

ಸವಣೂರ: ಬಿಕಾಂ ಪದವೀಧರರಿಗೆ ವಿಪುಲ ಅವಕಾಶಗಳಿವೆ. ಆದರೆ, ಆ ಅವಕಾಶಗಳನ್ನು ಬಳಸಿಕೊಳ್ಳುವ ರೀತಿಯಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿಲ್ಲ ಎಂದು ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ ಜೆ.ಎಂ. ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀಮತಿ ಲಿಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ, ವಾಣಿಜ್ಯ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕೇವಲ ಆದಾಯ ತೆರಿಗೆ ಎಂದರೇನು? 5 ಅಂಶಗಳ ಆದಾಯದ ಕುರಿತು ಮಾತ್ರ ಬೋಧಿಸುತ್ತಿದ್ದೇವೆ ಹೊರತು ಅದರಾಚೆಗೆ ವಿದ್ಯಾರ್ಥಿಗಳಿಗೆ ನಾವೇನನ್ನೂ ಕಲಿಸುತ್ತಿಲ್ಲ. ಈ ಹಿಂದೆ ನಾವು ಆದಾಯ ತೆರಿಗೆ ಪಾವತಿಸಲು ಲೆಕ್ಕ ಪರಿಶೋಧಕರ ಬಳಿ ತೆರಳುತ್ತಿದ್ದೆವು. ಬದಲಾಗಿ ನಾವೇ ಯಾರ ಸಹಾಯವಿಲ್ಲದೆ, ಆದಾಯ ತೆರಿಗೆಯನ್ನು ಹೇಗೆ ಫೈಲ್ ಮಾಡಬೇಕು ಎಂಬುದನ್ನು ತಿಳಿಸುತ್ತಿದ್ದೇವೆ. ಸರ್ಕಾರಗಳು ನಡೆಯುತ್ತಿರುವುದೇ ನಮ್ಮ ಆದಾಯ ತೆರಿಗೆಯಿಂದ. ನಾವು ಅದರ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಡಾ. ಪ್ರವೀಣ ಮಹಾಬಲೇಶ್ವರ ಆನಂದಕಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಂದಿಗ್ಧ ಸ್ಥಿತಿ ಎದುರಾದರೆ ಪಾಲಕರೊಂದಿಗೆ ಹಂಚಿಕೊಂಡಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳು ಮೂರು ವರ್ಷಗಳಲ್ಲಿ ಪ್ರಾಧ್ಯಾಪಕರ ಬೋಧನೆಗೆ ಸ್ಪಂದಿಸಿ ಭವಿಷ್ಯವನ್ನು ರೂಪಿಸಿಕೊಂಡು ಪಾಲಕರ ಹಾಗೂ ಕಾಲೇಜಿನ ಗರಿಮೆ ಹೆಚ್ಚಿಸಿ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರಾದ ಡಾ. ಎಂ.ಎಚ್. ಹೆಬ್ಬಾಳ, ಡಾ. ರಘು ಎಸ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಶ್ವನಾಥ ಯತ್ನಳ್ಳಿ, ಎಫ್.ಬಿ ನಾಯ್ಕರ್, ದಿವ್ಯಶ್ರೀ ಬಿ.ಎನ್., ಗಂಗಾನಾಯ್ಕ ಎಲ್., ಅಜ್ಯಯ್ಯ ಹಿರೇಮಠ, ಮಹೇಂದ್ರ ದೊಡ್ಡಮನಿ, ಕಾರ್ತಿಕ ಪಾಟೀಲ, ಅನಿಲಕುಮಾರ ಹಾಗೂ ಇತರರು ಪಾಲ್ಗೊಂಡಿದ್ದರು. ಸಿದ್ದು ಕವಟಗಿಮಠ, ಪ್ರಿಯದರ್ಶಿನಿ ಪಾಟೀಲ ಹಾಗೂ ರುದ್ರಪ್ಪ ಕೆ.ಜಿ, ಕಾರ್ಯಕ್ರಮ ನಿರ್ವಹಿಸಿದರು.