

ವಿಜಯವಾಣಿ ಸುದ್ದಿಜಾಲ ಉಡುಪಿ
ಪಠ್ಯ-ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರುವ ಭಾರತೀಯ ಅಂಚೆ ಇಲಾಖೆಯಿಂದ ಜ್ಞಾನ ಅಂಚೆ ಸೇವೆ ಮೇ 1ರಿಂದಲೇ ಆರಂಭಗೊಂಡಿದೆ.
ಈ ಮೊದಲು ಪಠ್ಯ-ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳನ್ನು ಭಾರತೀಯ ಅಂಚೆಯ ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ಗಳ ಮೂಲಕ ಕಳುಹಿಸಬೇಕಿತ್ತು. ಭಾರತೀಯ ಅಂಚೆ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ಮಾಡಲಾಗಿದ್ದು, 2024ರ ಜೂನ್ನಲ್ಲಿ ಬುಕ್ ಪ್ಯಾಕೆಟ್ ಸೇವೆ ರದ್ದುಪಡಿಸಲಾಗಿತ್ತು.
ಇದೀಗ ಭಾರತೀಯ ಅಂಚೆ ಕಾಯ್ದೆಗೆ ಕೇಂದ್ರ ಸರ್ಕಾರ ಮತ್ತೆ ತಿದ್ದುಪಡಿ ಮಾಡಿದ್ದು, ಜ್ಞಾನ ಅಂಚೆ ಸೇವೆ ಆರಂಭಿಸಿದೆ. ಪಠ್ಯ-ಪುಸ್ತಕ, ಸಾಹಿತ್ಯ ಕೃತಿಗಳಿಗಷ್ಟೇ ಈ ಸೇವೆ ಮೀಸಲಾಗಿದೆ. ಬಿಲ್ ಬುಕ್ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ ಎಂದು ಉಡುಪಿ ಅಂಚೆ ಇಲಾಖೆ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.
ಅಂಚೆ ಇಲಾಖೆಯ ಈ ನೂತನ ಸೇವೆಯಡಿ ಪುಸ್ತಕಗಳನ್ನು ಕಳುಹಿಸುವವರು ಅದರ ಮೇಲೆ ಜ್ಞಾನ ಅಂಚೆ ಎಂದು ಕಡ್ಡಾಯವಾಗಿ ನಮೂದಿಸಬೇಕು. ಪುಸ್ತಕ ಕಳುಹಿಸುವವರು ಮತ್ತು ಪಡೆಯುವವರ ಜತೆಗೆ ಪ್ರಕಾಶಕರ ಹೆಸರು ಹಾಗೂ ವಿಳಾಸವನ್ನೂ ನಮೂದಿಸಿರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹಗಳು ಇರಕೂಡದು. ಗರಿಷ್ಠ 5 ಕೆಜಿ ವರೆಗಿನ ಪಾರ್ಸಲ್ಗಳನ್ನು ಮಾತ್ರ ಜ್ಞಾನ ಅಂಚೆ ಸೇವೆಗೆ ಪರಿಗಣಿಸಲಾಗಿದೆ.