ಕೋಚಿಮುಲ್ ವಿಭಜನೆ ಐತಿಹಾಸಿಕ ನಿರ್ಧಾರ ; ನಿರ್ದೇಶಕ ಕಾಂತರಾಜು ಹೇಳಿಕೆ

9 GBD Kochimul
Published on

ಗೌರಿಬಿದನೂರು: ಪ್ರತ್ಯೇಕ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟ ಮುಂದಿನ ವರ್ಷದ ಏ.7ರಂದು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬರಲಿದೆ ಎಂದು ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜ್ ಹೇಳಿದರು.

ನಗರದ ಕೋಚಿಮುಲ್ ಉಪ ಶಿಬಿರ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಹಾಲು ಉತ್ಪಾದಕರ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದರು. ಸಚಿವ ಸುಧಾಕರ್ ಹಾಗೂ ಜಿಲ್ಲೆಯ ಜನರ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದ್ದು, ಮುಂದಿನ 2 ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಆರ್ಥಿಕವಾಗಿ ಮುಂಚೂಣಿಗೆ ಬರಲಿದೆ. ಜಿಲ್ಲೆಯಲ್ಲಿ ನಿತ್ಯ 4.5 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಪನ್ನೀರ್ ಟಕ ಸ್ಥಾಪನೆಯಿಂದ ಮಾರುಕಟ್ಟೆ ಸಮಸ್ಯೆ ಎದುರಾಗುವುದ್ಲಿ ಎಂದರು.

ಕಾರ್ಯದರ್ಶಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮೂಲಕ ಒಕ್ಕೂಟ ಬಲಪಡಿಸಬೇಕು ಎಂದರು. ಉಪಕೇಂದ್ರದ ವ್ಯವಸ್ಥಾಪಕ ಡಾ.ಗಜರಾಜ ರಣತೂರು ಮಾತನಾಡಿ, ಗುಣಮಟ್ಟದ ವಿಚಾರದಲ್ಲಿ ಕಾರ್ಯದರ್ಶಿಗಳು ಕಾಳಜಿ ವಹಿಸಬೇಕು, ಗುಣಮಟ್ಟವೇ ನಮ್ಮ ಬ್ರ್ಯಾಂಡ್ ಆಗಬೇಕು. ಈ ವಿಚಾರದಲ್ಲಿ ಮುಲಾಜಿಗೆ ಒಳಗಾಗಬಾರದು ಎಂದರು.

ನಿರ್ದೇಶಕ ಎಸ್.ವಿ.ಸುಬ್ಬಾರೆಡ್ಡಿ ಮಾತನಾಡಿ, ಸಚಿವ ಸುಧಾಕರ್ ಅವರಿಗೆ ಹೆಸರು ಬರುತ್ತದೆ ಎಂಬ ರಾಜಕೀಯ ಕಾರಣಕ್ಕೆ ಕೆಲವರು ಒಕ್ಕೂಟ ವಿಭಜನೆಗೆ ವಿರೋಧಿಸಿದರು. ಆದರೆ ಸರ್ಕಾರ ಜನರ ಧ್ವನಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು. ಕೋಚಿಮುಲ್ ನಿರ್ದೇಶಕಿ ಸುನಂದಮ್ಮ ಪೆದ್ದಾರೆಡ್ಡಿ ಮಾತನಾಡಿದರು. ಡೇರಿಗಳ ಮೃತ ಕಾರ್ಯದರ್ಶಿಗಳ ಕುಟುಂಬಗಳಿಗೆ ಪರಿಹಾರ, ಮೃತ ಹಸುಗಳ ಮಾಲೀಕರ ಪರಿಹಾರ ವಿಮೆ ಹಾಗೂ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಹಾಲು ಉತ್ಪಾದಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net