

ವಿರಾಜಪೇಟೆ: ಆತ್ಮರಕ್ಷಣೆ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಗೋಜೂ ರ‌್ಯೂ ಕರಾಟೆ ತರಬೇತಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಕೊಬುಡೋ (ದಂಡ ವರಸೆ) ಶಿಬಿರವನ್ನು ಭಾನುವಾರ ಆಯೋಜಿಸಲಾಗಿತ್ತು.
ಗೋಜೂ ರ‌್ಯೂ ಕರಾಟೆ ತರಬೇತಿ ಶಾಲೆ ವತಿಯಿಂದ ನಗರದ ತೆಲುಗರ ಬೀದಿಯಲ್ಲಿರುವ ಕೂರ್ಗ್ ವ್ಯಾಲಿ ಶಾಲೆಯ ಆವರಣದಲ್ಲಿ ಕೊಬುಡೋ ತರಬೇತಿ ಶಿಬಿರ ಆಯೋಜನೆ ಮಾಡಲಾಗಿತ್ತು. ಮುಖ್ಯ ಶಿಕ್ಷಕ ಸನ್‌ಸಾಯಿ ಟಿ.ಡಿ.ಜಾನ್‌ಸನ್ ಅವರು ವಿದ್ಯಾರ್ಥಿಗಳಿಗೆ ಕೊಬುಡೋ ತರಬೇತಿ ನೀಡಿದರು. ಇದು ಜಪಾನ್ ದೇಶದ ಪಾರಂಪರಿಕ ಸಮರ ಕಲೆಯಾಗಿದ್ದು, ಇದನ್ನು ಆತ್ಮರಕ್ಷಣೆಗಾಗಿ ಬಳಸಲಾಗುತ್ತಿತ್ತು. ಭಾರತದಲ್ಲಿ ಕಲೆಯನ್ನು ಪರಿಚಯಿಸಲಾಗಿದೆ. ಸಮರ ಕಲೆಯನ್ನು ಕಲಿತು ಮಾನಸಿಕ, ದೈಹಿಕವಾಗಿ ಸದೃಢರಾಗಬೇಕು ಎಂದು ಜಾನ್‌ಸನ್ ಸಲಹೆ ನೀಡಿದರು.
ಗೊಜೂ ರ‌್ಯೂ ತರಬೇತಿ ಶಾಲೆ ಮುಖ್ಯ ಶಿಕ್ಷಕ ಎಂ.ಬಿ. ಚಂದ್ರನ್ ಮಾತನಾಡಿ, ಕರಾಟೆಯಲ್ಲಿ ಕೊಬುಡೂ ಒಂದು ವಿಶಿಷ್ಟ ಕಲೆಯಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಕಲೆಯನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ವಿಶಿಷ್ಟ ಕಲೆಯನ್ನು ಕಲಿಯಲು ಆಸಕ್ತರಾಗಿದ್ದು, ಕೊಬುಡೊ ಮುಖ್ಯ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ ಎಂದರು.
ಕೊಬುಡೊ ತರಬೇತಿ ಶಿಕ್ಷಕರಾದ ಮೋಹನ್ ದಾಸ್ ತ್ರಿಸೂರ್ ಕೇರಳ, ಸೆಂಪಾಯಿ ಸಿ.ಎಚ್.ಬಶೀರ್, ಸೋನಿಕಾ, ಹರಿಕೃಷ್ಣನ್, ಆಕಾಶ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.