ಜ್ಞಾನ ಎಲ್ಲ ರಂಗಕ್ಕೂ ಸಲ್ಲಬೇಕು: ಗುರುದತ್ ಹೆಗಡೆ

Jnana Dasara
ಕುವೆಂಪು ರಂಗಮಂದಿರದಲ್ಲಿ ಜ್ಞಾನ ದಸರಾವನ್ನು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಜಿ.ಕೆ.ಮಿಥುನ್‌ಕುಮಾರ್, ಕವಿತಾ ಯೋಗಪ್ಪನವರ್, ಸುರೇಶ್, ಸಮನ್ವಯ ಕಾಶಿ ಇದ್ದರು.
Published on

ಶಿವಮೊಗ್ಗ: ಜ್ಞಾನ ಎಂದರೆ ಬರೀ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ ಸೀಮಿತವಲ್ಲ. ಅದು ಎಲ್ಲ ರಂಗಕ್ಕೂ ಸಲ್ಲಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಬುಧವಾರ ಮಹಾನಗರ ಪಾಲಿಕೆಯಿಂದ ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜ್ಞಾನ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಆಸಕ್ತಿ, ಆಳವಾದ ಅಧ್ಯಯನ ಮತ್ತು ಸಾಧನೆಯಿಂದ ಜ್ಞಾನ ಸಂಪಾದನೆ ಮಾಡಬಹುದು ಎಂದರು.
ಜಿಲ್ಲೆಯಲ್ಲಿ ಅಪಾರ ಜ್ಞಾನವಂತರಿದ್ದಾರೆ. ಮಾದರಿ ಕೃಷಿಕರು, ಚಿಂತಕರು, ರಾಜಕಾರಣಿಗಳು ಮೊದಲಾದ ಸ್ಫೂರ್ತಿದಾಯಕ ವ್ಯಕ್ತಿಗಳಿದ್ದಾರೆ. ಆತ್ಮವಿಶ್ವಾಸದಿಂದ ಹಿಂಜರಿಕೆ ಪ್ರವೃತ್ತಿಯನ್ನು ಬಿಟ್ಟು ಚಿಕ್ಕ ಚಿಕ್ಕ ಗುರಿಗಳನ್ನು ಇಟ್ಟುಕೊಂಡು ಶ್ರದ್ಧೆಯಿಂದ ಮುನ್ನುಗ್ಗಿದಾಗ ಜ್ಞಾನ ಸಂಪಾದಿಸಬಹುದು ಎಂದರು.
ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬನಿಗೂ ಜ್ಞಾನ ತುಂಬ ಮುಖ್ಯ. ಯಾರ ಬಳಿ ಜ್ಞಾನವಿದೆಯೂ ಅವರಿಗೆ ಸನ್ಮಾನ ಗೌರವ ಎಲ್ಲವೂ ಸಿಗುತ್ತದೆ. ಯುವ ವಯಸ್ಸಿನಲ್ಲಿ ಗ್ರಹಣಶಕ್ತಿ ಜಾಸ್ತಿ ಇರುತ್ತದೆ. ಕೇವಲ ಪುಸ್ತಕದ ಓದು ಸಾಕಾಗುವುದಿಲ್ಲ. ಜ್ಞಾನವೊಂದೇ ಸಾಕಾಗುವುದಿಲ್ಲ. ಅದರ ಜತೆಗೆ ಮೌಲ್ಯಗಳು ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಮೌಲ್ಯಾಧಾರಿತ ಜೀವನ ಈ ದೇಶದ ಅಭಿವೃದ್ಧಿಗೆ ಪೂರಕ. ವ್ಯಕ್ತಿತ್ವ ನಿರ್ಮಾಣದ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ವಿವಿಧ ಸಾಧಕರಿಂದ ಉಣಬಡಿಸುವ ವಿಶೇಷ ಕಾರ್ಯಕ್ರಮವಾಗಿ ಜ್ಞಾನದಸರಾ ಹಮ್ಮಿಕೊಂಡಿದ್ದೇವೆ ಎಂದರು.
ಖ್ಯಾತ ತರಬೇತುದಾರರಾದ ಸಾಧನಾ ಮಂಜುನಾಥ್, ಖ್ಯಾತ ಮನೋವೈದ್ಯೆ ಡಾ. ಪ್ರೀತಿ ಶಾನಭಾಗ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ, ಅಂತಾರಾಷ್ಟ್ರೀಯ ತರಬೇತುದಾರ ವೆಂಕಟೇಶ್ ಮೈಸೂರು ಅವರಿಂದ ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಜ್ಞಾನವನ್ನು ಹಂಚಲಾಯಿತು. ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಸಮನ್ವಯ ಕಾಶಿ ಮತ್ತಿತರರಿದ್ದರು.

ಸಂಜೆ ಕಾರ್ಯಕ್ರಮಗಳಿಗೆ ಮಳೆ ಅಡ್ಡಿ
ನಾಡಹಬ್ಬ ದಸರಾ ನಿಮಿತ್ತ ಸಂಜೆ ನಡೆಯುವ ಕಾರ್ಯಕ್ರಮಗಳಿಗೆ ಮಳೆ ಅಡ್ಡಿಪಡಿಸುತ್ತಿದೆ. ಮಂಗಳವಾರ ಸಂಜೆಯೂ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಕಲಾ ದಸರಾದಲ್ಲಿ ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ವಿವಿಧ ಕಲಾವಿದರಿಂದ ಜಾನಪದ ನೃತ್ಯ ಗೀತೆಗಳ ಸಂಗಮಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಬುಧವಾರ ಸಂಜೆ ಫ್ರೀಡಂಪಾರ್ಕ್‌ನಲ್ಲಿ ಯುವ ದಸರಾ ಹಮ್ಮಿಕೊಂಡಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮಕ್ಕೂ ಮಳೆ ಅಡ್ಡಿಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net