

ಮೈಸೂರು: ನಾವೀಗ ಜ್ಞಾನಯುಗದಲ್ಲಿದ್ದು, ಜ್ಞಾನ ಇಂದು ಒಂದು ರೀತಿಯ ವ್ಯಾವಹಾರಿಕ ಸರಕಾಗಿ ಮಾರ್ಪಟ್ಟಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿವಂತಿಕೆ: ಒಂದು ಪಕ್ಷಿನೋಟ ವಿಷಯ ಕುರಿತು ಅವರು ಮಾತನಾಡಿದರು.
ಈ ಜಗತ್ತು ವೆಬ್, ಕ್ಲೌಡ್, ಐಒಟಿ ಮುಂತಾದ ಯಾಂತ್ರಿಕ ಕಲಿಕೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಜ್ಞಾನದ ಯುಗದಲ್ಲಿ ಜ್ಞಾನವೇ ಒಂದು ರೀತಿಯ ವ್ಯಾವಹಾರಿಕ ಸರಕ್ಕಾಗಿ ಮಾರ್ಪಟ್ಟಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ಪ್ರಸ್ತುತ ಮಾಹಿತಿ-ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ(ಎಐ)ಯು ಪ್ರಮುಖ ವೇದಿಕೆಯಾಗಿದ್ದೂ, ಇದನ್ನು ಬಳಕೆ ಮಾಡಿಕೊಳ್ಳುವವರು ತಮಗೆ ಬೇಕಾದ ಜ್ಞಾನದ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂದರು.
ತಂತ್ರಜ್ಞಾನದ ವಿಷಯದಲ್ಲಿ ಶತಮಾನಗಳ ಹಿಂದಿನಿಂದಲೂ ಹಲವಾರು ರೀತಿಯ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಲೇ ಬರುತ್ತಿವೆ. 19ನೇ ಶತಮಾನದಲ್ಲಿ ಎಂಜಿನ್ ಕೇಂದ್ರಿತವಾದ ವಿಷಯಗಳು ಮುನ್ನಲೆಯಲ್ಲಿ ಇದ್ದವು. 20ನೇ ಶತಮಾನದಲ್ಲಿ ಕಂಪ್ಯೂಟರ್ ಕೇಂದ್ರಿತ ವಿಷಯಗಳು ಮಹತ್ವನ್ನು ಪಡೆದುಕೊಂಡಿದ್ದೂ, ಮನುಷ್ಯ ಪರದೆಯ ಹಿಂದೆ ನಿಂತು ಇದನ್ನು ನೋಡುವ ಸ್ಥಿತಿ ಬಂದಿದೆ. ಈಗ ಕೃತಕ ಬುದ್ಧಿಮತ್ತೆಯಿಂದ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಚಾಟ್ ಜಿಪಿಟಿಯಂತೆ ಬೇರೆ-ಬೇರೆ ಆ್ಯಪ್‌ಗಳು ಬಂದಿದ್ದು, ಗೂಗಲ್ ಕಂಪನಿಯು ಸಿದ್ಧಪಡಿಸಿರುವ ‘ಜೆಮಿನಿ’ಯು ಬರವಣಿಗೆ, ಕೋಡಿಂಗ್, ಚಿತ್ರಗಳು, ಧ್ವನಿಯನ್ನು ಗ್ರಹಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಡಾಲ್-ಇ ಎಂಬ ಆ್ಯಪ್ ನಾವು ಸಲಹೆ-ಸೂಚನೆ ನೀಡಿದರೆ ಸಾಕು ಚಿತ್ರ ಕಲಾಕೃತಿಯನ್ನು ರಚನೆ ಮಾಡಿಕೊಡುತ್ತದೆ. ಮೊದಲೆಲ್ಲ ಅಷ್ಟ ಲಕ್ಷ್ಮೀಯರು ಎನ್ನುತ್ತಿದ್ದರು. ಆದರೆ ಈಗ ಇನ್ನು ಇಬ್ಬರು ಲಕ್ಷ್ಮೀಯರು ಅಂದರೆ ವೆಬ್ ಮಾಹಿತಿಯ ಜಾಲ ಲಕ್ಷ್ಮೀ, ಕೃತಕ ಬುದ್ಧಿಮತ್ತೆಯ ಬುದ್ಧಿಲಕ್ಷ್ಮೀ ಸೇರಿ ದಶಲಕ್ಷ್ಮೀಯರು ಎನ್ನಬೇಕಾಗುತ್ತದೆ ಎಂದು ಹಾಸ್ಯ ಮಿಶ್ರಿತವಾಗಿ ತಿಳಿಸಿದರು.
ಹಿಂದಿನ ಕಾಲದಲ್ಲಿ ಸರಸ್ವತಿ ಪುತ್ರರು ಕೇವಲ ಸರಸ್ವತಿ ಪುತ್ರರಾಗಿಯೇ ಇರುತ್ತಿದ್ದರು. ಆದರೆ ಈಗ ತಂತ್ರಜ್ಞಾನದ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಸರಸ್ವತಿ ಪುತ್ರರು ಲಕ್ಷ್ಮೀ ಪುತ್ರರಾಗುತ್ತಿದ್ದಾರೆ. ಜಗತ್ತಿನ ಉತ್ತಮ ಪುಸ್ತಕಗಳನ್ನು ಒಂದೇ ‘ವೇದಿಕೆ’ಯಲ್ಲಿ ದೊರೆಯುವಂತಹ ಸಾಫ್ಟ್‌ವೇರ್ ತಯಾರು ಮಾಡಿದ ಇಂಜಿನಿಯರ್ ಈಗ 180 ಮಿಲಿಯನ್ ಒಡೆಯನಾಗಿದ್ದಾನೆ ಎಂದರು.
ಅದೇ ರೀತಿ ಕೆಲವು ಸಮುದಾಯದವರು ಸಣ್ಣ-ಸಣ್ಣ ಗಾಜಿನ ಚೂರುಗಳನ್ನು ತಮ್ಮ ಬಟ್ಟೆಗಳಿಗೆ ಹೊಲೆದುಕೊಂಡು ಧರಿಸಿಕೊಳ್ಳುತ್ತಾರೆ. ಇದನ್ನೇ ನೋಡಿದ ಒಬ್ಬಾತ ಗಾಜಿನ ಚೂರು ಲೇಪಿತ ಟೈಗಳನ್ನು ಇ-ಮಾರುಕಟ್ಟೆಗೆ ಪರಿಚಯಗೊಳಿಸಿದ, ನೋಡನೋಡುತ್ತಿದ್ದಂತೆ ಆತನು ಲಾಭ ಗಳಿಸಿದ, ಅದನ್ನು ತಯಾರು ಮಾಡಿಕೊಟ್ಟ ಮಹಿಳೆಯು ಹಣ ಗಳಿಸಿಕೊಂಡರು. ಹಾಗಾಗಿ ಯಾವುದನ್ನು ನಾವು ಹೇಗೆ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ಮೂಲಕ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ವಿ.ಆರ್.ಶೈಲಜಾ ಇದ್ದರು.