ಸಹಕಾರ ಸಂಘದ ಅಭಿವೃದ್ಧಿಗೆ ಜ್ಞಾನ ಮುಖ್ಯ

union bank
Published on

ಮಡಿಕೇರಿ: ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಆಡಳಿತ ಮಂಡಳಿ ಸದಸ್ಯರಿಗೆ ಕಾಯ್ದೆ, ಕಾನೂನು, ತೆರಿಗೆ, ಲೆಕ್ಕಪರಿಶೋಧನೆಗಳ ಜ್ಞಾನ ಅತಿ ಮುಖ್ಯ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು ಹಾಗೂ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಎನ್.ಎ.ರವಿ ಬಸಪ್ಪ ಸಲಹೆ ನೀಡಿದರು.

ಜಿಲ್ಲೆಯ ಪತ್ತಿನ ಸಹಕಾರ ಸಂಘ, ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಇತರೆ ಸಹಕಾರ ಸಂಘಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಬುಧವಾರ ನಗರದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಹಕಾರ ಭವನದ ಸಭಾಂಗಣದಲ್ಲಿ ನಡೆದ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಡಳಿತ ಮಂಡಳಿ ಸದಸ್ಯರಿಗೆ ಕಾಯ್ದೆ, ಕಾನೂನು, ತೆರಿಗೆ, ಲೆಕ್ಕಪರಿಶೋಧನೆ ಇತ್ಯಾದಿ ಮಾಹಿತಿ ಇಲ್ಲದೆ ಆಡಳಿತ ನಡೆಸುವುದರಿಂದ ಸಂಘವು ನಷ್ಟವನ್ನು ಅನುಭವಿಸುತ್ತದೆ. ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಯು ಅಲ್ಲದೆ ಆಯ್ಕೆಯಾಗಿ ಬಂದ ಪದಾಧಿಕಾರಿಗಳಿಗೆ ಮನವರಿಕೆ ಮಾಡಬೇಕಾದರೆ ಜ್ಞಾನ ಪಡೆಯುವುದು ಅತಿ ಮುಖ್ಯ. ಎಷ್ಟೇ ತಿಳುವಳಿಕೆ ಹೊಂದಿದರೂ ಬದಲಾವಣೆ ಜಗದ ನಿಯಮ ಎಂಬಂತೆ ಹೊಸ ವಿಷಯವನ್ನು ಅಳವಡಿಸಿಕೊಂಡಲ್ಲಿ ಮಾತ್ರ ಸಂಘದ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.

ಸಹಕಾರ ಸಂಘಗಳಿಗೆ ಅನ್ವಯವಾಗುವ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ಲೆಕ್ಕಿಗರಾದ ರುದ್ರೇಶ್ ಪಟೇಲ್ ಹಾಗೂ ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಭದ್ರತೆ ಮತ್ತು ವ್ಯವಹಾರಿಕ ಸಂವಹನ ಕುರಿತು ಬ್ಯಾಂಕಿಂಗ್ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕ ಆರ್.ಕೆ.ಬಾಲಚಂದ್ರ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ನ ಮಾಜಿ ನಿರ್ದೇಶಕರು ಹಾಗೂ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ನ ನಿರ್ದೇಶಕ ಕನ್ನಂಡ ಸಂಪತ್, ಯೂನಿಯನ್‌ನ ವ್ಯವಸ್ಥಾಪಕಿ ಆರ್.ಮಂಜುಳ, ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net