

ಎನ್.ಮುನಿವೆಂಕಟೇಗೌಡ ಕೋಲಾರ
ಕೋಚಿಮುಲ್ ಕ್ಷೇತ್ರ ಮರು ವಿಂಗಡಣೆ ಮಾಡಿ ಚುನಾವಣೆ ನಡೆಸಲು ಹೈಕೋರ್ಟ್ ಅಸ್ತು ಎಂದರೂ ಒಕ್ಕೂಟದಲ್ಲಿ ನಡೆದಿವೆ ಎನ್ನಲಾದ ಹಗರಣ ತನಿಖೆ ನಡೆಸಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಅಪಸ್ವರ ತೆಗೆದಿದ್ದು, ಪ್ರಕರಣ ಮತ್ತೆ ಕೋರ್ಟ್ ಮೆಟ್ಟಿಲೇರುವ ಲಕ್ಷಣ ಗೋಚರಿಸುತ್ತಿದೆ.
ಸರಿಸುಮಾರು ಒಂದು ದಶಕದಿಂದಲೂ ಏಳುಬೀಳುಗಳನ್ನೇ ಕಂಡಿರುವ ಕೋಚಿಮುಲ್ ವಿಭಜನೆ ವಿಚಾರ ಮೂರು ತಿಂಗಳ ಹಿಂದೆ ಸುಖಾಂತ್ಯಗೊಂಡು, ಒಕ್ಕೂಟದಿಂದ ಕೋಮುಲ್ ಮತ್ತು ಚಿಮುಲ್ ಪ್ರತ್ಯೇಕ ಅಸ್ತಿತ್ವ ಕಂಡುಕೊಂಡಿವೆ. ಈಗ ಎರಡೂ ಒಕ್ಕೂಟಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕಿದ್ದು, ಅದಕ್ಕೆ ಪೂರಕವಾಗಿ ಕ್ಷೇತ್ರ ವಿಂಗಡಣೆಗೆ ನಾಂದಿ ಹಾಡಬೇಕಿದೆ. ಆದರೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ನ ಶಾಸಕರ ನಡುವೇ ಅಪಸ್ವರ ಕೇಳಿ ಬರುತ್ತಿದ್ದು, ಎರಡೂ ಒಕ್ಕೂಟಗಳಿಗೆ ಸೂಸುತ್ರವಾಗಿ ಚುನಾವಣೆ ನಡೆಯುವ ಅನುಮಾನ ಮೂಡಿದೆ.
ಬಣ ರಾಜಕೀಯ
ಕೋಚಿಮುಲ್ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಕೆಜಿಎಫ್ ರೂಪಕಲಾ ಸಹೋದರತ್ವ ಇಟ್ಟುಕೊಂಡಿದ್ದಾರೆ. ಅಂತೆಯೇ, ಶಾಸಕ ಕೆ.ವೈ.ನಂಜೇಗೌಡ, ಕೋಲಾರದ ಕೊತ್ತೂರು ಮಂಜುನಾಥ್, ಎಂಎಲ್ಸಿಗಳಾದ ಅನಿಲ್ಕುಮಾರ್ ಮತ್ತು ನಸೀರ್ ಅಹ್ಮದ್ ಮತ್ತೊಂದು ಬಣದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕೋಮುಲ್ನಲ್ಲಿ ಪರಸ್ಪರ ಸಹಕಾರಿಗಳಾಗಿದ್ದ ಕೆ.ವೈ.ನಂಜೇಗೌಡ, ಕಾಡೇನಹಳ್ಳಿ ನಾಗರಾಜ್ ಈ ನಡುವೆ ದೂರವಾಗಿದ್ದಾರೆ. ಮೊದಲಿನಿಂದಲೂ ಪ್ರತ್ಯೇಕತಾವಾದಿಯಾಗಿದ್ದ ವಡಗೂರು ಹರೀಶ್ ಮತ್ತು ಕಾಡೇನಹಳ್ಳಿ ನಾಗರಾಜ್ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಒಂದುಗೂಡಿದ್ದಾರೆ. ಚುನಾವಣೆಗೆ ಮುನ್ನ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ನಂಜೇಗೌಡ ಮತ್ತು ಅನಿಲ್ಕುಮಾರ್ ರಾಜಕಾರಣ ಮಾಡಿದ್ದಾರೆ. ಅವರಿಗೆ ಇಷ್ಟ ಬಂದಂತೆ ಕ್ಷೇತ್ರಗಳನ್ನು ವಿಂಗಡಿಸಿ, ಮೇಲುಗೈ ಸಾಧಿಸುವಂತೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಶಾಸಕ ಎಸ್ಎನ್ ಮತ್ತು ಕಾಡೇನಹಳ್ಳಿ ನಾಗರಾಜ್ ಹಾಗೂ ವಡಗೂರು ಹರೀಶ್ ಆರೋಪಿಸಿರುವುದು ಜಿಲ್ಲೆಯ ಕೈ ಪಾಳಯದ ಭಿನ್ನಮತಕ್ಕೆ ಸಾಯಾಗಿದೆ.
