

ಹೊಸನಗರ: ಅರಿಶಿನಗುಂಡಿ ಾಲ್ಸ್ ದುರಂತದ ಬಳಿಕ ಪ್ರವೇಶ ನಿರ್ಬಂಧಗೊಂಡಿದ್ದ ಕೊಡಚಾದ್ರಿ ಗಿರಿ ಭಾನುವಾರದಿಂದ ಪ್ರವಾಸಿಗರಿಗೆ ಮತ್ತೆ ಮುಕ್ತವಾಗಿದೆ. ಆದರೆ ಮುಚ್ಚಳಿಕೆ ಬರೆದು ಕೊಟ್ಟರೆ ಮಾತ್ರ ಎಂದು ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ವನ್ಯಜೀವಿ ಇಲಾಖೆ ಪ್ರವೇಶಕ್ಕೆ ಷರತ್ತು ವಿಧಿಸಿದೆ.
ಜು.30ರಂದು ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಣಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದು ಕೊಡಚಾದ್ರಿ ಗಿರಿಗೂ ಅನ್ವಯವಾಗಿತ್ತು. ಕೊಡಚಾದ್ರಿ ಪ್ರವಾಸಿ ತಾಣದ ಜತೆ ಧಾರ್ಮಿಕ ಕ್ಷೇತ್ರವಾಗಿದೆ. ಜತೆಗೆ ಸಾಕಷ್ಟು ಕುಟುಂಬಗಳು ಇದರಿಂದ ಅತಂತ್ರವಾಗುತ್ತವೆ ಎಂದು ಕೊಡಚಾದ್ರಿ ವ್ಯವಸ್ಥಾಪನ ಸಮಿತಿಯಿಂದ ಕಟ್ಟಿನಹೊಳೆಯಲ್ಲಿ ಪ್ರತಿಭಟನೆ ನಡೆಸಿ, ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಲಾಗಿತ್ತು.
ಕೆಲ ದಿನಗಳಿಂದ ಕೊಡಚಾದ್ರಿ ಗಿರಿ ಪ್ರವೇಶಕ್ಕೆ ಹಾಕಿರುವ ನಿರ್ಬಂಧವನ್ನು ತೆರವುಗೊಳಿಸಿದ ವನ್ಯಜೀವಿ ಇಲಾಖೆಯ ಕ್ರಮವನ್ನು ಕೊಡಚಾದ್ರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವರಾಮ ಎನ್.ಶೆಟ್ಟಿ ಸಂಪದಮನೆ ಸ್ವಾಗತಿಸಿದ್ದಾರೆ. ಗಿರಿ ಪ್ರವೇಶ ನಿರ್ಬಂಧದಿಂದ ಧಾರ್ಮಿಕ ಹರಕೆ ಹೊತ್ತು ಬರುವ ಭಕ್ತಾಧಿಗಳಿಗೆ ತೊಂದರೆಯಾಗಿತ್ತು. ನಮ್ಮ ಪ್ರತಿಭಟನಾ ಮನವಿಗೆ ವನ್ಯಜೀವಿ ಇಲಾಖೆ ಸ್ಪಂದಿಸಿದೆ. ಭಕ್ತಾಧಿಗಳು ಕೂಡ ತಮ್ಮ ಇತಿಮಿತಿ ಅರಿತು ಗಿರಿಯ ಪಾವಿತ್ರತ್ಯೆ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಮುಚ್ಚಳಿಕೆಯಲ್ಲೇನಿದೆ?
ಕೊಡಚಾದ್ರಿ ಗಿರಿಗೆ ಪ್ರವಾಸಿಗರು, ಭಕ್ತರನ್ನು ಕರೆದುಕೊಂಡು ಹೋಗುವ ವಾಹನ ಮಾಲೀಕ ಸ್ವ-ಇಚ್ಛೆಯಿಂದ ಮುಚ್ಚಳಿಕೆ ಬರೆದು ಕೊಡಬೇಕಿದೆ. ಪ್ರವಾಸಿಗರನ್ನು ಕಟ್ಟಿನಹೊಳೆ ರಸ್ತೆ ಮೂಲಕ ಕರೆದುಕೊಂಡು ಹೋಗುತ್ತಿದ್ದೇನೆ. ರಸ್ತೆ ಹದಗೆಟ್ಟಿರುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿ ಆಗಿರುವುದು ನಿಜ. ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಭಕ್ತಾಧಿಗಳು, ಪ್ರವಾಸಿಗರಿಗೆ ಏನಾದರೂ ಅನಾಹುತವಾದಲ್ಲಿ ಅಥವಾ ಇತರ ನಷ್ಟ, ವಾಹನ ಹಾನಿ ಸಂಭವಿಸಿದಲ್ಲಿ ಮಾಲೀಕನೇ ಜವಾಬ್ದಾರಿ. ನಿಗದಿ ಪಡಿಸಿದ ಸಮಯದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವುದು, ಆ ಸಮಯದೊಳಗೆ ಬರುವುದು ಮತ್ತು ಸಿಬ್ಬಂದಿಗೆ ಯಾವುದೇ ಒತ್ತಡ ಹಾಕದಿರುವುದು, ಧ್ವನಿವರ್ಧಕ ಬಳಸಿ ವನ್ಯಜೀವಿಗಳ ಚಲನವಲನಗಳಿಗೆ ತೊಂದರೆ ಕೊಡುವುದಿಲ್ಲ. ಮದ್ಯಪಾನ ಮಾಡುವುದಿಲ್ಲ. ಮಾದಕ ವಸ್ತುಗಳ ನಿರ್ಬಂಧ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ, ಪ್ರವೇಶ ಶುಲ್ಕದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುತ್ತೇನೆ. ಪ್ರವಾಸಿಗರು ಗೇಟ್ ಬಳಿ ಅನಗತ್ಯ ತಕರಾರು ಮಾಡದಿರುವಂತೆ ಜವಾಬ್ದಾರಿ ವಹಿಸುವೆ. ಅರಣ್ಯ ಇಲಾಖೆ ಕಾಲಕಾಲಕ್ಕೆ ನೀಡುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಡಬೇಕಿದೆ.