

ವಿಜಯಪುರ : ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ, ಮೂಲ ನಾಥ ಸಂಪ್ರದಾಯದ ವಿಜಯಪುರ ಜಿಲ್ಲೆ ಕನ್ನೂರ ಗ್ರಾಮದ ಶಾಂತಿಕುಟೀರದಲ್ಲಿ ಆ.25ರಿಂದ 31ರ ವರೆಗೆ ಸದ್ಗುರು ಶ್ರೀ ಗಣಪತರಾವ ಮಹಾರಾಜರ ಜನ್ಮೋತ್ಸವ ನಿಮಿತ್ತ ಜ್ಞಾನ ಸಪ್ತಾಹ ನಡೆಯಲಿದೆ.
ಕಳೆದೆರಡು ವರ್ಷ ಜನ್ಮೋತ್ಸವವು ಕರೊನಾ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆದಿದ್ದು, ಈ ವರ್ಷಎಲ್ಲ ಭಕ್ತರೂ ಶಾಂತಿಕುಟೀರಕ್ಕೆ ಆಗಮಿಸಿ ಸಮರ್ಥರ ವಾಸಸ್ಥಾನದ ಆನಂದವನ್ನು ಮತ್ತೆ ಅನುಭವಿಸಬಹುದಾಗಿದೆ. ಏಳು ದಿನ ನಡೆಯುವ ಜನ್ಮೋತ್ಸವ ಸಪ್ತಾಹದಲ್ಲಿ ಅನೇಕ ಸಂತರು, ಮಹಾತ್ಮರು ಆಗಮಿಸಿ ಅನುಭವಾಮೃತವನ್ನು ಭಕ್ತರಿಗೆ ನೀಡಲಿದ್ದಾರೆ.
ಆಧ್ಯಾತ್ಮಿಕ ಮಾರ್ಗದರ್ಶಕ ಪದ್ಮಭೂಷಣ ಚೈತನ್ಯಾಶ್ರಮದ ಶ್ರೀದತ್ತಾವಧೂತರು, ಮಂಡ್ಯದ ಚಿನ್ಮಯಾ ಮಿಷನ್ನಿನ ಸ್ವಾಮಿ ಆದಿತ್ಯಾನಂದ ಸರಸ್ವತಿಗಳು, ಬೆಂಗಳೂರಿನಿಂದ ಶ್ರೀ ವಿವೇಕ ಸಬನೀಸ ಮತ್ತು ಆದಿಚುಂಚನಗಿರಿ ಶಾಖಾ ಮಠದ ಶ್ರೀಸಾಯಿ ಕೀರ್ತಿನಾಥ ಸ್ವಾಮೀಜಿ, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿಗಳು, ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಶ್ರೀ ಸಹಜಾನಂದ ಸ್ವಾಮೀಜಿ, ಹುಬ್ಬಳ್ಳಿಯ ಆರ್ಷವಿದ್ಯಾಪೀಠದ ಶ್ರೀಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ವಿಜಯಪುರದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು, ಮಹಾರಾಷ್ಟ್ರದಿಂದ ಮುಂಬೈಯ ಪ್ರೀತಿ ಸಂಪಗಾಂವಕರ, ಪುಣೆಯ ಅರುಣ ಕೇಳಕರ, ಆಳಂದಿಯ ಶ್ರೀ ಶಂಕರ ಶಾಸಿಗಳು, ಇಚಲಕರಂಜಿಯ ಮುರಳಿ ಜಾಜು, ಮಿರಜ್‌ದಿಂದ ಸಮರ್ಥ ಭಕ್ತಕೌಸ್ತುಭ, ಬುವಾ ರಾಮದಾಸಿ, ಖೋಪೋಲಿ ಚಿನ್ಮಯಾ ಮಿಷನ್ನಿನ ಸ್ವಾಮಿ ಮೇಧನಾನಂದಜೀ ಅವರು ಆಗಮಿಸಿ ಮುಮುಕ್ಷುಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮತ್ತು ಅದಮ್ಯಚೇತನ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ ಅವರು ಆಗಮಿಸಲಿದ್ದಾರೆ. ನಿತ್ಯ ಬೆಳಗ್ಗೆ ಕಾಕಡಾರತಿ, ಧ್ಯಾನ, ಸಾಂಪ್ರದಾಯಿಕ ಭಜನೆ, ಸಂಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆ.30ರಂದು ರಾತ್ರಿ ಜಾಗರಣೆಯಲ್ಲಿ ಕೀರ್ತನೆ ನಡೆಯುತ್ತದೆ. ಸದ್ಗುರುಗಳ ಜನ್ಮೋತ್ಸವ ದಿನವಾದ ಆ.31ರಂದು ಜನ್ಮಸ್ಥಾನ ಕನ್ನೂರಗ್ರಾಮದಿಂದ ಶ್ರೀಕ್ಷೇತ್ರ ಶಾಂತಿಕುಟೀರದ ವರೆಗೆ ಪಲ್ಲಕ್ಕಿ ಉತ್ಸವ ಮತ್ತು ಮೆರವಣಿಗೆ ನಡೆಯಲಿದೆ ಎಂದು ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದಲಾಲ ಬಾಹೇತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.