ಅಧಿಕಾರ ಇದ್ದಾಗ ಜನಸೇವೆ ಮಾಡಿ ; ಜನಪ್ರತಿನಿಧಿಗಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಲಹೆ

14TMK_KNR
Published on

ತುಮಕೂರು: ರಾಜಕೀಯ ಅಧಿಕಾರಕ್ಕೆ ಬಂದಾಗ ಜನರಿಗಾಗಿ ಕೆಲಸ ಮಾಡಬೇಕು, ಆಗ ಸಾರ್ವಜನಿಕರ ಮನಸ್ಸಿನಲ್ಲಿ ಉಳಿಯುತ್ತಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ನಗರದ ಮರಳೂರು ಕೆ.ಎನ್.ಆರ್.ಅಭಿಮಾನಿಗಳ ಬಳಗದಿಂದ ಭಾನುವಾರ ಮೇಯರ್ ಬಿ.ಜಿ.ಕೃಷ್ಣಪ್ಪ ಮತ್ತು ಉಪಮೇಯರ್ ನಾಜೀಮಾಬಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಅಧಿಕಾರಕ್ಕೆ ಬಂದ ಮೇಲೆ ಕೆಲಸ ಮಾಡಬೇಕು, ಗ್ರಾಮದ ಜನತೆ ನಿಮ್ಮನ್ನು ಕರೆದು ಹೂಮಾಲೆ ಹಾಕಿದ್ದಾರೆ ಎಂದರೆ ನಿಮ್ಮ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದರ್ಥ. ಆದ್ದರಿಂದ ನಿಮ್ಮ ಅವಧಿಯಲ್ಲಿ ಉತ್ತಮವಾದ ಜನಪರ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಬೇಕು ಎಂದರು.

ಅಧಿಕಾರ ಎಂಬುದು ವಿಷ ಇದ್ದಂತೆ ಅದನ್ನು ಪ್ರಾಣ ತೆಗೆಯಲು ಬಳಸಬಹುದು, ಪ್ರಾಣ ಉಳಿಸುವುದಕ್ಕೂ ಬಳಸಬಹುದು. ಹಾವಿನ ವಿಷ ಪ್ರಾಣ ತೆಗೆಯಲೂ ಬಳಸಹುದು, ಔಷಧ ರೂಪದಲ್ಲಿ ಪ್ರಾಣವನ್ನು ಉಳಿಸಲೂಬಹುದು, ಅದನ್ನು ರೂಪಾಂತರ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ಸಲಹೆ ನೀಡಿದರು.

ಮರಳೂರು ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಮರಳೂರು ಕೆರೆಗೆ ಇನ್ನು 6 ತಿಂಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ನೀರು ಹರಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ ಎಂದು ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಕೆರೆಗಳು ತುಂಬಿಸಿಕೊಳ್ಳಬಹುದು ಎಂದು ಯಾರಿಗೂ ಯೋಚನೆ ಇರಲಿಲ್ಲ, ಈ ಹಿಂದೆ ಇದ್ದವರು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಬರೀ ಕಟ್ಟಡಗಳು ರಸ್ತೆಗಳು ನಿರ್ಮಾಣ ಮಾಡಲು ಹೊರಟಿದ್ದರು. ನಾವು ಗೆದ್ದ ಮೇಲೆ ಸಾಕಷ್ಟು ಕ್ರಿಯಾ ಯೋಜನೆ ಬದಲಾವಣೆ ಮಾಡಿದ ಪರಿಣಾಮ ಇಂದು ಅಮಾನಿಕೆರೆಗೆ ನೀರು ಹರಿದಿದೆ ಎಂದರು.

ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಮಹಾನಗರಪಾಲಿಕೆ ಆಡಳಿತವನ್ನು ಸರಳೀಕರಣಗೊಳಿಸಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಲು ಮತ್ತು ಸಾರ್ವಜನಿಕರ ಯಾವುದೇ ಅರ್ಜಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪಾಲಿಕೆಯ 35 ವಾರ್ಡುಗಳ ಸದಸ್ಯರ ಸಹಕಾರ ಬೇಕು ಎಂದರು.

ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್, ಉಪಮೇಯರ್ ನಾಜಿಮಾಬಿ, ಪಾಲಿಕೆ ಸದಸ್ಯ ಮಂಜುನಾಥ್, ಮರಳೂರು ಮಾಜಿ ಛೇರ‌್ಮೆನ್ ಭೀಮಯ್ಯ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್ ಮತ್ತಿತರರು ಇದ್ದರು.

ಶೇ.13.4 ಇರುವ ಒಕ್ಕಲಿಗರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ., ಶೇ.21 ರಷ್ಟಿರುವ ಲಿಂಗಾಯಿತರಿಗೂ 500 ಕೋಟಿ ರೂ. ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಉಳಿದ 65 ಎಲ್ಲ ತಳ ಸಮುದಾಯಗಳಿಗೆ ಕೇವಲ 500 ಕೋಟಿ ರೂ. ಮೀಸಲಿಟ್ಟು ತಾರತಮ್ಯ ಮಾಡಿದೆ. ಈ ಬಗ್ಗೆ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ದನಿ ಎತ್ತಬೇಕು. ಕೆ.ಎನ್.ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net