ಕೋಡಿಬಿದ್ದ ಮಾಕೋರ್ನಹಳ್ಳಿ ಡ್ಯಾಂ

4
Published on

ಶಿಂಷಾ ನದಿ ಒಳ, ಹೊರ ಹರಿವು ಹೆಚ್ಚಳ | ಬಾಗಿನ ಅರ್ಪಿಸಿದ ಶಾಸಕ ರಂಗನಾಥ್​

ವಿಜಯವಾಣಿ ಸುದ್ದಿಜಾಲ ಕುಣಿಗಲ್​
ತಾಲೂಕಿನ ಇತಿಹಾಸ ಪ್ರಸಿದ್ಧ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಕೋರ್ನಹಳ್ಳಿ ಜಲಾಶಯ ವಾರದಿಂದ ಸುರಿದ ಜಡಿಮಳೆ ಹಾಗೂ ಹೇಮಾವತಿ ನೀರು ಹರಿಯುತ್ತಿರುವ ಕಾರಣ ಭರ್ತಿಯಾಗಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಾ.ಎಚ್​.ಡಿ.ರಂಗನಾಥ್​ ಶುಕ್ರವಾರ ಪೂರ್ಣಕುಂಭದೊಂದಿಗೆ ಜಲಾಶಯಕ್ಕೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದರು.

ಈ ವೇಳೆ ಮಾತನಾಡಿದ ಎಚ್​.ಡಿ.ರಂಗನಾಥ್​, ನನ್ನ ಅವಧಿಯಲ್ಲಿ ಸತತ ಐದು ವರ್ಷವೂ ಜಲಾಶಯ ತುಂಬಿದ್ದು, ಒಟ್ಟು 5 ಬಾರಿ ಗಂಗಾಪೂಜೆ ನೆರವೇರಿಸಿದ್ದು ನನ್ನ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಡ್ಯಾಂ ನೋಡಲು ಪ್ರವಾಸಿಗರ ದಂಡು: ಮಾಕೋರ್ನಹಳ್ಳಿ ಜಲಾಶಯಕ್ಕೆ 2,500 ಕ್ಯೂಸೆಕ್​ ನೀರು ಒಳ ಹರಿಯುತ್ತಿದ್ದು, ಅಷ್ಟೆ ಪ್ರಮಾಣ ನೀರು ಕೋಡಿ ಮೂಲಕ ಹೊರ ಹರಿಯುತ್ತಿದೆ. ಈ ರಮಣೀಯ ದೃಶ್ಯ ಕಣ್ಮನ ಸೆಳೆಯುತ್ತಿದೆ. ಇದರಿಂದ ಜಲಾಶಯ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.


ಹೋಳಿಗೆ ಊಟ: ಜಲಾಶಯ ತುಂಬಿ ಕೋಡಿ ಹರಿದ ಸಂಭ್ರಮ ಹಾಗೂ ಗಂಗಾ ಪೂಜೆ ಪ್ರಯುಕ್ತ ಆಗಮಿಸಿದ್ದ ಎಲ್ಲರಿಗೂ ಡಾ.ರಂಗನಾಥ್​ ಹೋಳಿಗೆ ಊಟ ಹಾಕಿಸಿದರು. ಪೂಜೆಗೆ ಅಗಮಿಸಿದ್ದ ಮುಖಂಡರು, ರೈತರು, ಮಹಿಳೆಯರು ಹೊಳೆ ದಡದಲ್ಲಿ ಕೂಳಿತು ಸಿಹಿ ಭೋಜನ ಸವಿದರು. ಎಡೆಯೂರು ಹೇಮಾವತಿ ನಾಲಾವಲಯದ ಇಇ ಶ್ರೀನಿವಾಸ್​, ಎಇಇ ರುದ್ರೇಶ್​, ಬ್ಲಾಕ್​ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಬಿ.ಕೆ.ರಾಮಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಡಿ.ಕುಮಾರ್​, ಮುಖಂಡರಾದ ಸುದರಕುಪ್ಪೆ ಪಾಪಣ್ಣ ಹಾಗೂ ಇತರರು ಇದ್ದರು.

27 ಕೆರೆಗಳಿಗೆ ನೀರು: ಮಾಕೋರ್ನಹಳ್ಳಿ ಜಲಾಶದಿಂದ 2,500 ಕ್ಯೂಸೆಕ್​ ನೀರು ಕೋಡಿ ಮೂಲಕ ಹರಿದು ತಮಿಳುನಾಡು ಸೇರುತ್ತಿದೆ. ಈ ಸಂಬಂಧ ನೀರು ಪೋಲಾಗುವುದನ್ನೂ ತಡೆಗಟ್ಟುವ ನಿಟ್ಟಿನಲ್ಲಿ ಅಮೃತ್ತೂರು ಹೋಬಳಿ ವ್ಯಾಪ್ತಿಯ ಸಾಲುಕೆರೆಗಳನ್ನು (ಒಟ್ಟು27 ಕೆರೆಗಳು) ತುಂಬಿಸಲು ಇಂದಿನಿಂದಲೇ ನೀರು ಹರಿಸುವುದಾಗಿ ಶಾಸಕ ರಂಗನಾಥ್​ ತಿಳಿಸಿದರಲ್ಲದೇ ಡ್ಯಾಂ ತೂಬಿಗೆ ಪೂಜೆ ಸಲ್ಲಿಸಿ, ಚಾಲನೆ ಸಹ ನೀಡಿದರು.

ಲಿಂಕ್​ಕೆನಾಲ್​ ವರದಾನ: ಮಾಕೋರ್ನಹಳ್ಳಿ ಜಲಾಶಯಕ್ಕೆ ಶಾಶ್ವತವಾಗಿ ನೀರು ಹರಿಯಲು ಲಿಂಕ್​ಕೆನಾಲ್​ ಅವಶ್ಯಕವಾಗಿದ್ದು, ನಮ್ಮ ತಾಲೂಕಿನವರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ. ಈ ಭಾಗದ ರೈತರ ಹಿತ ದೃಷ್ಟಿಯಿಂದ ಲಿಂಕ್​ಕೆನಾಲ್​ ಯೋಜನೆ ಜಾರಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ರಂಗನಾಥ್​ ಈ ವೇಳೆ ಕೋರಿದರು.

7 ಕೋಟಿ ಅನುದಾನ: ಮಾಕೋರ್ನಹಳ್ಳಿ ಡ್ಯಾಂ ಅಚ್ಚುಕಟ್ಟು ಪ್ರದೇಶಕ್ಕೆ ಹಾಗೂ ಸಾಲು ಕೆರೆಗಳಿಗೆ ನೀರು ಹರಿಸಲು ನಾಲೆಗಳು ಹಾಳಾಗಿದ್ದವು. ನಾಲೆಗಳ ದುರಸ್ತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು 7 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ನಾಲೆಗಳನ್ನು ದುರಸ್ತಿ ಮಾಡಲಾಗಿದೆ ಎಂದು ಶಾಸಕ ಎಚ್​.ಡಿ.ರಂಗನಾಥ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net