

ಹುಬ್ಬಳ್ಳಿ: ಭಗವಂತನ ಮಹಿಮೆ ತಿಳಿದುಕೊಳ್ಳಲು ಸ್ಥೂಲ ಹಾಗೂ ಸೂಕ್ಷ್ಮವಾದ ಜ್ಞಾನಗಳು ಎರಡು ಪ್ರಕಾರ. ಭಗವಂತನ ಬಗ್ಗೆ ಶ್ರವಣ ಮನನಾದಿ ಕೀರ್ತನೆ ಮಾಡಿ, ಜಗತ್ತಿನ ಸೃಷ್ಟಿಕರ್ತ ಭಗವಂತ, ಅವನಿಂದಲೇ ಸ್ಥಿತಿ, ಲಯ, ಉತ್ಪತ್ತಿ ಮುಂತಾದವುಗಳನ್ನು ತಿಳಿದುಕೊಳ್ಳುವುದು ಸಾಮಾನ್ಯ ಜ್ಞಾನ. ಹದಿನಾಲ್ಕು ಲೋಕದಲ್ಲಿ ವ್ಯಾಪ್ತನಾದ, ಬ್ರಹ್ಮಾಂಡದಲ್ಲಿದ್ದ ಪರಮಾತ್ಮ ಪಿಂಡಾಂಡದಲ್ಲಿ, ಎಲ್ಲ ಜಡ ವಸ್ತುಗಳಲ್ಲಿ, ಎಲ್ಲ ಜೀವರಾಶಿಗಳ ಹೃದಯದಲ್ಲಿಯೂ ವ್ಯಾಪ್ತನಾಗಿದ್ದಾನೆ ಎಂದು ಅನುಭವಿಸಿ ತಿಳಿದುಕೊಳ್ಳುವುದು ಅದು ವಿಶೇಷ ಜ್ಞಾನ. ಅಪರೋಕ್ಷ ಜ್ಞಾನ, ಭಗವಂತನ ಸ್ವರೂಪವನ್ನು, ವಿಭೂತಿಯನ್ನು, ವೈಭವವನ್ನು ಆತನ ಮಹಿಮೆಯನ್ನು ಹೇಳುವ ಸ್ವಾಧ್ಯಾಧ್ಯಾಯವೇ 7ನೇ ಅಧ್ಯಾಯ ಜ್ಞಾನ- ವಿಜ್ಞಾನ ಯೋಗ ಎಂದು ಪಂ. ವಾದಿರಾಜಾಚಾರ ಮಠದ ಅಭಿಪ್ರಾಯವ್ಯಕ್ತಪಡಿಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಸಮೀಪದ ವನಸಿರಿ ನಗರದ ಡಾ. ಆನಂದ ಹಂದಿಗೋಳ ಅವರ ನಿವಾಸದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಗವದ್ಗೀತಾ ಅಭಿಯಾನದ ಸಪ್ತಮೋಧ್ಯಾಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಗವದ್ಗೀತೆ 18 ಅಧ್ಯಾಯವನ್ನು ಆರು ಅಧ್ಯಾಯಗಳ ಗುಂಪು ಮಾಡಿ, ಮೊದಲನೇ ಗುಂಪಿನಲ್ಲಿ ಭಗವಂತನ ಬಗ್ಗೆ ಉಪಾಸನೆ ಮಾಡಲು ಸಾಧನೆ, ಉಪಾಯಗಳಾದ ಕರ್ಮ, ಧರ್ಮ ಆಚರಣೆ, ಧ್ಯಾನ ಮುಂತಾದ ಯೋಗಗಳನ್ನು ತಿಳಿಸುತ್ತ, ಮುಂದಿನ ಆರನೇ ಅಧ್ಯಾಯದಿಂದ ಜ್ಞಾನ -ವಿಜ್ಞಾನ ಯೋಗದ ಬಗ್ಗೆ ವಿವರಿಸುತ್ತ, ನಾನು ಜಗತ್ತಿನ ಸೃಷ್ಟಿಕರ್ತ ಅವೆಲ್ಲವೂ ನನ್ನ ಆಶ್ರಯದಲ್ಲಿದೆ. ಎಲ್ಲವೂ ನನ್ನ ಅಧೀನ, ಎಲ್ಲ ವಸ್ತುಗಳ, ಜೀವರಾಶಿಗಳ ಸ್ವಭಾವದಲ್ಲಿಯೂ ಕೂಡ ನಾನಿದ್ದೇನೆ ಎಂದು ಪ್ರತಿಪಾದನೆ ಮಾಡುತ್ತಾ ದೇವರು ನಮಗೆಲ್ಲ ಉಪದೇಶ ಮಾಡಿದ್ದಾನೆ ಎಂದು ವಿವರಿಸಿದರು.
ನಾರಾಯಣಿ ಭಜನಾ ಮಂಡಳಿಯಿಂದ ಭಜನೆ, ಸದಸ್ಯರಿಂದ ಹರಿವಾಯು ಗುರುಗಳ ಪಾರಾಯಣ ಜರುಗಿತು. ಪ್ರಮುಖರಾದ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಸಂಜೀವ ಗೊಳಸಂಗಿ, ಪ್ರಮೋದ ಶಿರಗುಪ್ಪಿ, ಆನಂದ ದೇಶಪಾಂಡೆ, ರಮೇಶ ಅಣ್ಣಿಗೇರಿ , ಎಸ್.ಎಂ. ಜೋಶಿ, ಪ್ರೊ. ವಾಮನ ಭಾದ್ರಿ, ಪ್ರಾಣೇಶ ಮಳಗಿ, ವಿಠ್ಠಲ ಅಂಬೇಕರ, ಹನುಮಂತ ಪುರಾಣಿಕ, ಬದ್ರಿನಾಥ ಬೆಟಗೇರಿ, ಗೋಪಾಲಾಚಾರ್ಯ ಹರಿಹರ, ಪಾಂಡುರಂಗ ಕುಲಕರ್ಣಿ, ಬಹದ್ದೂರ ದೇಸಾಯಿ, ವೆಂಕಟೇಶ ಕುಲಕರ್ಣಿ, ಸಂಜೀವ ಜೋಶಿ ಇತರರು ಇದ್ದರು.