ಬೆಟ್ಟ ಗುಡ್ಡಗಳಲ್ಲಿ ರೆಸಾರ್ಟ್ ನಿರ್ಮಿಸಿ ಕೊಡಗನ್ನು ನಾಶ ಮಾಡಲಾಗುತ್ತಿದೆ; ಎಂ.ಸಿ.ನಾಣಯ್ಯ

20adarshkdga1
Published on

ಮಡಿಕೇರಿ: ಬೆಟ್ಟ ಗುಡ್ಡಗಳಲ್ಲಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಕೊಡಗನ್ನು ನಾಶ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಬೇಸರ ವ್ಯಕ್ತಪಡಿಸಿದರು.


ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೊಡವ ಮಕ್ಕಡ ಕೂಟ ಮತ್ತು ಕಾವೇರಿಕೇರಿ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲ, ಕ್ರೀಡಾಪಟು ಹಾಗೂ ಬರಹಗಾರ ಬಾಳೆಯಡ ಕಿಶನ್ ಪೂವಯ್ಯರವರು ಬರೆದಿರುವ ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ ಹಾಗೂ ರಾಜಕೀಯ ಮತ್ತು ಪ್ರಕೃತಿ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.


ಇಂದು ಯಾವುದೇ ವಿಧದಲ್ಲೂ ಪುಟ್ಟ ಜಿಲ್ಲೆ ಕೊಡಗಿನ ಪ್ರಕೃತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಬೇರೆ ಜಿಲ್ಲೆಗಳನ್ನು ಹೋಲಿಸಿದರೆ ಕೊಡಗು ಹವಾನಿಯಂತ್ರಿತ ಗುಣವನ್ನು ಹೊಂದಿದೆ. ಅತ್ಯಂತ ಶ್ರೇಷ್ಠತೆಯನ್ನು ಹೊಂದಿರುವ ಇಲ್ಲಿನ ಪರಿಸರ ಮತ್ತು ಬೆಟ್ಟ ಗುಡ್ಡಗಳು ರೆಸಾರ್ಟ್‌ಗಳ ನಿರ್ಮಾಣದಿಂದ ನಾಶವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಮಾತ್ರ ಏನನ್ನೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಭ್ರಷ್ಟಾಚಾರ ಮಿತಿ ಮೀರಿದೆ. ರಾಜಕೀಯ ಹೊಲಸು ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿದೆ. ಹೊಡಿ, ಬಡಿ, ಕಡಿ ರಾಜಕಾರಣ ನಿರ್ಮಾಣವಾಗಿದೆ. ನಾನು ರಾಜಕೀಯದಿಂದ ದೂರ ಉಳಿಯಲು ಈ ಸಂದಿಗ್ಧ ಪರಿಸ್ಥಿತಿಯೂ ಒಂದು ಕಾರಣವಾಗಿದೆ ಎಂದರು.


ರಾಜಕೀಯ ಮತ್ತು ಪ್ರಕೃತಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಕೀಲ ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ, ಬರಹದಿಂದ ಸಮಾಜವನ್ನು ತಿದ್ದಬಹುದು ಎನ್ನುವ ಭ್ರಮೆ ಬೇಡ. ವೇದವ್ಯಾಸರ ಕಾಲದಿಂದಲೂ ಇದು ಸಾಧ್ಯವಾಗಿಲ್ಲ. ಆದರೆ ಪ್ರಯತ್ನಗಳು ಮುಂದುವರೆಯಲಿ, ಬರಹದ ಮೂಲಕ ಅಳಲನ್ನು ತೋಡಿಕೊಳ್ಳಬಹುದು, ಆತ್ಮವಂಚನೆ ಮಾಡದೆ ಬರೆಯುವುದು ಮುಖ್ಯ ಎಂದರು.


ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳೆಡೆಗೆ ಜನ ಆಕರ್ಷಿತರಾಗುತ್ತಿದ್ದಾರೆ, ಇದರಿಂದ ಪ್ರಚೋದನೆ ಮತ್ತು ಗಾಳಿ ಸುದ್ದಿಗಳು ಹೆಚ್ಚಾಗುತ್ತಿದೆ. ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಬರಹಗಾರನಿಗೆ ಸಾಮಾಜಿಕ ಚಿಂತನೆ ಮತ್ತು ಜಾಗೃತಿ ಅತಿಮುಖ್ಯ. ಆಳವಾದ ಚಿಂತನ, ಮಂಥನಗಳ ಮೂಲಕ ಲೇಖನಗಳನ್ನು ಬರೆದು ಪುಸ್ತಕಗಳನ್ನು ಪ್ರಕಟಿಸಬೇಕು, ಇವುಗಳಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಕ್ಸ್‌ಪ್ರೆಸ್ ಲಿ.ಸೌತ್ ಬ್ಲೂ ಡಾರ್ಟ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮುಖ್ಯಸ್ಥ ಬಾಳೆಯಡ ಸಿ.ಕಾಳಪ್ಪ, ಪುಸ್ತಕಗಳು ಮಾರ್ಗದರ್ಶಕವಾಗಿ ಕೆಲಸ ಮಾಡುತ್ತವೆ. ಜೀವನದಲ್ಲಿ ಬದಲಾವಣೆಯನ್ನು ತರುತ್ತವೆ. ಆದರೆ ಇಂದು ಮೊಬೈಲ್ ಮತ್ತು ಟಿವಿ ಪ್ರಭಾವದಿಂದಾಗಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.


ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಬರಹಗಾರರಿದ್ದಾರೆ, ಆದರೆ ಸಾಹಿತ್ಯಾಭಿಮಾನಿಗಳು ಶೂನ್ಯ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ, ಬರಹಗಾರರು ಹಾಗೂ ಓದುಗರ ಸಂಖ್ಯೆ ಹೆಚ್ಚಾಗಲಿ, ಎಲ್ಲರಲ್ಲಿ ಅರಿವು ಮೂಡಲಿ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿಕೇರಿ ಕೊಡವ ಸಂಘದ ಅಧ್ಯಕ್ಷೆ ಬಲ್ಯಾಟಂಡ ಲತಾ ಚಂಗಪ್ಪ, ಪುಸ್ತಕಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಮಕ್ಕಳು ಮೊಬೈಲ್ ಮತ್ತು ಟಿವಿ ಯಿಂದ ದೂರ ಉಳಿದು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವುದರ ಮೂಲಕ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದರು.


ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.


ಬರಹಗಾರರು ಆರ್ಥಿಕವಾಗಿ ಬಡವರಾಗಿರುತ್ತಾರೆ. ದಾನಿಗಳ ಪ್ರೋತ್ಸಾಹದಿಂದ ಪುಸ್ತಕಗಳನ್ನು ಹೊರ ತರುತ್ತಾರೆ. ನನಗೂ ದಾನಿಗಳು ಸಹಕಾರ ನೀಡಿದ್ದಾರೆ. ಕುಟುಂಬದ ಸದಸ್ಯರ ಪರಿಶ್ರಮ, ಹಿರಿಯರ ಪ್ರೋತ್ಸಾಹ ಮತ್ತು ಕೊಡವ ಮಕ್ಕಡ ಕೂಟದಿಂದ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು.
ಬಾಳೆಯಡ ಕಿಶನ್ ಪೂವಯ್ಯ, ಬರಹಗಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net