ಮಾಧುಸ್ವಾಮಿ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ; ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ

1111
Published on

ತುಮಕೂರು : ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಸಚಿವರಾಗಿ ಕ್ಷೇತ್ರಕ್ಕೆ ಸೀಮಿತವಾಗದೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಧುಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದರು. ಉಸ್ತುವಾರಿ ಸಚಿವರಾಗಿ ಇತರರಂತೆ ತಮ್ಮ ಕ್ಷೇತ್ರ ಮಾತ್ರ ಅಭಿವೃದ್ಧಿ ಮಾಡಿಲ್ಲ, ಇಡೀ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಬೇಸರವಾಗಿ ಕಾಂಗ್ರೆಸ್‌ಗೆ ಬಂದರೆ ಯಾರ ಅಭ್ಯಂತರವೂ ಇಲ್ಲ, ಅವರು ಬರುವುದರಿಂದ ಜಿಲ್ಲೆಯಲ್ಲಿ ಪಕ್ಷ ಶಕ್ತಿಶಾಲಿಯಾಗಲಿದೆ. ಆದರೆ, ಅಂತಹ ಸಂದರ್ಭ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಣಯ ಕೆಪಿಸಿಸಿ ಅಧ್ಯಕ್ಷರು ಮಾಡುತ್ತಾರೆ ಎಂದರು.

ಕಾಂಗ್ರೆಸ್ ಸಮುದ್ರವಿದ್ದಂತೆ. ಇಲ್ಲಿಗೆ ಗಂಗಾನದಿ ಬಂದು ಸೇರುತ್ತದೆ, ಕೆಟ್ಟ ನೀರು ಕೂಡ ಸೇರುತ್ತದೆ. ಸಮುದ್ರ ಎಲ್ಲವನ್ನೂ ಅರಗಿಸಿಕೊಳ್ಳುತ್ತದೆ. ಕೆಲವರಿಗೆ ಅಮೃತ ಸಿಗುತ್ತದೆ, ಕೆಲವರಿಗೆ ವಿಷ ಸಿಗುತ್ತದೆ ಎಂದು ಸಿ.ಎಂ.ಇಬ್ರಾಹಿಂ ಪಕ್ಷ ತ್ಯಜಿಸುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ಬಿಎಂಎಲ್ ಕಾಂತರಾಜು ಕಾಂಗ್ರೆಸ್ ಸೇರಿದ್ದಾರೆ, ಎಸ್.ಆರ್.ಶ್ರೀನಿವಾಸ್ ಪಕ್ಷಕ್ಕೆ ಬರುತ್ತಾರೆ. ಬಿಜೆಪಿಯಿಂದಲೂ ಕೆಲವರು ಬರುವ ನಿರೀಕ್ಷೆಯಿದೆ. ಸಂಸದ ಜಿ.ಎಸ್.ಬಸವರಾಜು ಎಂದೂ ಬಿಜೆಪಿಯವರಾಗಿಲ್ಲ, ಕಾಂಗ್ರೆಸ್‌ನಲ್ಲಿ ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರಿದ್ದಾರೆ ಅಷ್ಟೇ ಎಂದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಸ್‌ಪಿಎಂಗೆ ಅನ್ಯಾಯವಾಗಿದ್ದು ನಿಜ : ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಸಂಸತ್ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿದ್ದರೆ ಇಂದು ತುಮಕೂರಲ್ಲಿ ಕಾಂಗ್ರೆಸ್ ಸಂಸದರು ಇರುತ್ತಿದ್ದರು. ಟಿಕೆಟ್ ನೀಡದೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದಿರುವುದು ಅನ್ಯಾಯ ಎಂದು ಕೆ.ಎನ್.ರಾಜಣ್ಣ ಎಸ್ಪಿಎಂ ಪರ ಬ್ಯಾಟ್ ಬೀಸಿದರು. ಪಕ್ಷದ ನಿರ್ಧಾರದಿಂದ ಮುದ್ದಹನುಮೇಗೌಡಗೆ ಬೇಸರವಾಗಿದೆ. ಹಾಗಾಗಿ, ಕುಣಿಗಲ್‌ನಲ್ಲಿ ಪ್ರಚಾರ ಆರಂಭಿಸಿದ್ದಾರೆ. ನನಗೆ ಅವರ ಬಗ್ಗೆ ಸಹಾನುಭೂತಿಯಿದೆ, ಭವಿಷ್ಯದಲ್ಲಿ ಸಂಸತ್‌ಗೆ ಹೋಗುವ ಅವಕಾಶ ಅವರಿಗಿದೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ವಯಸ್ಸಿನ ಕಾರಣಕ್ಕೆ ಹಳೇ ಮೈಸೂರು ಭಾಗದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಬಾದಾಮಿಗೆ ಓಡಾಟ ಕಷ್ಟ ಎಂಬ ಕಾರಣಕ್ಕೆ ಕ್ಷೇತ್ರ ಬದಲಿಸಬಹುದು. ಮಧುಗಿರಿ, ಚಿಕ್ಕನಾಯಕನಹಳ್ಳಿಗೂ ಆಹ್ವಾನಿಸಿದ್ದೇವೆ, ಚಾಮರಾಜಪೇಟೆ ಅಥವಾ ವರುಣಾದಲ್ಲಿ ನಿಲ್ಲಬಹುದು. ಕೆ.ಎನ್.ರಾಜಣ್ಣ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net