

ಹುಣಸೂರು: ಜ್ಞಾನ ಮತ್ತು ಸನ್ನಡತೆಗಳು ಯಾರೂ ಅಪಹರಿಸಲಾಗದ ಅಮೂಲ್ಯ ಸಂಪತ್ತಾಗಿವೆ. ಅವು ಜಗತ್ತಿನ ಎಲ್ಲ ದೇಶ, ಎಲ್ಲ ಕಾಲಗಳಲ್ಲಿಯೂ ಉನ್ನತ ಸ್ಥಾನದಲ್ಲಿರುತ್ತವೆ ಎಂದು ಹುಣಸೂರು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್, ಸೇವಾದಳ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ಜನಾಂಗದ ಇತಿಹಾಸದುದ್ದಕ್ಕೂ ಜ್ಞಾನದಾಹಿಗಳಾದ ಸಾಧಕರು ಅದರ ಹುಡುಕಾಟಕ್ಕಾಗಿ ಅಲೆದಾಡಿದ್ದಾರೆ. ಗ್ರೀಕ್ ತತ್ವಜ್ಞಾನಿಗಳಾದ ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲ್ ಅವರಿಂದಿಡಿದು ಬುದ್ಧ, 12ನೇ ಶತಮಾನದ ಮಹಾ ದಾರ್ಶನಿಕ ಮತ್ತು ವಚನಕಾರ ಅಲ್ಲಮ, ಅಕ್ಕಮಹಾದೇವಿ, ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಮುಂತಾದವರೆಲ್ಲ ಜ್ಞಾನ ಸಂಪಾದನೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.
ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮತ್ತು ಸನ್ನಡತೆ ಅಥವಾ ಚಾರಿತ್ರ್ಯವೆಂಬ ಅನರ್ಘ್ಯ ರತ್ನಗಳನ್ನು ಸಂಪಾದಿಸಲು ಪ್ರಯತ್ನ ಪಡಬೇಕು.ಕೇವಲ ಅಂಕ ಗಳಿಕೆಯೇ ಜ್ಞಾನವಾಗಲಾರದು. ಉತ್ತಮ ಅಂಕಗಳೊಂದಿಗೆ ಸಚ್ಚಾರಿತ್ರ್ಯವಂತ ಯುವ ಜನತೆ ಯಾವುದೇ ವ್ಯವಸ್ಥೆಯ ಆಸ್ತಿಯಾಗಬಲ್ಲರು. ಆ ಹಾದಿಯಲ್ಲಿ ಮುನ್ನಡೆಯುವುದೇ ವಿದ್ಯಾರ್ಥಿಗಳ ಧ್ಯೇಯವಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಸಿಡಿಸಿ ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಕಾಲೇಜಿನ ಒಳಗೆ ಮತ್ತು ಹೊರಗೂ ಉತ್ತಮ ನಡವಳಿಕೆ ಪ್ರದರ್ಶಿಸಬೇಕು ಎಂದರು. ಕನ್ನಡ ಉಪನ್ಯಾಸಕ ಡಾ.ಚಂದ್ರು ಮಾತನಾಡಿದರು. ಪ್ರಾಂಶುಪಾಲ ಜನಾರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಲೋಕೇಶ್, ಸಿಡಿಸಿ ದಸ್ಯರಾದ ಶ್ರೀಕಂಠ, ವಿಶ್ವಕರ್ಮ, ಸ್ವಾಮಿಗೌಡ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಆರ್.ಮಾದು , ಉಪನ್ಯಾಸಕರಾದ ಎಂ.ಜಯರಾಂ, ಡಿ.ಮಂಜುನಾಥ್, ಮಂಜು ಎಸ್.ಟಿ.ಸಂಗೀತಾ, ದರ್ಶಿನಿ, ಹರಿಣಿ, ರವಿ, ವಿದ್ಯಾಶ್ರೀ, ಕಾಲೇಜು ಸಿಬ್ಬಂದಿ ರಾಜಮ್ಮ ಇತರರಿದ್ದರು.
ಇದೇ ಸಂದರ್ಭದಲ್ಲಿ ಹಿಂದಿನ ವರ್ಷ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.