ಕಚೇರಿ ಪ್ರವೇಶಿಸಿದ ಆಹಾರ ಸಚಿವ ಗೋಪಾಲಯ್ಯ: ವಿಧಾನಸೌಧದಲ್ಲಿ ಸಡಗರ-ಸಂಭ್ರಮ, ತಾಯಿ ಪಾದಪೂಜೆ ಮಾಡಿ ಕಾರ್ಯಾರಂಭ

Gopalayya 9 Dec 19
Published on

ಬೆಂಗಳೂರು: ವಿಧಾನಸೌಧದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 244ರಲ್ಲಿ ಗುರುವಾರ ಹಬ್ಬದ ವಾತಾವರಣವಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಕಚೇರಿ ಪ್ರವೇಶಿಸಿದ್ದು ಇದಕ್ಕೆ ಕಾರಣ.

ತಾಯಿ ಕಾಳಮ್ಮ ಅವರಿಗೆ ಪಾದಪೂಜೆ ಸಲ್ಲಿಸುವ ಮೂಲಕ ಗೋಪಾಲಯ್ಯ ಕಾರ್ಯಾರಂಭ ಮಾಡಿದ್ದು ವಿಶೇಷ. ಪತ್ನಿ, ಮಾಜಿ ಉಪ ಮೇಯರ್ ಹೇಮಲತಾ ಜತೆಗೆ ಕಚೇರಿ ಪೂಜೆ ನೆರವೇರಿಸಿದರು. ಕುಟುಂಬ ಸದಸ್ಯರು, ಅಭಿಮಾನಿಗಳು, ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಹೂಮಾಲೆ ಹಾಕಿ, ಹೂಗುಚ್ಛ ಕೊಟ್ಟು ಅಭಿನಂದಿಸಿದರು. ಬಂದವರಿಗೆಲ್ಲ ಸಿಹಿ ತಿನಿಸು, ಉಪಾಹಾರದ ವ್ಯವಸ್ಥೆಯೂ ಆಗಿತ್ತು.ಕಚೇರಿ ಪೂಜೆ ವೇಳೆ ಸಚಿವ ವಿ. ಸೋಮಣ್ಣ ಆಗಮಿಸಿ ಗೋಪಾಲಯ್ಯಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.

ಸಮಜಾಯಿಷಿ: ದೇವರನ್ನು ಹೆಚ್ಚು ನಂಬುವ ಕುಟುಂಬ ನಮ್ಮದು. ಹೀಗಾಗಿ ಪೂಜೆ ಸಲ್ಲಿಸಿ ಕಚೇರಿ ಉದ್ಘಾಟಿಸಿರುವೆ. ವಾಸ್ತು ಕಾರಣಕ್ಕೆ ಈ ಕೊಠಡಿಯನ್ನು ಕಚೇರಿಗೆ ಆಯ್ಕೆ ಮಾಡಿಕೊಂಡಿಲ್ಲ. ಮೊದಲು ನೀಡಿದ್ದ ಕೊಠಡಿ ಇಕ್ಕಟ್ಟಾಗಿತ್ತು. ಆಪ್ತ ಕಾರ್ಯದರ್ಶಿ ಕಚೇರಿಯೂ ಪಕ್ಕದಲ್ಲಿ ಇರಲಿಲ್ಲ. ಅಧಿಕಾರಿಗಳ ಸಭೆ ಕರೆಯಲು ಅನುಕೂಲವಿರಲಿಲ್ಲ. ಹೀಗಾಗಿ ಕೊಠಡಿ ಸಂಖ್ಯೆ 244ನ್ನು ಆಯ್ಕೆ ಮಾಡಿಕೊಂಡೆ ಎಂದು ಗೋಪಾಲಯ್ಯ ಸಮಜಾಯಿಷಿ ನೀಡಿದರು.

ಮಠಗಳಿಗೆ ಪಡಿತರ ಮುಂದುವರಿಕೆ: ಮಠಗಳಿಗೆ ಪಡಿತರ ವಿತರಣೆ ಮುಂದುವರಿಯಲಿದೆ ಎಂದು ಗೋಪಾಲಯ್ಯ ಸ್ಪಷ್ಟಪಡಿಸಿದರು. ಪ್ರಮುಖ ನಿರ್ಧಾರಗಳ ಬಗ್ಗೆ ಸಿಎಂ ಜತೆ ರ್ಚಚಿಸುವೆ. ಮೊದಲಿಗೆ ಇಲಾಖೆಯನ್ನು ಅರ್ಥ ಮಾಡಿಕೊಳ್ಳುವೆ. ನಂತರ ಬಿಪಿಎಲ್ ಪಡಿತರ ಚೀಟಿ, ಪಡಿತರ ಹಂಚಿಕೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದರು. ಸಿಎಂ ಭರವಸೆಯಿಟ್ಟು ಬಯಸಿದ ಖಾತೆಯನ್ನೇ ನೀಡಿದ್ದು ಸಮರ್ಥವಾಗಿ ನಿಭಾಯಿಸುವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜನರಿಗೆ ಹತ್ತಿರವಾದ ಇಲಾಖೆಯಾಗಿದೆ. ಸಣ್ಣ ಕೈಗಾರಿಕೆ ಖಾತೆ ಬದಲಾವಣೆಗೆ ಒತ್ತಾಯಿಸಿರಲಿಲ್ಲ, ನನ್ನ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚಿದ್ದವು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net