ಸಹಕಾರ ಸಂಘಗಳನ್ನು ಕಟ್ಟಿ ಬೆಳೆಸಿ ; ಸಹಕಾರ ಸಪ್ತಾಹದಲ್ಲಿ ಶಾಸಕ ನಂಜೇಗೌಡ ಮನವಿ

20 mlr 1
Published on

ಮಾಲೂರು : ಕೋಲಾರ -ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳ ಮಹಿಳಾ ಸ್ವಸಹಾಯ ಸಂಘಗಳ 4.50 ಲಕ್ಷ ಮಹಿಳೆಯರಿಗೆ 1,500 ಕೋಟಿ ರೂ. ಸಾಲವನ್ನು ಡಿಸಿಸಿ ಬ್ಯಾಂಕ್ ನೀಡಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿದೆ ಎಂದು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿರುವ ಪ್ರತಿಯೊಬ್ಬರೂ ಜೀವನಮಾಡಲು ಸಹಕಾರಿ ವ್ಯವಸ್ಥೆ ಹಾಗೂ ಸಂಸ್ಥೆಗಳು ಅತ್ಯವಶ್ಯಕವಾಗಿದೆ. ಅದ್ದರಿಂದ 2 ಜಿಲ್ಲೆಗಳಲಿರುವ 2 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ವಾಣಿಜ್ಯ ಬ್ಯಾಂಕ್​ಗಳಲ್ಲಿರುವ ತಮ್ಮ ವ್ಯವಹಾರದ ಖಾತೆಗಳನ್ನು ಕೂಡಲೆ ಡಿಸಿಸಿ ಬ್ಯಾಂಕ್​ಗೆ ವರ್ಗಾಯಿಸಿ ವ್ಯವಹಾರ ನಡೆಸುವಂತೆ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್​ನಿಂದ ಹಾಲು ಉತ್ಪಾದಕರಿಗೆ ಸಿಗುವ ಹಸುವಿನ ಸಾಲ, ಮಹಿಳೆಯರಿಗೆ ಸಾಲ ಹಾಗೂ ರೈತರಿಗೆ ಬೆಳೆಯ ಸಾಲ ಸೇರಿ ಇತರ ಪ್ರಯೋಜನಗಳನ್ನು ಪಡೆದುಕೊಳ್ಳುವುದರ ಜತೆಗೆ ಸಹಕಾರ ಸಂಘಗಳನ್ನು ಕಟ್ಟಿ ಉಳಿಸಿಬೆಳಿಸಬೇಕು ಎಂದು ತಿಳಿಸಿದರು.ಡಿಸಿಸಿ ಬ್ಯಾಂಕ್​ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಮಹಿಳೆಯರು ಹಾಗೂ ಹಾಲು ಉತ್ಪಾದಕ ರೈತರು ತಮ್ಮ ಖಾತೆಗಳನ್ನು ಡಿಸಿಸಿ ಬ್ಯಾಂಕ್​ನಲ್ಲಿ ತೆರೆಯುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಸಾರ್ವಜನಿಕರು ಸಹಕಾರಿ ವ್ಯವಸ್ಥೆಯನ್ನು ಪ್ರಾಮಾಣಿಕ ವ್ಯವಸ್ಥೆಯನ್ನಾಗಿ ಮಾಡಲು ಸಹಕರಿಸಬೇಕು ಎಂದರು.

ಹಾಲು ಉತ್ಪಾದಕರಿಗೆ 1 ಲೀಟರ್​ಗೆ 5 ರೂ.ಗಳ ಪೋ›ತ್ಸಾಹ ಧನ ನೀಡಲಾಗುತ್ತಿದೆ. ರೈತರು ಕಡ್ಡಾಯವಾಗಿ ತಮ್ಮ ಖಾತೆಗಳನ್ನು ಡಿಸಿಸಿ ಬ್ಯಾಂಕ್​ನಲ್ಲಿ ತೆರೆಯಬೇಕೆಂದು ಸರ್ಕಾರಕ್ಕೆ ಇಂದೇ ಶಾಸಕರೊಂದಿಗೆ ಹೋಗಿ ಮನವಿ ಸಲ್ಲಿಸುತ್ತೇನೆ ಎಂದರು. ಡಿಸಿಸಿ ಬ್ಯಾಂಕ್​ನಿಂದ ಮಾಲೂರು ತಾಲೂಕಿನ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಕಂಪ್ಯೂಟರ್ ವಿತರಿಸಲಾಯಿತು.

ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಸ್.ವಿ.ಗೋವರ್ದನರೆಡ್ಡಿ, ಸಹಕಾರ ಸಂಘದ ನಿರ್ದೇಶಕರಾದ ಎನ್.ಶಂಕರನಾರಾಯಣಗೌಡ, ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ಎಚ್.ಚನ್ನರಾಯಪ್ಪ, ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ನೀಲಕಂಠಗೌಡ, ಕೋಚಿಮುಲ್ ಮಹಿಳಾ ನಿರ್ದೇಶಕಿ ಕಾಂತಮ್ಮ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್​ರೆಡ್ಡಿ, ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಚೇತನ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಯಲ್ಲಪ್ಪರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net