

ಹೊರ್ತಿ: ಬದುಕಿನ ಕತ್ತಲೆ ಕಳೆದು ಜ್ಞಾನದ ಬೆಳಕಿನ ದಾರಿ ತೋರಿಸುವ ಪುರಾಣ ಪುಣ್ಯಕಥೆಗಳನ್ನು ಸರ್ವರೂ ಆಲಿಸಬೇಕು ಎಂದು ಗುಡ್ಡಾಪುರದ ಶ್ರೀ ಗುರುಪಾದ ಶಿವಾಚಾರ್ಯರು ಹೇಳಿದರು.
ಸಮಿಪದ ಕನ್ನೂರ ಗ್ರಾಮದಲ್ಲಿ ಗುರುಮಠದ ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ 19ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಸಮಾರಂಭ ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.
ಮಹಾತ್ಮರ ಜೀವನ ಚರಿತ್ರೆಯನ್ನು ಪುರಾಣಗಳ ಮುಖಾಂತರ ಆಲಿಸಿ ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಬೊಮ್ಮನಹಳ್ಳಿ ಗವಿಮಠದ ಗುರುಶಾಂತ ಶಿವಾಚಾರ್ಯರು ಮಾತನಾಡಿ, ಕಾಯಕ ತತ್ವ ಸಾರಿದ ಬಸವಣ್ಣನವರು, ಶರಣರು, ಸಂತರ ಶ್ರೇಷ್ಠ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ದಾಸೋಹ ಪರಂಪರೆ ಮೂಲಕ ಹಸಿದವರಿಗೆ ಅನ್ನ ನೀಡುವುದೇ ಭಗವಂತನ ನಿಜವಾದ ಪೂಜೆಯೆಂದು ಸಾರಿದ ಶರಣ ಶ್ರೇಷ್ಠರ ಆದರ್ಶ ಪಾಲಿಸಬೇಕು ಎಂದರು.
ಜೇರಟಗಿ ಹಿರೇಮಠದ ಪುರಾಣ ಪ್ರವಚನ ಪಂಡಿತ ಮಡಿವಾಳಯ್ಯ ಶಾಸ್ತ್ರಿಗಳು, ಯಶವಂತ ಬಡಿಗೇರ, ರಾಜಶೇಖರ ಕಟ್ಟಿಸಂಗಾವಿ, ನಾಗಪ್ಪ ಸಾಹುಕಾರ, ಚಂದ್ರಮ್ಮಾ ಮೈತ್ರಿ ಹಾಗೂ ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯರು ಇತರರಿದ್ದರು. ದಾಸೋಹ ಸೇವೆಯನ್ನು ಶಿವುಸಾಹುಕಾರ ಮಲ್ಲಪ್ಪ ಡೊಳ್ಳಿ ನೆರವೇರಿಸಿದರು.