ಕೋಚಿಮುಲ್ ವಿವಾದಕ್ಕೆ ತಾತ್ಕಾಲಿಕ ತಡೆ, ಸ್ಪೀಕರ್ ಕರೆಗೆ ಕಾಯುತ್ತಿರುವ ಉಭಯ ಜಿಲ್ಲೆಯ ನಿರ್ದೇಶಕರು

15-klr-2
Published on

ಪಾ.ಶ್ರೀ.ಅನಂತರಾಮ್ ಕೋಲಾರ

ಕೋಚಿಮುಲ್ ವಿಭಜನೆ ವಿಚಾರದಲ್ಲಿ ಉಭಯ ಜಿಲ್ಲೆಯ ನಿರ್ದೇಶಕರ ಭಿನ್ನರಾಗಕ್ಕೆ ಕರೊನಾದಿಂದ ತಾತ್ಕಾಲಿಕ ವಿರಾಮ ಸಿಕ್ಕಿದಂತಾಗಿದ್ದರೂ, ವಿವಾದಕ್ಕೆ ಸರ್ಕಾರ ತೆರೆ ಎಳೆಯದಿದ್ದರೆ ಹಾಲು ಉತ್ಪಾದಕರ ಸ್ಥಿತಿ ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾದಂತಾಗುತ್ತದೆ.

1987ರಲ್ಲಿ ಸ್ಥಾಪಿತವಾದ ಹಾಲು ಒಕ್ಕೂಟ ಪ್ರಸ್ತುತ ಸಂಕಷ್ಟದಲ್ಲಿದೆ. ದಿನಕ್ಕೆ 11 ಲಕ್ಷ ಲೀಟರ್ ಹಾಲು ಉತ್ಪಾದನೆ ಈಗ 9 ಲಕ್ಷಕ್ಕೆ ಕುಸಿದಿದೆ. ಹಾಲು ಉತ್ಪಾದಕರನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವ ಕುರಿತು ಹಾಗೂ ಒಕ್ಕೂಟವನ್ನು ನಷ್ಟದಿಂದ ವಿಮುಕ್ತಿಗೊಳಿಸುವುದು ಹೇಗೆ ಎಂದು ಚಿಂತನೆ ಮಾಡುವ ಬದಲು ಎರಡೂ ಜಿಲ್ಲೆಯ ನಿರ್ದೇಶಕರು ಒಕ್ಕೂಟದ ವಿಭಜನೆ ಹಾಗೂ ಮೆಗಾ ಡೇರಿ ನಿರ್ಮಾಣದ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಿರುವುದು ಸಂಘರ್ಷಕ್ಕೆ ಹಾದಿಯಾಗುವ ಮುನ್ನವೇ ಸರ್ಕಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಗಾಯದ ಮೇಲೆ ಬರೆ ಎಳೆದಂತಾಗುವುದರಲ್ಲಿ ಅನುಮಾನವಿಲ್ಲ.

ಜಿಲ್ಲೆಯಿಂದ ಒಕ್ಕೂಟಕ್ಕೆ ಆಯ್ಕೆಯಾಗಿರುವ ನಿರ್ದೇಶಕರು ಒಕ್ಕೂಟ ವಿಭಜನೆಗೆ ವಿರೋಧ ವ್ಯಕ್ತಪಡಿಸದಿದ್ದರೂ ಮುಂದಿನ ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿ ಉದ್ದೇಶಿತ ಎಂವಿಕೆ ಮೆಗಾ ಡೇರಿಗೆ ಚಿಕ್ಕಬಳ್ಳಾಪುರದ ಸಚಿವ ಡಾ.ಸುಧಾಕರ್ ಮತ್ತು ಆ ಜಿಲ್ಲೆಯ ಬಹುತೇಕ ನಿರ್ದೇಶಕರು ಅಡ್ಡಗಾಲು ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದರ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕರ ಪೈಕಿ ಎನ್.ಸಿ.ವೆಂಕಟೇಶ್ ಹೊರತುಪಡಿಸಿ ಉಳಿದವರು ನಮ್ಮ ಹಕ್ಕಿಗಾಗಿ ಒಕ್ಕೂಟದ ವಿಭಜನೆ ಹೇಳಿದ್ದೇವೆ, ಕೋಲಾರದಲ್ಲಿ ಮೆಗಾ ಡೇರಿ ಸ್ಥಾಪನೆಯಾದರೆ ಅದರ ಮೇಲಿನ ಸಾಲದ ಹೊರೆ ನಮ್ಮ ಮೇಲೆ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಾರಥ್ಯ ವಹಿಸಿದ್ದಾರೆಯಾದರೂ ಉಭಯ ಜಿಲ್ಲೆಗಳ ನಿರ್ದೇಶಕರು ಹಾಗೂ ಜನಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ ಪರಿಹಾರ ಕಂಡುಕೊಳ್ಳಲು ಕರೊನಾ ದಿಗ್ಭಂದನ ವಿಧಿಸಿರುವುದರಿಂದ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

