

ಚಿಕ್ಕಮಗಳೂರು: ಪ್ರಸ್ತುತ ವಿದ್ಯಾಮಾನದಲ್ಲಿ ತಂತ್ರಜ್ಞಾನವು ಅತಿಹೆಚ್ಚು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಹೊಸ ತಂತ್ರಾಂಶದ ಅಗತ್ಯ ಬಹಳಷ್ಟಿದ್ದು, ಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್ ತಿಳಿಸಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ ಶಾಖೆಯಿಂದ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲಿ ಇವುಗಳ ಬಗ್ಗೆ ಜ್ಞಾನ ಹೊಂದುವುದು ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ ಸ್ಪರ್ಧಾತ್ಮಕ ಯುಗದಲ್ಲಿ ಅಭಿವೃದ್ಧಿ ಹೊಂದುವುದು ಕಷ್ಟಕರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಪಾತ್ರ ಅನಿವಾರ್ಯವಾಗಿದೆ ಎಂದರು.
ಕಲಿಯುವ ವಿಷಯದಲ್ಲಿ ವಿಶೇಷ ಜ್ಞಾನ ಹೊಂದುವುದು ಹಾಗೂ ಹೊಸತನವನ್ನು ಮಾಡುವ ಜ್ಞಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಕಲಿಕೆಯು ನಿಮ್ಮೊಂದಿಗೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ವಿಷಯಗಳಲ್ಲಿ ವಿಶೇಷ ಆಸಕ್ತಿ ಹಾಗೂ ಜ್ಞಾನವನ್ನು ಹೊಂದಿ ಭವಿಷ್ಯದ ಬೆಳವಣಿಗೆಯತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಪ್ರಾಧ್ಯಾಪಕ ಎಂ.ಎಸ್.ದೃವ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೃತಕ ಬುದ್ಧಿ ಮತ್ತು ಯಂತ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳು ತಂತ್ರಾಂಶದಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ವಿಷಯಗಳ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪೋಗ್ರಾಮಿಂಗ್ ಭಾಷೆಗಳು ಮುಖ್ಯವಾಗುತ್ತವೆ ಎಂದು ಹೇಳಿದರು.
ಪೈಥಾನ್, ಜಾವಾ ಅಂತಹ ಹಲವಾರು ತಂತ್ರಾಂಶದ ಭಾಷೆಗಳು ಕಲಿಯುವುದು ಅಗತ್ಯ. ಈ ತಂತ್ರಜ್ಞಾನ ಯುಗದಲ್ಲಿ ಕಲಿಕೆಗೆ ಮಿತಿ ಇಲ್ಲ, ವಿಶೇಷವಾಗಿ ಕಲಿತು ಹೊಸತನ ರೂಪಿಸುವುದರ ಮೂಲಕ ಎಲ್ಲರಿಗಿಂತ ವಿಭಿನ್ನವಾಗಿ ಕಲಿತಾಗಿ ಸಮಾಜದಲ್ಲಿ ನಾವೂ ಭಿನ್ನವಾಗಿ ಗುರುತಿಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರತಿಯೊಂದು ಕ್ಷೇತ್ರಕ್ಕೂ ತಂತ್ರಜ್ಞಾನ ಬಹಳ ಮುಖ್ಯ. ತಂತ್ರಜ್ಞಾನದಲ್ಲಿ ವಿಶೇಷ ಜ್ಞಾನವನ್ನು ಹೊಂದಿ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿ ದಿನಗಳಲ್ಲಿ ಇಂತಹ ವಿಷಯಗಳನ್ನು ಹೆಚ್ಚು ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧರಾಗಬೇಕು ಎಂದರು.
ಎಐಎಂಎಲ್ ಶಾಖೆ ಮುಖ್ಯಸ್ಥೆ ಡಾ. ಎಂ.ಆರ್.ಸುನೀತಾ ಮಾತನಾಡಿ, ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ೫೦ಕ್ಕೂ ಹೆಚ್ಚಿನ ವಿಷಯಗಳಿವೆ. ಪ್ರತಿಯೊಬ್ಬರು ಒಂದೊಂದು ವಿಷಯಗಳಲ್ಲಿ ತಮ್ಮದೇ ಆದ ಜ್ಞಾನವನ್ನು ಹೊಂದಿರುತ್ತಾರೆ. ಆಸಕ್ತಿಯಿರುವ ವಿಷಯಗಳ ಮೇಲೆ ಅಧ್ಯಯನ ನಡೆಸುವುದರೊಂದಿಗೆ ಈ ಯುಗಕ್ಕೆ ಅಗತ್ಯವಿರುವ ಪಠ್ಯೇತರ ವಿಷಯಗಳ ಬಗ್ಗೆ ಜ್ಞಾನವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಎಂ.ಜೆ.ಆದರ್ಶ್ ಉಪಸ್ಥಿತರಿದ್ದರು.