ಬಂಗಾರಪೇಟೆಗೇಕೆ 50 ಕ್ಷೇತ್ರ?
ಪ್ರತ್ಯೇಕಗೊಂಡ ಹಾಲು ಒಕ್ಕೂಟದಲ್ಲಿ 17ಕ್ಕೆ ಸೀಮಿತಗೊಳ್ಳಬೇಕಿದ್ದ ಆಡಳಿತ ಮಂಡಳಿ ಕ್ಷೇತ್ರಗಳನ್ನು 19ಕ್ಕೇರಿಸುವ ಹುನ್ನಾರ ನಡೆದಿದೆ. ಕೋಲಾರದಲ್ಲಿ ಬೇಕಾದವರಿಗೆ ಅವಕಾಶ ಮಾಡಿಕೊಡಲು ಮತ್ತು ಬೇಡದವರನ್ನು ಹಣಿಯಲು ಮೂರು ಕ್ಷೇತ್ರಗಳನ್ನು ರಚಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಸ್ವತ@ ನಿರ್ದೇಶಕರೇ ಮಾಡುತ್ತಿದ್ದಾರೆ. ಪ್ರತಿ ಕ್ಷೇತ್ರಕ್ಕೆ 80 ಸಹಕಾರ ಸಂಘಗಳು ಇರಬೇಕು ಎಂಬ ನಿಯಮ ಇದ್ದರೂ ಬಂಗಾರಪೇಟೆ ಕ್ಷೇತ್ರದಲ್ಲಿ ಕೇವಲ 50 ಡೇರಿಗಳಿಗೆ ಸೀಮಿತಗೊಳಿಸಲಾಗಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ.
ವಿರೋಧಿಗಳನ್ನು ಹಣಿಯುವ ತಂತ್ರ
ಕೋಲಾರ ಮತ್ತು ಮುಳಬಾಗಿಲು ತಾಲೂಕಿನಲ್ಲಿ ವಿರೋಧಿಗಳನ್ನು ಮಣಿಸಲು ಕ್ಷೇತ್ರ ವಿಂಗಡಣೆ ವೇಳೆ ಉತ್ತರ ಧ್ರುವದ ಡೇರಿಗಳನ್ನು ದಕ್ಷಿಣ ಧ್ರುವಕ್ಕೂ, ಪೂರ್ವದಿಕ್ಕಿನ ಡೇರಿಗಳನ್ನು ಪಶ್ಚಿಮ ದಿಕ್ಕಿನ ಕ್ಷೇತ್ರಗಳಿಗೆ ಸೇರಿಸುವ ಮೂಲಕ "ರಾಜಕಾರಣ' ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಮೂಗಿನ ನೇರಕ್ಕೆ ಕೋಮುಲ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಸಹಕಾರ ಕಾಯ್ದೆ ಅನ್ವಯ ಸರ್ವ ಸದಸ್ಯರ ಸಭೆಯಲ್ಲಿ ಸಹಕಾರ ಇಲಾಖೆಯ 12/5 ಅಧಿಸೂಚನೆ ಚರ್ಚಿತವಾಗಿ ಕ್ಷೇತ್ರ ವಿಂಗಡಣೆ ಅಂತಿಮ ನಿರ್ಧಾರ ವಾಗಬೇಕಿತ್ತು. ಆದರೆ ಸಹಕಾರ ಇಲಾಖೆ ಆದೇಶವನ್ನು ಕೋಮುಲ್ ಅಧಿಕಾರಿಗಳು ಮರೆಮಾಚಿದ್ದು, 30 ದಿನಗಳ ಗಡುವು ಮುಗಿದ ಮಾರನೇ ದಿನವೇ ಸಹಕಾರ ಇಲಾಖೆ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದು 12/6ರ ಅಧಿಸೂಚನೆ ಹೊರಡಿಸುವ ಮೂಲಕ ಕೆಲವರ ಮೂಗಿನ ನೇರಕ್ಕೆ ಕ್ಷೇತ್ರ ವಿಂಗಡಣೆ ಮಾಡಿದ್ದಾರೆ ಎಂಬುದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪ.
