ಇಬ್ಭಾಗಕ್ಕೂ ಮುನ್ನ ವಿಮರ್ಶೆ ಅಗತ್ಯ ; ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣಸ್ವಾಮಿ ಹೇಳಿಕೆ ಪ್ರತ್ಯೇಕ ಒಕ್ಕೂಟಕ್ಕೆ ವಿರೋಧವಿಲ್ಲ

5CBP4
Published on

ಚಿಕ್ಕಬಳ್ಳಾಪುರ: ಪ್ರತ್ಯೇಕ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ರಚನೆಗೆ ಯಾರ ವಿರೋಧವೂ ಇಲ್ಲ, ಆದರೆ ಹಾಲು ಉತ್ಪಾದಕರ ಹಿತ ಮತ್ತು ಮಾರುಕಟ್ಟೆ ಲಾಭದೃಷ್ಟಿಯಿಂದ ಯಲಹಂಕ ಮದರ್ ಡೇರಿ ವ್ಯಾಪ್ತಿಗೆ ಸೇರಿಸಿಕೊಂಡು, ಕೋಚಿಮುಲ್ ಇಬ್ಭಾಗ ಮಾಡಬೇಕೆಂದು ನಿರ್ದೇಶಕ ಅಶ್ವತ್ಥನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಒಂದು ನಿರ್ಣಯ ಕೈಗೊಳ್ಳುವ ಮೊದಲು ಸಾಧಕ-ಬಾಧಕಗಳ ಅತೀ ಅವಶ್ಯ, ಇದೇ ಮಾದರಿಯಲ್ಲಿ ಒಕ್ಕೂಟದ ಪ್ರತ್ಯೇಕತೆಯ ಲಾಭ ಮತ್ತು ನಷ್ಟದ ವಿಮರ್ಶೆ ಅಗತ್ಯವಿದೆ ಎಂದು ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿನ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಕೋಚಿಮುಲ್ ಪ್ರತ್ಯೇಕತೆಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಗಳಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳುವಾಗಲೂ ಸಾಧಕ-ಬಾಧಕಗಳ ಚರ್ಚೆಗೆ ಒತ್ತಾಯಿಸಲಾಗಿದೆ. ಇದೀಗ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಿ ಪ್ರತ್ಯೇಕ ಒಕ್ಕೂಟದ ಅನುಕೂಲಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲು ಒತ್ತಡ ಹೇರುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದರು.

ಪ್ರಸ್ತುತ ಕೋಚಿಮುಲ್ ಬೇರೆ ಬೇರೆ ಕಾರಣಗಳಿಂದಲೂ ನಷ್ಟದಲ್ಲಿಯೇ ಸಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತ್ಯೇಕತೆಯಿಂದ ಹೊಸ ಒಕ್ಕೂಟವು ಶೇ.50 ರಷ್ಟು ಪಾಲು ಪಡೆದರೂ ಬಂಡವಾಳ ಹೂಡಿಕೆ, ಮಾರುಕಟ್ಟೆ ನಿರ್ವಹಣೆ ಮತ್ತು ರೈತರಿಗೆ ಬಟವಾಡೆ ಸೇರಿ ಹಲವು ಕೆಲಸಗಳಿಗೆ ಆರ್ಥಿಕ ಸಂಪನ್ಮೂಲ ಸಾಕಾಗುವುದಿಲ್ಲ. ಇದೇ ಕಾರಣದಿಂದ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ಇತರ ಒಕ್ಕೂಟಗಳಿಗಿಂತಲೂ ಕಡಿಮೆ ಹಣ ನೀಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋಲಾರ ಹಾಲು ಒಕ್ಕೂಟ ರಚನೆಯ ಸಂದರ್ಭದಲ್ಲಿಯೇ ಮಾಜಿ ಸಚಿವ ಸಿ.ಭೈರೇಗೌಡ ಮತ್ತು ಕೆ.ಬಿ.ಪಿಳ್ಳಪ್ಪನ ಜತೆಗೆ ಅಂದಿನ ಹಲವು ನಾಯಕರು ಮದರ್ ಡೇರಿಯಲ್ಲಿ ಸೇರಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಕೊನೇ ಹಂತದಲ್ಲಿ ಕೈ ತಪ್ಪಿತ್ತು. ಈಗಲಾದರೂ ರಚನೆಯಾಗಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟವನ್ನು ಸೇರಿಸಲು ಒತ್ತಡ ಹೇರಬೇಕೆಂದು ಸಚಿವ ಡಾ ಕೆ.ಸುಧಾಕರ್ ಅವರನ್ನು ಒತ್ತಾಯಿಸಿದರು.

ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ ಮತ್ತಿತರರು ಇದ್ದರು.

ಅಕ್ರಮ ತನಿಖೆಯಾಗಲಿ: ಕೋಚಿಮುಲ್ ಶಿಬಿರ ಕಚೇರಿಯ ಆಧುನೀಕರಣ ಸೇರಿ ಇತರ ಕೆಲಸದ ವಿಚಾರದಲ್ಲಿ ಅಕ್ರಮದ ಆರೋಪದ ಮೂಲಕ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ, ಆದರೆ ಮೆಗಾ ಡೇರಿಯ ಉಪ ಗುತ್ತಿಗೆಯನ್ನು ಪಡೆದು ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಕೋಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌ಗೆ ತಿರುಗೇಟು ನೀಡಿದರು. ನಂದಿ ಕ್ರಾಸ್ ಬಳಿ ಮೆಗಾ ಡೇರಿ ನಿರ್ಮಾಣದ ಅಂದಾಜು ವೆಚ್ಚವನ್ನು ಒತ್ತಡ ಹೇರಿ ಹೆಚ್ಚಿಸಿದ ಬಳಿಕ ಉಪ ಗುತ್ತಿಗೆ ಪಡೆದು ಮಗನಿಂದ ಕೆಲಸ ಮಾಡಿಸಲಾಗಿದೆ. ಈಗಾಗಲೇ ಕಾಮಗಾರಿ ನಿರ್ವಹಣೆ ಮತ್ತು ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇಂತಹವರು ಶಿಬಿರ ಕಚೇರಿಯ ಕೆಲಸದ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು, ಯಾವುದೇ ತನಿಖೆ ಕೈಗೊಂಡರೂ ಸ್ವಾಗತ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net