

ಎನ್.ಆರ್.ಪುರ: ಶಿಕ್ಷಣದಿಂದ ಸಿಗುವ ಜ್ಞಾನಾರ್ಜನೆಯು ಪ್ರತಿಯೊಬ್ಬ ಮಾನವನ ಆಸ್ತಿಯಾಗಲಿದೆ ಎಂದು ಸಂಕ್ಸೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಆರ್.ನಾಗರಾಜ್ ತಿಳಿಸಿದರು.
ಬಿ.ಎಚ್.ಕೈಮರದ ಸ್ತ್ರೀ ಶಕ್ತಿ ಭವನದಲ್ಲಿ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಎಚ್.ಕೈಮರ ವಲಯದ ಸಿದ್ದಿ ವಿನಾಯಕ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಶಿಕ್ಷಣದ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಕ್ಕಳಿಗೆ ಪ್ರಥಮವಾಗಿ ಶಿಕ್ಷಣ ಪ್ರಾರಂಭವಾಗುವುದು ಮನೆಯಲ್ಲಿ. ತಂದೆ, ತಾಯಿಗಳು ತಮಗೆ ಅರಿವಿಲ್ಲದಂತೆ ಬೋಧಿಸಿ, ಮಕ್ಕಳನ್ನು ತಿದ್ದುತ್ತಾರೆ. ತಾಯಿಯೇ ಮಕ್ಕಳಿಗೆ ಮೊದಲ ಗುರುವಾಗುತ್ತಾರೆ. ನಂತರ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಶಾಲಾ, ಕಾಲೇಜುಗಳಲ್ಲಿ ಪಡೆದ ಶಿಕ್ಷಣದಿಂದ ಮುಂದೆ ಸಮಾಜದಲ್ಲಿ ಜ್ಞಾನಿಯಾಗಿ, ಸುಸಂಸ್ಕೃತರಾಗಿ ಬಾಳಲು ಸಹಕಾರಿಯಾಗುತ್ತದೆ ಎಂದರು.
ನಿಜವಾದ ಶಿಕ್ಷಣ ಸುತ್ತ ಮುತ್ತಲಿನ ಪರಿಸರ, ಬಂಧುಗಳು, ಮಿತ್ರರು, ಸಮಾಜದಿಂದಲೇ ಪಡೆಯುತ್ತೇವೆ. ಪ್ರತಿಯೊಬ್ಬರೂ ಶಾಲಾ ಶಿಕ್ಷಣ ಪಡೆಯುವ ಜತೆಗೆ ಸಂಸ್ಕಾರವಂತರಾಗಿ ಬದುಕಿ ಸಮಾಜಕ್ಕೆ ಆದರ್ಶವಾಗಬೇಕು. ಈಗಿರುವ ಶಿಕ್ಷಣ ವ್ಯವಸ್ಥೆ ಪ್ರಕಾರ ಪ್ರಥಮವಾಗಿ ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಿಕ್ಷಣ, ಪದವಿಪೂರ್ವ, ಸ್ನಾತಕೋತ್ತರ, ಜಾಬ್ ಓರಿಯಂಟಲ್ ಕೋರ್ಸ್‌ಗಳು, ವೃತ್ತಿ ಕೋರ್ಸ್‌ಗಳು ಲಭ್ಯವಿದೆ ಎಂದರು.
ಸಿದ್ದಿ ವಿನಾಯಕ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಗುಲಾಬಿ, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಎಮಿಲಿಯ, ಸೇವಾ ನಿರತೆ ಅನ್ನಪೂರ್ಣ, ಸಿದ್ದಿವಿನಾಯಕ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ಇದ್ದರು.