ಜಗತ್ತಿನಲ್ಲಿ ಜ್ಞಾನವೇ ಶ್ರೇಷ್ಠ

2 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಪಠ್ಯದ ವಿಷಯಗಳಿಗೆ ಮಾತ್ರ ಸೀಮಿತರಾಗದೆ, ಜ್ಞಾನ ಅರಸುವ ವ್ಯಕ್ತಿಗಳಾದಾಗ ಮಾತ್ರ ಸಮಾಜದ ಸರ್ವತೋಮುಖ ವಿಕಾಸ ಸಾಧ್ಯ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಮಾಜಿ ನಿರ್ದೇಶಕ ಎಸ್. ಎಂ. ಶಿವಪ್ರಸಾದ ಹೇಳಿದರು.
ನಗರದ ಸೃಜನಾ ರಂಗ ಮಂದಿರದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ 2023-24ನೇ ಸಾಲಿನ ಶಿಷ್ಯವೇತನ ದಿನಾಚರಣೆ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿ ಮಗು ಎಲ್ಲ ಹಂತದಲ್ಲೂ ತನ್ನ ಸುತ್ತಲಿನ ಜನರಿಂದ ತಿಳಿವಳಿಕೆ ಮಾತು ಕೇಳಬೇಕಾಗುತ್ತದೆ. ಅಂತಹ ಮಾತುಗಳಲ್ಲಿ ನಮ್ಮ ಮನಸ್ಸು ಒಪ್ಪುವ ಸತ್ಯಗಳನ್ನು ಮಾತ್ರ ಅನ್ವಯಿಸಿಕೊಂಡು ಬೆಳೆದಾಗ ವ್ಯಕ್ತಿಯ ಬದುಕಿಗೆ ಒಂದು ವಿಶೇಷ ಅರ್ಥ ಬರುತ್ತದೆ ಎಂದರು.
ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಪಡೆದು ಸಂಸ್ಕಾರವಂತರಾಗಿ ಬೆಳೆದಾಗ ಮಾತ್ರ ಎಲ್ಲರಿಂದ ಗೌರವಿಸಲ್ಪಡುತ್ತಾರೆ. ವಿದ್ಯಾರ್ಥಿಗಳು ಪ್ರಕೃತಿಯ ಕೊಡುಗೆಗಳನ್ನು ಅರ್ಥಮಾಡಿಕೊಂಡು ಸುಸಂಸ್ಕೃತ ನಾಗರಿಕರಾಗಿ ಬೆಳೆದರೆ ಹೆತ್ತ ತಂದೆ-ತಾಯಿಗಳು, ಕಲಿಸಿದ ಗುರುಗಳಿಗೆ ಸಂತೋಷವಾಗುತ್ತದೆ ಎಂದರು.
ಪ್ರೊ. ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಬಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 2023ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾಲೇಜಿನ ವಾಣಿಶ್ರೀ ಮಬನೂರಗೆ 10 ಗ್ರಾಂ. ಸ್ವರ್ಣ ಪದಕ, ವಂದನಾ ಬಿರಾದಾರ ಮತ್ತು ಬಸವರಾಜ ಗುಡಸಲಮನಿಗೆ ತಲಾ 25,000 ರೂ. ನಗದು ಬಹುಮಾನದೊಂದಿಗೆ ಶ್ರೀಗುರು ತೋಂಟದಾರ್ಯ ಪುರಸ್ಕಾರ ಹಾಗೂ ಭರತ ಕೂಗಿ ಅವರಿಗೆ 20 ಗ್ರಾಂ. ವಿಶ್ವಕಮಲ ರಜತ ಪದಕ ನೀಡಿ ಗೌರವಿಸಲಾಯಿತು.
ಡಾ. ಆನಂದ ಪಾಂಡುರಂಗಿ, ಅರವಿಂದ ಕಪಲಿ, ಶಾಂತರಾಜ ವಿಭೂತಿ, ಮಧ್ವೇಶ ಗುಡಿ, ಸಿದ್ಧೇಶ್ವರ ಗುಡಗೇರಿ, ವಿದ್ಯಾರ್ಥಿಗಳು, ಇತರರು ಇದ್ದರು. ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ಭುವನೇಶ್ವರಿ ದಾನಪ್ಪಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net