

ಮಂಡ್ಯ: ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿರುವ ಜಮೀನು ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೊಡಗಹಳ್ಳಿ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಧರಣಿ ನಡೆಸಿದರು.
ತಾಲೂಕು ಕಚೇರಿ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಟಾವು ಮಾಡಿಸಿ ಮಾರಾಟ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸ.ನಂ.37 ರಲ್ಲಿ ಸರ್ಕಾರಿ ಗೋಮಾಳ 133 ಎಕರೆ ಪ್ರದೇಶವಿದ್ದು, ಇದರಲ್ಲಿ ಅರಣ್ಯ ಇಲಾಖೆಗೆ 21 ಎಕರೆ ಸೇರಿದೆ. ಈ ಜಮೀನಿನಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ರಕ್ತ ಚಂದನ, ಸಿಲ್ವರ್, ಶ್ರೀಗಂಧ ಹಾಗೂ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ. ಇದು ಸಾಲದೆಂಬಂತೆ ನಾಲ್ಕು ಜನರಿಗೆ ತಲಾ ನಾಲ್ಕು ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.
ಅಕ್ರಮವಾಗಿ ಮಂಜೂರು ಮಾಡಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿ ಅವರು ದಾಖಲೆ ಸಮಂಜಸವಿಲ್ಲವೆಂದು ಹೇಳಿ ಮಂಜೂರಾದ ಜಮೀನನ್ನು ವಜಾ ಮಾಡಿರುತ್ತಾರೆ. ಇದರ ಬಗ್ಗೆಯೂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೂ, ಆ ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ಇಷ್ಟೆಲ್ಲ ಆದರೂ ಮಂಡ್ಯ ತಹಸೀಲ್ದಾರ್ ಅವರು 2020 ರಲ್ಲಿ ನಾಲ್ವರಿಗೆ ತಲಾ ನಾಲ್ಕು ಎಕರೆ ಜಮೀನು ಮಂಜೂರು ಮಾಡಿದ್ದಾರೆ. 40 ರಿಂದ 50 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅರಣ್ಯದ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸುಮಾರು 30 ಲೋಡ್‌ಗಳಿಗೂ ಹೆಚ್ಚು ಸಾಗಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಗೋಮಾಳದ ಸ್ಥಳವು ಹಾಗೆಯೇ ಉಳಿಸಿಕೊಳ್ಳಬೇಕು. ಇದು ಜಾನುವಾರುಗಳ ಮೇವಿಗೆ ಹಾಗೂ ಅರಣ್ಯ ಪ್ರದೇಶ ಉಳಿವಿಗೆ ಸಾಧ್ಯವಾಗುತ್ತದೆ. ಈಗಾಗಲೇ ಜಮೀನು ಮಂಜೂರು ಮಾಡಿರುವುದನ್ನು ವಾಪಸ್ ಪಡೆಯಬೇಕು. ಇನ್ನು ಮುಂದೆ ಯಾರಿಗೂ ಜಮೀನು ಮಂಜೂರು ಮಾಡುವುದಿಲ್ಲ ಎನ್ನುವುದನ್ನು ಖಾತ್ರಿಗೊಳಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮುಖಂಡರಾದ ಬಿ.ಟಿ.ವಿಶ್ವನಾಥ್, ಪ್ರೊ.ಹುಲ್ಕೆರೆ ಮಹದೇವು, ಅಣ್ಣಯ್ಯ, ನವೀನ್, ಪವನ್, ಮಹೇಶ್, ರವೀಂದ್ರ, ಗ್ರಾಮಸ್ಥರಾದ ಹೊಂಬಾಳೇಗೌಡ, ತಮ್ಮಯ್ಯ, ಬಸವರಾಜು, ಅನಿಲ್, ಅಪ್ಪಾಜಿ ಇದ್ದರು.