ಇಬ್ಬರು ಡೇರಿ ಅಧ್ಯಕ್ಷರಿಗೆ ದಂಡ
ಈ ಹಿಂದೆ ಬಂಗಾರಪೇಟೆ, ಕೋಲಾರ ಹಾಗೂ ಮುಳಬಾಗಿಲು ತಾಲೂಕಿನ ಕೆಲ ಡೇರಿ ಅಧ್ಯಕ್ಷರು ಕ್ಷೇತ್ರ ವಿಂಗಡಣೆಯಲ್ಲಿನ ಲೋಪದೋಷ ಸರಿಡಪಡಿಸಲು ಸೂಚನೆ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಸಹಕಾರ ಇಲಾಖೆ ಹೊರಡಿಸಿದ್ದ 12/6 ನೋಟಿಫಿಕೇಷನ್ಅನ್ನು ಎರಡು ತಿಂಗಳ ಹಿಂದೆಯೇ ರದ್ದುಗೊಳಿಸಿ, 12/5 ನೋಟಿಫಿಕೇಷನ್ನಂತೆ ಒಕ್ಕೂಟದ ಸರ್ವಸದಸ್ಯರ ಸಭೆಯಲ್ಲಿ ಚರ್ಚಿಸಿ ಕ್ಷೇತ್ರ ವಿಂಗಡಣೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತಾದರೂ ಕೆಲವರು ಈ 12/5 ನೋಟಿಫಿಕೇಷನ್ ವಿರುದ್ಧ ಪುನ@ ಕೋರ್ಟ್ಗೆ ಹೋಗಿದ್ದರಿಂದ ಅರ್ಜಿಯನ್ನು ಕಳೆದ ವಾರ ಹೈಕೋರ್ಟ್ ವಜಾಗೊಳಿಸಿ, ಮೊದಲು ಸರ್ವಸದಸ್ಯರ ಸಭೆಯಲ್ಲಿ ಕ್ಷೇತ್ರ ವಿಂಗಡಣೆ ನಿರ್ಧಾರ ಆಗಲಿ ಎಂದು ಆದೇಶಿಸಿತ್ತು. ಅಲ್ಲದೆ ಅನಗತ್ಯವಾಗಿ ನ್ಯಾಯಾಲಯದ ಸಮಯ ಹಾಳು ಮಾಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಡೇರಿ ಅಧ್ಯಕ್ಷರಿಗೆ ತಲಾ 25,000ರೂ. ಶುಲ್ಕ ಪಾವತಿಸುವಂತೆಯೂ ಸೂಚಿಸಿತ್ತು.
ಸಭೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ
ಹೈಕೋರ್ಟ್ ಆದೇಶದಂತೆ 12/5 ನೋಟಿಫಿಕೇಷನ್ನಂತೆ ಕ್ಷೇತ್ರ ವಿಂಗಡಣೆ ವಿಚಾರವನ್ನು ಕೋಮುಲ್ನ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಚರ್ಚಿಸುವುದು ಬಾಕಿ ಇದ್ದು, ಸಭೆಯಲ್ಲಿ ಚರ್ಚಿಸಿದ ನಂತರ ಕ್ಷೇತ್ರ ವಿಂಗಡಣೆಯನ್ನು ಮೂರನೇ ಎರಡರಷ್ಟು ಬಹುಮತದೊಂದಿಗೆ ನಿರ್ಧರಿಸಬೇಕಿದೆ. ಇದಾದ ನಂತರವಷ್ಟೇ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಸದ್ಯ, ಕೋಮುಲ್ ವಿಶೇಷ ಸರ್ವ ಸದಸ್ಯರ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಒಕ್ಕೂಟದ ವಿಭಜನೆ ನಂತರ ಕೋಮುಲ್ ವ್ಯಾಪ್ತಿಗೆ ಸುಮಾರು 500 ಡೇರಿಗಳು ಒಳಪಡುತ್ತವೆ. ಪ್ರತಿ ಡೇರಿಯಿಂದ ಅಧ್ಯಕ್ಷರು ಅಥವಾ ಒಬ್ಬ ಪ್ರತಿನಿಧಿ ಸರ್ವ ಸದಸ್ಯರ ಸಭೆಗೆ ಹಾಜರಾಗಬೇಕು. ಹಾಜರಾದ ಸದಸ್ಯರಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದು ಕ್ಷೇತ್ರ ಮರು ವಿಂಗಡಣೆಯನ್ನು ನಿಷ್ಕರ್ಷೆ ಮಾಡಬೇಕಿದೆ. ಇನ್ನು ಸರ್ವಸದಸ್ಯರ ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಮಧ್ಯೆಯೇ ಹೊಸ ಆಟ ಶುರುವಾಗಿದ್ದು, ಇದೆಲ್ಲವನ್ನೂ ಗಮನಿಸಿದರೆ ಕೋಮುಲ್ ವಿಶೇಷ ಸರ್ವ ಸದಸ್ಯರ ಸಭೆಯು ಸುಸೂತ್ರವಾಗಿ ನಡೆದೀತೇ? ಎಂಬ ಅನುಮಾನ ಮೂಡಿದೆ.
ಸ್ವಪಕ್ಷದವರಲ್ಲೇ ಭಿನ್ನರಾಗ
ಕಾಂಗ್ರೆಸ್ನ ಸ್ವಪಕ್ಷ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಚಿಮುಲ್ನಲ್ಲೇ ಹಗರಣ ನಡೆದಿವೆ ಎಂದು ಬಹಿರಂಗ ಹೇಳಿಕೆ ನೀಡಿ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ಕೋಚಿಮುಲ್ ಮಾಜಿ ನಿರ್ದೇಶಕ ಡಿ.ವಿ.ಹರೀಶ್ ಇದ್ದು, ಹಗರಣಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೋಚಿಮುಲ್ ಅಧ್ಯಕ್ಷರಾಗಿದ್ದ ಶಾಸಕ ನಂಜೇಗೌಡ ಅವರು ಎಸ್.ಎನ್.ನಾರಾಯಣಸ್ವಾಮಿ ಆರೋಪವನ್ನು ತಳ್ಳಿಹಾಕಿ, ನಾನು ಅಧಿಕಾರದಲ್ಲಿ ಇದ್ದಲ್ಲಿ ಆರೋಪ ಮಾಡಬಹುದಾಗಿತ್ತು ಎಂದು ತಿರುಗೇಟು ನೀಡಿದ್ದಾರೆ. ನಂಜೇಗೌಡರಿಗೆ ಬೆಂಬಲವಾಗಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಕೋಚಿಮುಲ್ನಲ್ಲಿ ಯಾವುದೇ ಹಗರಣ ನಡೆದಿಲ್ಲ, ಅಡಳಿತ ಮಂಡಳಿಯಲ್ಲಿ ಜತೆಯಲ್ಲಿಯೇ ಇದ್ದಾಗ ಏಕೆ ಆರೋಪ ಮಾಡಲಿಲ್ಲ ಎಂದು ಹರೀಶ್ ವಿರುದ್ಧ ಕಿಡಿಕಾರಿದ್ದಾರೆ. ಎಸ್.ಎನ್.ನಾರಾಯಣಸ್ವಾಮಿ ಕೋಚಿಮುಲ್ ವಿರುದ್ಧವಾಗಿದ್ದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ ಕೋಚಿಮುಲ್ನಲ್ಲಿ ಹಗರಣ ನಡೆದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಸ್ವಪಕ್ಷದಲ್ಲಿಯೇ ಭಿನ್ನರಾಗ ಉಂಟಾಗಿದೆ.