಾಸಿಗರ ಕಲರವ ಇದ್ದೇ ಇರುತ್ತದೆ.
ಇದೀಗ ಗೂಗಲ್ ಬಿಡುಗಡೆ ಮಾಡಿರುವ ಭಾರತೀಯರು ೨೦೨೩ರಲ್ಲಿ ಹುಡುಕಾಡಿದ ಪ್ರವಾಸಿತಾಣಗಳ ಟಾಪ್ ಟೆನ್ ಪಟ್ಟಿಯಲ್ಲಿ ಕೊಡಗು ೭ನೇ ಸ್ಥಾನ ಪಡೆದುಕೊಂಡಿರುವುದು ಜಿಲ್ಲೆಯ ಪ್ರವಾಸೋದ್ಯಮ ಏರುಗತಿಯಲ್ಲಿರುವುದರ ಸೂಚನೆಯಾಗಿದೆ ಎಂದು ವಿಶ್ಲೇಷಿಸುತ್ತಾರೆ ಪ್ರವಾಸೋದ್ಯಮಿಗಳು. ಈ ಪಟ್ಟಿಯಲ್ಲಿ ವಿಯೆಟ್ನಾಂ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನು ಕ್ರಮವಾಗಿ ಗೋವಾ, ಬಾಲಿ, ಶ್ರೀಲಂಕಾ, ಥಾಯ್‌ಲ್ಯಾಂಡ್, ಕಾಶ್ಮೀರ, ಕೊಡಗು, ಅಂಡಾಮಾನ್ ಮತ್ತು ನಿಕೋಬಾರ್, ಇಟಲಿ ಹಾಗೂ ಸ್ವಿಟ್ಜರ್‌ಲ್ಯಾಂಡ್ ಪಡೆದುಕೊಂಡಿದೆ. ೨೦೨೩ ಮುಗಿಯುತ್ತಾ ಬಂದಿದ್ದು, ೨೦೨೪ನ್ನು ಸ್ವಾಗತಿಸಲು ಜಗತ್ತು ಸಿದ್ಧವಾಗಿರುವ ಸಮಯದಲ್ಲಿ ಹಳೆಯ ಜಂಜಾಟಗಳನ್ನು ಮರೆತು ಹೊಸ ಸ್ಫೂರ್ತಿ ತುಂಬಿಸಿಕೊಳ್ಳುಲು ಸೂಕ್ತ ಸ್ಥಳದ ಹುಡುಕಾಟದಲ್ಲಿ ಜನರಿರುವಾಗ ಗೂಗಲ್‌ನ ಈ ಪಟ್ಟಿ ಬಿಡುಗಡೆ ಮಾಡಿರುವುದು ಪ್ರವಾಸಿ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಜಿಲ್ಲೆಯ ಪ್ರಾಕೃತಿಕ ಸೊಬಗಿನ ಆಕರ್ಷಣೆ, ಮೋಡಿ ಮಾಡುವ ಪರಿಸರ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸೆಳೆಯಲು ಕಾರಣವಾಗಿದೆ. ದೇಶದ ಪ್ರಮುಖ ಗಿರಿಧಾಮಗಳ ಪಟ್ಟಿಯಲ್ಲೂ ಕೊಡಗು ಸ್ಥಾನ ಪಡೆದುಕೊಂಡಿದೆ. ಇಲ್ಲಿಯ ಕಾಫಿ ತೋಟ, ಜಲಪಾತಗಳು, ಹಸಿರು ತುಂಬಿದ ದಟ್ಟ ಕಾಡು, ವನ್ಯಜೀವಿ ತಾಣಗಳಿಗೆ ಜಿಲ್ಲೆ ಹೆಸರಾಗಿದೆ. ಇಲ್ಲಿಯ ವಾತಾವರಣ ಶಾಂತಿ ಮತ್ತು ತಾಜಾತನವನ್ನು ಪ್ರವಾಸಿಗರಲ್ಲಿ ತುಂಬುತ್ತದೆ ಎನ್ನುವ ನಂಬಿಕೆಯೂ ಇದೆ. ಟ್ರಕ್ಕಿಂಗ್, ರ‌್ಯಾಫ್ಟಿಂಗ್, ಕ್ಯಾಂಪಿಂಗ್‌ನಂತಹ ಸಾಹಸ ಕ್ರೀಡೆಗಳನ್ನೂ ಆನಂದಿಸಬಹುದು. ಮಡಿಕೇರಿ ಕೋಟೆ, ಅಬ್ಬಿಫಾಲ್ಸ್, ರಾಜಾ ಸೀಟ್, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರ ಪ್ರಮುಖ ಆಕರ್ಷಣೆಗಳಾಗಿದೆ. ಅಕ್ಟೋಬರ್‌ನಿಂದ ಮಾರ್ಚ್ ತನಕದ ಅವಧಿಗೆ ಜಿಲ್ಲೆಗೆ ಭೇಟಿ ನೀಡಲು