

ವಿರಾಜಪೇಟೆ: ಜ್ಞಾನ ಸಂಪತ್ತು, ಅಜ್ಞಾನ ಬಡತನ ಎಂಬುದನ್ನು ಜನ ಸಾಮಾನ್ಯರು ಅರಿಯುವಂತರಾಗಬೇಕು. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ ಎಂದು ಅರಮೇರಿ ಕಳಂಚೇರಿ ಮಠದ ಪಿಠಾಧೀಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಡೊನೇಟರ್ಸ್ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಸುಣ್ಣದ ಬೀದಿಯ ಈದ್ಗಾ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿತ್ತಿದ ಬೀಜವನ್ನು ನೋಡಬೇಡ, ಬದಲಿಗೆ ಫಲವನ್ನು ಆರಿಸಿಕೊ ಎಂಬುದು ಹಿರಿಯರ ಹಿತವಚನವಾಗಿದೆ. ಸಂಘ-ಸಂಸ್ಥೆಗಳಿಂದ ಪಡೆದ ದಾನವನ್ನು ಸಮಾಜಕ್ಕೆ ಹಿಂದಿರುಗಿಸುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಜಾಗೃತವಾಗಬೇಕು. ಶಿಕ್ಷಣ ಜ್ಞಾನ ಸಂಪಾದನೆಗಾಗಿಯೇ ಹೊರತು ಸಮಾಜಕ್ಕೆ ಕೆಡುಕು ಬಯಸಲು ಬಳಕೆಯಾಗಬಾರದು ಎಂದು ಸಲಹೆ ನೀಡಿದರು.
ಸಂತ ಅನ್ನಮ್ಮ ಪಿ.ಯು. ಕಾಲೇಜು ವಿರಾಜಪೇಟೆ ಪ್ರಾಂಶುಪಾಲ ರೆ.ಫಾ. ಮದುಲೈಮುತ್ತು ಮಾತನಾಡಿ, ಪಡೆದುಕೊಳ್ಳುವ ಕೈಗಳಿಗಿಂತ ದಾನ ನೀಡುವ ಕೈಗಳಿಗೆ ಧನ್ಯಾತಭಾವ ಕರುಣಿಸುತ್ತಾನೆ. ವಿದ್ಯಾವಂತರಾಗಿ, ಹೃದಯವಂತರಾಗಿ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಮುಂದಾಗಿ ಎಂದರು.
ಶಾದುಲಿ ಜುಮ ಮಸೀದಿಯ ಖತೀಬರಾದ ಜ. ಶುಹೈಬ್ ಫೈಜಿ, ಡೊನೇಟರ್ಸ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಮಹಮ್ಮದ್ ರಾಫಿ ಮಾತನಾಡಿದರು. ನಗರದ ವಿವಿಧ ಶಾಲೆಗಳಲ್ಲಿ ಓದುತ್ತಿರುವ ಸುಮಾರು 350 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಮಾಡಲಾಯಿತು. ಶೈಕ್ಷಣಿಕ ಕ್ಷೇತ್ರ, ಧರ್ಮ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಮಾಡಲಾಯಿತು.
ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಎಂ.ಕೆ. ಸಂಕೇತ್ ಪೂವಯ್ಯ, ಪುರಸಭೆಯ ಅದ್ಯಕ್ಷರಾದ ಮನೆಪಂಡ ದೇಚಮ್ಮ ಕಾಳಪ್ಪ, ಪುರಸಭೆಯ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಎಲ್.ಎಸ್.ಎ. ಆಕಾಡೆಮಿ ಅಧ್ಯಕ್ಷರಾದ ಪೂಜಾ ರವೀಂದ್ರ, ಅಕ್ರಮ-ಸಕ್ರಮ ಸಮಿತಿ ವಿರಾಜಪೇಟೆ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಉದ್ಯಮಿ, ಅಲ್ತಾಫ್, ನಾಗರಾಜ್ ಚುಪ್ಪ, ಆರ್.ಎಸ್.ಎಲ್. ರಶೀದ್ ಡೊನೇಟರ್ಸ್ ಚಾರಿಟಬಲ್ ಟ್ರಸ್ಟ್ (ಯೂತ್ ವಿಂಗ್) ಅಧ್ಯಕ್ಷ ಮೊಹಮ್ಮದ್ ಫಾಹಿಸ್ ಇದ್ದರು.