ಸಚಿವ ಡಾ.ಸುಧಾಕರ್ ತಮ್ಮ ಆಪ್ತ ಬೆಂಬಲಿಕ ಕೆ.ವಿ.ನಾಗರಾಜ್‌ಗೆ ಪುನರ್ವಸತಿ ಕಲ್ಪಿಸಲು ಒಕ್ಕೂಟದ ವಿಭಜನೆಗೆ ಆತುರ ತೋರುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಹಕಾರ ಸಚಿವರ ಮೇಲೆ ಒತ್ತಡ ತಂದು ಮೆಗಾ ಡೇರಿ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗೆ ತಡೆ ಮಾಡಿಸಿದ್ದಾರೆಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹಾಗೂ ಈ ಭಾಗದ ನಿರ್ದೇಶಕರ ಆರೋಪಕ್ಕೆ ಡಾ.ಸುಧಾಕರ್ ಈವರೆಗೆ ಪ್ರಕ್ರಿಯೆ ನೀಡಿಲ್ಲ.ವಿವಾದ ಬಗೆಹರಿಸುವ ಉದ್ದೇಶದಿಂದ ಸ್ಪೀಕರ್ ಕಾಗೇರಿ ಕರೆದಿದ್ದ ಸಭೆಗೆ ಕರೊನಾ

ನೆಪದಲ್ಲಿ ಹಾಜರಾಗಿಲ್ಲ, ಈಗಂತೂ ತಮ್ಮ ಇಲಾಖೆಗೆ ಸಂಬಂಧಿಸಿದ ಸಭೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳ ಕಡೆ ಗಮನ ಹರಿಸಲಾಗದಿರುವುದರಿಂದ ಕೋಲಾರ ಜಿಲ್ಲೆಯ ನಿರ್ದೇಶಕರು ಮೌನವಹಿಸುವಂತಾಗಿದೆ.

ಬೃಹತ್ ಹೋರಾಟಕ್ಕೆ ನಿರ್ಧರ: ಕರೊನಾ ತಣ್ಣಗಾದ ಮೇಲೆ ಒಕ್ಕೂಟದ ಅಧ್ಯಕ್ಷರು ಹೋರಾಟಕ್ಕೆ ನಿರ್ಧರಿಸಿದ್ದಾರೆ. ಇದೇ ರೀತಿಯ ಹೋರಾಟ ಚಿಕ್ಕಬಳ್ಳಾಪುರದಲ್ಲೂ ನಡೆಯುವ ಸಾಧ್ಯತೆಗಳಿರುವುದರಿಂದ ಸರ್ಕಾರ ವಿವಾದ ಇತ್ಯರ್ಥಕ್ಕೆ ವಿಳಂಬ ತೋರದೆ ಉಭಯ ಜಿಲ್ಲೆಯ ಸಹಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಕರೆದು ಪರಿಹಾರ ಸೂತ್ರ ಕಂಡುಕೊಳ್ಳಬೇಕಿದೆ.

ಕರೊನಾದಿಂದಾಗಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಬಾರದೆಂದು ತಾಳ್ಮೆಯಿಂದ ಇದ್ದೇವೆ, ಕೋಲಾರದಲ್ಲಿ ನಿರ್ಮಿಸಲು ಉದ್ದೇಶಿರುವ ಮೆಗಾ ಡೇರಿಗೆ ಸಂಬಂಧಿಸಿದ ಟೆಂಟರ್ ಪ್ರಕ್ರಿಯೆ ರದ್ದತಿ ಆದೇಶ ಹಿಂದಕ್ಕೆ ಪಡೆಯಲೇಬೇಕು. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ, ಸರ್ಕಾರ ತಕ್ಷಣ ನಮ್ಮನ್ನು ಚರ್ಚೆಗೆ ಆಹ್ವಾನಿಸಿ ಸಮಸ್ಯೆಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹೋರಾಟ ಖಚಿತ. ಕೆ.ವೈ.ನಂಜೇಗೌಡ, ಅಧ್ಯಕ್ಷರು, ಕೋಚಿಮುಲ್ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಬೇರ್ಪಟ್ಟಿದ್ದರೂ ಇಂದಿಗೂ ಒಂದೇ ಮನೆಯವರಂತೆ ಬಾಳ್ವೆ ನಡೆಸುತ್ತಿದ್ದೇವೆ. ಒಕ್ಕೂಟದ ವಿಭಜನೆ ಅಥವಾ ಮೆಗಾ ಡೇರಿ ನಿರ್ಮಾಣದ ವಿವಾದದಿಂದ ನಮ್ಮಿಬ್ಬರ ಸಂಬಂಧಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸ್ಪೀಕರ್ ಕಾಗೇರಿ ಅವರು ವಿಳಂಬ ಮಾಡದೆ ಸಭೆ ಕರೆದು ಸಮಸ್ಯೆ ಇತ್ಯರ್ಥಗೊಳಿಸುವರೆಂಬ ವಿಶ್ವಾಸವಿದೆ. ವೈ.ಬಿ.ಅಶ್ವತ್ಥ್‌ನಾರಾಯಣ, ನಿರ್ದೇಶಕರು, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net