

ಹೊಳೆಆಲೂರ: ಮನೆ ಬೆಳಗಲು ಬೆಳಕು ಎಷ್ಟು ಮುಖ್ಯವೋ, ಮನದ ಕತ್ತಲು ಕಳೆಯಲು ಜ್ಞಾನವೂ ಅಷ್ಟೇ ಅವಶ್ಯ. ನಿತ್ಯ ಜೀವನದಲ್ಲಿ ನಾವು ಇಡುತ್ತಿರುವ ಹೆಜ್ಜೆಗಳು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಜ್ಞಾನ ತಿಳಿಸಿ ಕೊಡುತ್ತದೆ ಎಂದು ಕೊಪ್ಪಳ ಗವಿ ಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.
ಸಮೀಪದ ನೈನಾಪೂರ ಗ್ರಾಮದಲ್ಲಿ ತಾಯಮ್ಮದೇವಿ ಗಜಾನನ ಯುವಕ ಸೈನ್ಯ, ಮಾರುತೇಶ್ವರ ಭಜನಾ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ತುಲಾಭಾರ ಹಾಗೂ ಮೂರು ದಿನಗಳ ಜ್ಞಾನ ಸಪ್ತಾಹ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಲ್ಲವರಿಂದ, ಜ್ಞಾನದ ಖಣಿಗಳಿಂದ ನಿತ್ಯ ಜೀವನಕ್ಕೆ ಬೇಕಾದ ಸತ್ಯ ದರ್ಶನ ಸಿಗುತ್ತದೆ. ಅದನ್ನು ಪಡೆದುಕೊಳ್ಳಬೇಕಾದರೆ ಮೈ ಮತ್ತು ಮನಸು ಶುದ್ಧವಾಗಿರಬೇಕು. ಸಮಾಜ ಶುದ್ಧೀಕರಣವಾಗಬೇಕಾದರೆ, ಗ್ರಾಮಗಳು ವೈಭವ ಕಾಣಬೇಕಾದರೆ ಗ್ರಾಮದ ಯುವಕರು ಜಾತಿ, ಮತ, ಪಕ್ಷ ಬದಿಗಿಟ್ಟು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ತಂದೆ-ತಾಯಿಗಳು ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ, ಸಂಪತ್ತು ಗಳಿಸುವ ಬದಲು ಅವರಿಗೆ ಸಂಸ್ಕಾರ, ಆದರ್ಶ ಕಲಿಸಿಕೊಡಬೇಕು ಎಂದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ತುಲಾಭಾರ ಸ್ವೀಕರಿಸಿ ಮಾತನಾಡಿ, ‘ಜಗತ್ತಿಗೆ ಅನ್ನ ನೀಡುವ ರೈತ ಶ್ರೀಮಂತನಾದರೆ ಸದಾಕಾಲವೂ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ. ಗ್ರಾಮೀಣ ಜನರಿಂದಲೇ ನಮ್ಮ ಸಂಸ್ಕೃ›ತಿ, ಪರಂಪರೆಯ ರಕ್ಷಣೆ ಕೆಲಸ ನಡೆಯುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸದಾಶಿವ ಮಹಾಂತ ಶಿವಾಚಾರ್ಯರು ಮಾತನಾಡಿ, ಜ್ಞಾನಕ್ಕೆ ಸಂಸ್ಕಾರ ಬೆರೆತರೆ ಸಮಾಜ ಸರಿ ದಿಕ್ಕಿನಲ್ಲಿ ಸಾಗುತ್ತದೆ ಎಂದರು.
ಕನ್ನೂರ ಹಿರೇಮಠದ ವಿಶ್ವರಾಜೇಂದ್ರ ಸ್ವಾಮಿಗಳು ತುಲಾಭಾರ ಸ್ವೀಕರಿಸಿ ಮಾತನಾಡಿ, ಲೌಕಿಕ ಜೀವನಕ್ಕೆ ಮುಕ್ತಿ ದೊರಕಬೇಕಾದರೆ ಸಾಧು ಸತ್ಪುರುಷರ ಸಂಗ ಮಾಡಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಮುನಿವಯ್ಯ ವಸ್ತ್ರದ, ಪರುತಗೌಡ ಭೀಮನಗೌಡ ಪಾಟೀಲ, ಶಂಕರಗೌಡ ಮುದಕನಗೌಡ್ರ, ಪರುತಗೌಡ ರಾಯನಗೌಡ ಪಾಟೀಲ, ಅಕ್ಕನ ಬಳಗದ ಸದಸ್ಯರು, ಬೀರಲಿಂಗೇಶ್ವರ ಡೊಳ್ಳಿನ ಸಂಘದ ಸದಸ್ಯರು, ದುಗಾದೇವಿ ಭಜನಾ ಸಂಘದ ಸದಸ್ಯರು, ಅಂಜುಮನ್ ಕಮಿಟಿ ಸದಸ್ಯರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.