

ಕೋಲಾರ: ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಪ್ರತಿ ಲೀ. ಹಾಲಿಗೆ 50 ರೂ. ಬೆಲೆ ನಿಗದಿಪಡಿಸಿ, ಪಶು ಆಹಾರ ಒಕ್ಕೂಟದಿಂದಲೇ ಸಬ್ಸಿಡಿ ದರದಲ್ಲಿ ವಿತರಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರೈತಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯ ಎರಡು ಸಹಕಾರಿ ಬ್ಯಾಂಕ್ಗಲ್ಲಿ ಅಕ್ರಮ ನಡೆದಿರುವುದಾಗಿ ಅದರಲ್ಲೂ ಹಾಲು ಒಕ್ಕೂಟದಲ್ಲಿ ಡೀಸೆಲ್ ಖರೀದಿಯಿಂದ ವಿದೇಶಿ ಪ್ರವಾಸ, ನೇಮಕಾತಿ, ಮೆಗಾ ಡೇರಿ, ಸೋಲಾರ್ ಘಟಕ ನಿರ್ಮಾಣದಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಆರೋಪಿಸುತ್ತಿದ್ದು, ಪ್ರಕರಣದ ಸಮಗ್ರ ತಿನಿಖೆಯಾಗಲು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಒಂದು ಲೀ. ಹಾಲು ಉತ್ಪಾದನೆ ಮಾಡಲು ಕನಿಷ್ಠ 35 ರೂ. ವೆಚ್ಚವಾಗುತ್ತದೆ. ಒಕ್ಕೂಟ ನೀಡುತ್ತಿರುವ 36 ರೂ.ಗಳಲ್ಲಿ ರೈತನಿಗೆ ಉಳಿಯುವುದು ಕಡೆಗೆ ಹಸುವಿನ ಗಂಜಲ ಹಾಗೂ ಸಗಣಿ ಮಾತ್ರ. ಒಕ್ಕೂಟದ ಅಭಿವೃದ್ಧಿ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ 1 ರೂ. ಕಡಿತ ಮಾಡಿ ಪ್ರತಿದಿನ 8&10 ಲಕ್ಷ ರೂ. ಲಾಭ ಮಾಡಿಕೊಳ್ಳುತ್ತಿದ್ದರೂ, ಮತ್ತೆ ಒಕ್ಕೂಟ ನಷ್ಟ ಎಂದು ತೋರಿಸುತ್ತಿರುವುದು ವಿಪರ್ಯಾಸ. ಅಭಿವೃದ್ಧಿ ಹೆಸರಿನಲ್ಲಿ ಕಡಿತ ಮಾಡುತ್ತಿರುವ 1 ರೂ. ನಿಲ್ಲಿಸಿ ರೈತರಿಗೆ ನೀಡಬೇಕು. ಒಕ್ಕೂಟದ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲು ಗೋದಾಮಿನಲ್ಲಿ ಕೊಳೆಯುತ್ತಿರುವ ಹಾಲಿನ ಪುಡಿ ಮತ್ತು ಬೆಣ್ಣೆಗೆ ಮಾರುಕಟ್ಟೆ ಕಲ್ಪಿಸಿ, ನಷ್ಟ ತಪ್ಪಿಸಬೇಕು ಎಂದರು.
ರಾಜ್ಯ ಮುಖಂಡ ಬಂಗವಾದಿ ನಾಗರಾಜ ಗೌಡ, ತೆರ್ನಹಳ್ಳಿ ಆಂಜಿನಪ್ಪ, ಶಿವಾರೆಡ್ಡಿ, ಯಲ್ಲಣ್ಣ, ಹರೀಶ್, ಮುನಿರಾಜು, ಕದಿರಿನತ್ತ ಅಪ್ಪೋಜಿರಾವ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಯಲುವಳ್ಳಿ ಪ್ರಭಾಕರ್, ಮಂಗಸಂದ್ರ ತಿಮ್ಮಣ್ಣ, ಹೆಬ್ಬಣಿ ಅನಂದರಡ್ದಿ. ಸುಪ್ರೀಂಚಲ ಚಂದ್ರಪ್ಪ, ಗೌರಮ್ಮ, ಶೈಲಜಾ, ರತ್ನಮ್ಮ, ಮುನಿವೆಂಕಟಮ್ಮ ಇದ್ದರು.