ಅತ್ಯುತ್ತಮವಾಗಿರುತ್ತದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಕೊಡಗಿನ ಆರ್ಥಿಕತೆಯ ದೃಷ್ಟಿಯಿಂದ ಸ್ವಾಗತಿಸುವವರ ಮಧ್ಯೆ ಪ್ರವಾಸೋದ್ಯಮದಿಂದ ಜಿಲ್ಲೆಯ ಪರಿಸರಕ್ಕೆ ಹಾನಿ ಆಗುತ್ತಿದೆ ಎನ್ನುವ ಆರೋಪಗಳಿವೆ. ರೆಸಾರ್ಟ್, ಹೋಮ್‌ಸ್ಟೇ ನಿರ್ಮಾಣಕ್ಕೋಸ್ಕರ ಇಲ್ಲಿಯ ಬೆಟ್ಟ, ಗುಡ್ಡಗಳಿಗೆ ಕನ್ನ ಹಾಕಲಾಗುತ್ತಿದೆ. ನದಿ ಮಾಲಿನ್ಯ ಹೆಚ್ಚಳಕ್ಕೂ ಪ್ರವಾಸೋದ್ಯಮ ಕಾರಣವಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಸುಸ್ಥಿರ ಪ್ರವಾಸೋದ್ಯಮದ ಕಡೆಗೆ ಚಿಂತನೆ ಹರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಆಸಕ್ತರು ಕೃಷಿ ಪ್ರವಾಸೋದ್ಯಮ, ಪ್ಲಾಂಟೇಷನ್ ಟೂರ್‌ನಂತ ಪರಿಸರಕ್ಕೆ ಪೂರಕ ಚಟುವಟಿಕೆಗಳ ಕಡೆಗೆ ಇತ್ತೀಚಿನ ದಿನಗಳಲ್ಲಿ ಆದ್ಯತೆ ಕೊಡುತ್ತಿದ್ದಾರೆ.
ಮತ್ತೊಂದು ಕಡೆ ಜಿಲ್ಲೆಯಲ್ಲಿ ಮಡಿಕೇರಿ ಕೇಂದ್ರಿಕತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದರಿಂದ ಜಿಲ್ಲಾ ಕೇಂದ್ರದ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕೊಡಗಿನ ಇತರ ಭಾಗಗಳಲ್ಲೂ ಅತ್ಯುತ್ತಮ ಪ್ರೇಕ್ಷಣೀಯ ತಾಣಗಳಿದ್ದು, ಇವುಗಳ ಬಗ್ಗೆಯೂ ಪ್ರಚಾರ ಕೊಡಬೇಕಿದೆ. ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಸಮತೋಲನ ಸಾಧಿಸಿದಂತಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಿಂದ ಆಗಮಿಸುವ ಪ್ರವಾಸಿಗರು ಸಹಜವಾಗಿ ನೇರವಾಗಿ ಮಡಿಕೇರಿಗೆ ಭೇಟಿ ಕೊಡುತ್ತಾರೆ. ತಂಗಲು ಇಲ್ಲಿಯೇ ವ್ಯವಸ್ಥೆ ಮಾಡಿಕೊಂಡು ಸುತ್ತಮುತ್ತಲಿನ ಹತ್ತಿರದ ಪ್ರವಾಸಿತಾಣಗಳಿಗೆ ತೆರಳುತ್ತಾರೆ. ಹಾಗಾಗಿಯೇ ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಮಡಿಕೇರಿ ಬ್ಯುಸಿ ಆಗಿಬಿಡುತ್ತದೆ. ಪ್ರೇಕ್ಷಣೀಯ ಸ್ಥಳಗಳು ಭರ್ತಿ ಆಗಿ ಅನಗತ್ಯ ಒತ್ತಡಕ್ಕೆ ಕಾರಣವಾಗುತ್ತದೆ. ಆದರೆ ಜಿಲ್ಲೆಯ ಇತರ ಪ್ರವಾಸಿ ಕೇಂದ್ರಗಳಲ್ಲಿ ಈ ಮಟ್ಟಿಗೆ ಪ್ರವಾಸಿಗರು ಇರುವುದಿಲ್ಲ.
