

ಪಾ.ಶ್ರೀ.ಅನಂತರಾಮ್ ಕೋಲಾರ
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರು ಕರೊನಾ ಪರಿಣಾಮ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ.
ಕರೊನಾ ಕಾಲಿಟ್ಟ ನಂತರ ನಂದಿನಿ ಹಾಲು ಮತ್ತು ಉತ್ಪನ್ನಗಳ ಮಾರಾಟ ಕಡಿಮೆಯಾಗಿರುವುದರಿಂದ ಒಕ್ಕೂಟ ಏಪ್ರಿಲ್‌ನಿಂದ ಜೂನ್‌ವರೆಗೆ ಸುಮಾರು 12ರಿಂದ 13 ಕೋಟಿ ರೂ.ನಷ್ಟ ಅನುಭವಿಸಿದ್ದು, ಸರ್ಕಾರದಿಂದ ಬರಬೇಕಾಗಿರುವ ಪ್ರೋತ್ಸಾಹಧನಕ್ಕಾಗಿ ಉತ್ಪಾದಕರು ಪರಿತಪಿಸುತ್ತಿದ್ದಾರೆ.
ಎರಡೂ ಜಿಲ್ಲೆಗಳ 11ತಾಲೂಕಿನಲ್ಲಿ ಚಾಲ್ತಿಯಲ್ಲಿರುವ 1856 ಎಂಪಿಸಿಎಸ್‌ಗಳ ಮೂಲಕ ಸುಮಾರು 75ರಿಂದ 80 ಸಾವಿರ ಸದಸ್ಯರು ಒಕ್ಕೂಟಕ್ಕೆ ಪ್ರಸ್ತುತ ದಿನಕ್ಕೆ 10.40 ಲಕ್ಷ ಲೀಟರ್ ಹಾಲು ಹಾಕುತ್ತಿದ್ದಾರೆ. ಸರ್ಕಾರ ಪ್ರತಿ ಲೀಟರ್ ಮೇಲೆ 5 ರೂ. ಪ್ರೋತ್ಸಾಹಧನ ಘೋಷಣೆ ಮಾಡಿದ್ದು, ಕಳೆದ 4 ತಿಂಗಳಿಂದ ಫಲಾನುಭವಿಗಳಿಗೆ 35ರಿಂದ 36 ಕೋಟಿ ರೂ. ಪಾವತಿಯಾಗಬೇಕಿದೆ.
13 ಕೋಟಿ ನಷ್ಟ:
ಕರೊನಾಕ್ಕಿಂತ ಮುಂಚೆ ಪ್ರತಿದಿನ 8 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿತ್ತು. ಆದ್ದರಿಂದ ಆಡಳಿತ ಮಂಡಳಿ ರೈತರ ಹಿತ ಕಾಯಲು ಹಾಲು ಖರೀದಿ ದರವನ್ನು ಲೀಟರ್‌ಗೆ 2ರೂ. ಹೆಚ್ಚಳ ಮಾಡಿ 29.05 ರೂ.ನಿಗದಿ ಮಾಡಿತ್ತು. ಪ್ರಸ್ತುತ 10.40 ಲಕ್ಷ ಲೀಟರ್ ಹಾಲು ಪ್ರತಿದಿನ ಸಂಗ್ರಹಣೆ ಆಗುತ್ತಿದ್ದು, ಮಾರಾಟ ಪ್ರಮಾಣ ಕುಸಿತದ ನಷ್ಟ ಭರಿಸಲು ಮತ್ತೆ ಲೀಟರ್ ಮೇಲೆ 2ರೂ. ಕಡಿತಗೊಳಿಸಿ 27.05 ರೂ.ನಿಗದಿ ಮಾಡಿರುವುದರಿಂದ ಒಕ್ಕೂಟಕ್ಕೆ ಕಳೆದ 3 ತಿಂಗಳಲ್ಲಿ 12ರಿಂದ 13 ಕೋಟಿ ನಷ್ಟವಾಗಿದೆ.
ಕಡಿಮೆಯಾದ ವಿಲೇವಾರಿ: ಒಕ್ಕೂಟ ಖರೀದಿ ಮಾಡುತ್ತಿರುವ ಹಾಲು ವಿಲೇವಾರಿಯಲ್ಲಿ 35,000 ಲೀಟರ್ ಕಡಿಮೆಯಾಗಿದೆ. ಬೆಂಗಳೂರು ಮಾರುಕಟ್ಟೆಗೆ ಪ್ರತಿದಿನ 3 ಲಕ್ಷ ಲೀಟರ್, 4 ಲಕ್ಷ ಲೀಟರ್ ಗುಡ್‌ಲೈಫ್ ಹಾಲು ಮಾರಾಟ ಮಾಡಿ ಉಳಿದ ಹಾಲನ್ನು ತುಪ್ಪ, ಬೆಣ್ಣೆ, ಪೌಡರ್ ಅಗಿ ಪರಿವರ್ತಿಸಲಾಗುತ್ತಿದೆ. ಹಾಲಿ 30ರಿಂದ 35 ಮೆಟ್ರಿಕ್ ಟನ್ ತುಪ್ಪ, 700 ಮೆಟ್ರಿಕ್ ಟನ್ ಬೆಣ್ಣೆ ಹಾಗೂ 700 ಮೆಟ್ರಿಕ್ ಟನ್ ಹಾಲಿನ ಪೌಡರ್ ಮಾರಾಟವಾಗದೆ ಉಳಿದಿದ್ದು, ಕರೊನಾ ನಿಯಂತ್ರಣಕ್ಕೆ ಬರದಿದ್ದರೆ ಮತ್ತಷ್ಟು ನಷ್ಟದ ಆತಂಕ ಎದುರಾಗಿದೆ.
ಹಾಲು ಶೇಖರಣೆ ಪ್ರಮಾಣ ಹೆಚ್ಚಾಗಿ ಮಾರಾಟ ಇಳಿಮುಖವಾಗಿದೆ, ಒಕ್ಕೂಟವನ್ನು ನಷ್ಟದಿಂದ ಪಾರು ಮಾಡಲು ಆಡಳಿತ ಮಂಡಳಿ ಎಂಪಿಸಿಎಸ್‌ಗಳಿಗೆ ನೀಡುತ್ತಿದ್ದ ಸಹಾಯಧನ ಕಡಿತಗೊಳಿಸಿದೆ. ಆರ್ಥಿಕ ಬಿಕ್ಕಟ್ಟು ಶಮನಕ್ಕಾಗಿ ಇನ್ನಷ್ಟು ಸುಧಾರಣೆ ಮಾಡುವ ಸಂಬಂಧ ಜು.23ರಂದು ಸಭೆ ಕರೆಯಲಾಗಿದೆ. ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಡಾ.ಎಚ್.ತಿಪ್ಪಾರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ, ಕೋಚಿಮುಲ್ ಕೋವಿಡ್‌ನಿಂದ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಸುಮಾರು 15 ಕೋಟಿ ರೂ.ಮೌಲ್ಯದ ಗುಡ್‌ಲೈಫ್ ಹಾಲು ಹಾಗೂ ಹಾಲಿನ ಪೌಡರ್, ಬೆಣ್ಣೆ ವಿಲೇವಾರಿಯಾಗಿಲ್ಲ. ಹಾಲಿನ ಖರೀದಿ ದರ ಇಳಿಕೆ ಅನಿವಾರ್ಯ, ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಉತ್ಪಾದಕರಿಗೆ ಹೊರೆಯಾಗದ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಡಿ.ವಿ.ಹರೀಶ್, ನಿರ್ದೇಶಕರು, ಕೋಚಿಮುಲ್