

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರ ಜಾಗತಿಕ ನಕ್ಷೆಯಲ್ಲಿ ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಮಹಾನಗರದ 100 ಕಿ.ಮೀ. ಪರಿಧಿಯೊಳಗೆ ಎರಡು ಸಾವಿರ ಎಕರೆ ವಿಸ್ತಾರದ ವಿಶ್ವ ದರ್ಜೆಯ, ಅತ್ಯಾಧುನಿಕ ಪಾರ್ಕ್ ನಿರ್ಮಿಸಲಾಗುವುದು ಕೈಗಾರಿಕೆ ಮತ್ತು ಮೂಲಸವಲತ್ತು ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಜ್ಞಾನ, ಆರೋಗ್ಯ, ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ ವಲಯಗಳು ಈ ಪಾರ್ಕ್‌ನಲ್ಲಿ ತಲೆ ಎತ್ತಲಿವೆ. ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಪಾರ್ಕ್ ನಿರ್ಮಾಣ ಪ್ರಾರಂಭಿಸಲೆಂದು ಜಮೀನು ಗುರುತಿಸುವಿಕೆ ಪ್ರಗತಿಯಲ್ಲಿದೆ.
ಈ ಪಾರ್ಕ್‌ನಲ್ಲಿ ವಿಶ್ವದರ್ಜೆಯ ವಿವಿಗಳು, ಹೆಲ್ತ್ ಟೂರಿಸಂಗೆ ಪೂರಕ ಆಸ್ಪತ್ರೆಗಳು, ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಜಾಗತಿಕಮಟ್ಟಕ್ಕೆ ಕೊಂಡೊಯ್ಯುವುದು ಈ ಪಾರ್ಕ್‌ನ ಗುರಿಯಾಗಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 407 ಎಕರೆ ವಿಸ್ತೀರ್ಣದಲ್ಲಿ ದೆಹಲಿ ಏರೋ ಸಿಟಿ ಮಾದರಿಯ್ಲಲಿ ಬಿಸಿನೆಸ್ ಪಾರ್ಕ್, ಉತ್ತರಕನ್ನಡ ಜಿಲ್ಲೆಯ ತದಡಿಯಲ್ಲಿ 1,819 ಎಕರೆ ವಿಸ್ತಾರದಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಇಕೋ ಟೂರಿಸಂ ಪಾರ್ಕ್ ಸ್ಥಾಪಿಸಲು ಅಗತ್ಯಕ್ರಮವಹಿಸಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.