ವರ್ಷಾಂತ್ಯ ಮತ್ತು ಹೊಸ ವರ್ಷದ ಪ್ರವಾಸೋದ್ಯಮಕ್ಕೆ ಈಗಾಗಲೇ ಕೊಡಗಿನಲ್ಲಿ ಚಾಲನೆ ಸಿಕ್ಕಿದೆ. ಡಿಸೆಂಬರ್ ಮೊದಲ ವಾರದಿಂದಲೇ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಕಳೆದ ಶನಿವಾರ ಮತ್ತು ಭಾನುವಾರದ (೯,೧೦) ವಾರಾಂತ್ಯ ದಿನಗಳಲ್ಲಿ ಬಹುತೇಕ ಪ್ರವಾಸಿ ತಾಣಗಳು ಗಿಜಿಗುಡುತ್ತಿದ್ದವು. ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ಬುಕ್ಕಿಂಗ್ ಆರಂಭವಾಗಿದ್ದು. ಡಿ. ೨೪ರ ನಂತರ ಜನವರಿ ಮೊದಲ ವಾರದ ತನಕ ಹೆಚ್ಚಿನ ರೂಂಗಳು ಬುಕ್ಕಿಂಗ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರೂಂಗಳ ಬಾಡಿಗೆ ದರವನ್ನೂ ಜಾಸ್ತಿ ಮಾಡಲಾಗಿದೆ. ಕೊಠಡಿ ಬುಕ್ಕಿಂಗ್‌ಗೆ ವಿಚಾರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬರುತ್ತಿವೆ ಎನ್ನುತ್ತಾರೆ ರೆಸಾರ್ಟ್ ಸಿಬ್ಬಂದಿ. ಹೊಸ ವರ್ಷದ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳಲ್ಲಿ ವಿಶೇಷ ಪಾರ್ಟಿ ಸೇರಿದಂತೆ ಮನೋರಂಜನಾ ಚಟುವಟಿಕೆಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ವಿವಿಧ ಪ್ಯಾಕೇಜ್‌ಗಳನ್ನೂ ನಿಗದಿಪಡಿಸಲಾಗಿದೆ. ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ಹಲವು ರೀತಿಯ ಪ್ರಯೋಗಗಳನ್ನೂ ಮಾಡಲಾಗುತ್ತಿದೆ.
ಕೊಡಗಿನ ಪ್ರಾಕೃತಿಕ ಸೌಂದರ್ಯ ನಮಗೆ ದೇವರ ಕೊಡುಗೆ ಇದ್ದಂತೆ. ಊಟಿಯಂತಹ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕೃತಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿರುತ್ತದೆ. ಆದರೆ ಕೊಡಗಿನಲ್ಲಿ ಪ್ರಕೃತಿಯೇ ಆಕರ್ಷಣೀಯವಾಗಿದೆ. ಮಡಿಕೇರಿ-ಚೆಟ್ಟಳ್ಳಿ ರಸ್ತೆ ಅಥವಾ ಮಾಂದಲಪಟ್ಟಿಗೆ ತೆರಳಿದರೆ ಸಾಕು, ಇಲ್ಲಿಯ ಪ್ರಕೃತಿ ಎಷ್ಟು ಅತ್ಯಾಕರ್ಷಕವಾಗಿದೆ ಎನ್ನುವುದು ಗೊತ್ತಾಗುತ್ತದೆ. ಜಿಲ್ಲೆಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಇಲ್ಲಿಯ ಪ್ರವಾಸೋದ್ಯಮಿಗಳೇ ಗುರುತಿಸಿ ಬೆಳಕಿಗೆ ತರುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯೂ ಕೆಲಸ ಮಾಡಬೇಕು. ಕೊಡಗಿನ ಪ್ರವಾಸಿತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಚಾರಪಡಿಸಿದರೆ ನಂಬರ್ ಒನ್ ಪ್ರವಾಸಿ ತಾಣ ಆಗುವುದರಲ್ಲಿ ಸಂಶಯವಿಲ್ಲ.
ಬಿ.ಆರ್. ನಾಗೇಂದ್ರ ಪ್ರಸಾದ್, ಅಧ್ಯಕ್ಷ, ಹೊಟೇಲ್, ರೆಸಾರ್ಟ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಷನ್, ಕೊಡಗು