ನಿರಂತರ ಅಧ್ಯಯನದಿಂದ ಜ್ಞಾನ ವೃದ್ಧಿ

mm 14-5
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪ್ರೊ. ಶಾಂತಾದೇವಿ ಟಿ. ಮಾತನಾಡಿದರು. ಡಾ. ಆರ್.ಎಂ. ಮಿರ್ದೆ, ಅನಿಲ ನಾಯಕ, ಪಿ.ಎಸ್. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗಗಳು ಎಂದು ಮಹಿಳಾ ವಿವಿ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದತ್ತಿ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಧಕರಿಗೆ ನಾವು ನೀಡುವ ಪ್ರೋತ್ಸಾಹವೇ ಉನ್ನತ ಸಾಧನೆಗೈಯಲು ಪ್ರೇರೇಪಣೆ ಹಾಗೂ ಸ್ಫೂರ್ತಿಯಾಗಲಿದೆ. ಒಂದು ಪುಸ್ತಕ, ಪೆನ್ನು, ಒಂದು ಮಗು, ಒಬ್ಬ ಶಿಕ್ಷಕ ಇಡೀ ಜಗತ್ತನ್ನೇ ಬದಲಾಯಿಸುವ ಶಕ್ತಿ ಹೊಂದಿದ್ದಾನೆ. ಜೀವನದ ಯಶಸ್ಸಿಗೆ ವಿದ್ಯೆ ಪಡೆಯುವುದು ಎಷ್ಟು ಅವಶ್ಯವೋ, ನಿತ್ಯ ಜೀವನದ ಸರ್ವ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳುವುದೂ ಅಷ್ಟೇ ಪ್ರಮುಖವಾಗಿದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜ್ಞಾನ ಎನ್ನುವುದು ಸಮುದ್ರದಂತೆ. ಪದವಿ ಪಡೆದರೆ ಸಮುದ್ರದ ಒಂದು ಹನಿ ನೀರು ಕುಡಿದಂತೆ. ನಿರಂತರ ಜ್ಞಾನ ನಮ್ಮನ್ನು ಅತೀ ಹೆಚ್ಚು ಪಕ್ವಗೊಳಿಸುತ್ತದೆ. ಸಾಮಾಜಿಕ ಜಾಲತಾಣಗಳು ಅತ್ಯುಪಯುಕ್ತವಾಗಿದ್ದು, ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಲಿಯುವುದನ್ನು ನಾವು ಯಾವುತ್ತಿಗೂ ನಿಲ್ಲಬಾರದು. ಪ್ರಕೃತಿ ನಮಗೆ ಪ್ರತಿಕ್ಷಣ ಕಲಿಯುವುದಕ್ಕೆ ಅವಕಾಶ ನೀಡುತ್ತದೆ. ಅವುಗಳನ್ನು ಸದ್ಭಳಕೆ ಮಾಡಿಕೊಂಡು ಆತ್ಮವಿಶ್ವಾಸ, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಬದುಕು ಸುಂದರವಾಗಲಿದೆ ಎಂದರು.

ಪ್ರಾಚಾರ್ಯೆ ಡಾ. ರಾಬಿಯಾ ಮಿರ್ದೆ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಲು ಕಠಿಣ ಪರಿಶ್ರಮ ಹಾಕಬೇಕು. ಅದಕ್ಕೆ ಶಿಸ್ತು, ಸಂಯಮ ಬಹಳ ಮುಖ್ಯ. ಎಲ್ಲಕ್ಕಿಂತಲೂ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಸಾಧಿಸುವ ಛಲ ಇದ್ದಲ್ಲಿ ಯಶಸ್ಸು ನಮ್ಮ ಸಮೀಪ ಬರಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಾವಿರ ಸಮಸ್ಯೆಗಳಿವೆ. ಆದರೂ ಅವುಗಳನ್ನು ಮೆಟ್ಟಿ ನಿಂತು ಸಾಧಿಸಿ ತೊರಿಸಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ. ನಮ್ಮ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಲಿದೆ. ಸೌಲಭ್ಯಗಳನ್ನು ಬಳಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು ಎಂದರು.

ಶೈಕ್ಷಣಿಕ ಹಾಗೂ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ಡಾ. ಶ್ರೀನಿವಾಸ ದೊಡ್ಡಮನಿ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಮತ್ತು ಡಾ. ಸ್ವಾತಿ ಪಾಟೀಲ ಶೈಕ್ಷಣಿಕ ಪ್ರಶಸ್ತಿಗಳ ವರದಿ ವಾಚಿಸಿದರು.

ಉಪಪ್ರಾಚಾರ್ಯ ಅನಿಲ ನಾಯಕ, ಐಕ್ಯೂಎಸಿ ಕೋ-ಆರ್ಡಿನಿನೇಟರ್ ಪಿ.ಎಸ್. ಪಾಟೀಲ, ದೈಹಿಕ ನಿರ್ದೇಶಕ ಎಸ್.ಕೆ. ಪಾಟೀಲ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀನಿವಾಸ ದೊಡಮನಿ, ನ್ಯಾಕ್ ಸಂಯೋಜಕ ಮಹೇಶ ಕುಮಾರ ಕೆ., ಪವನ ಮಹೀಂದ್ರಕರ, ಎಸ್.ಡಿ. ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಸೈಯ್ಯದ್ ಅರ್ಬಾಜ್, ಪಾಯಲ್ ಚವಾಣ್ ಮತ್ತಿತರರಿದ್ದರು.

ಪ್ರೊ. ಶ್ವೇತಾ ಸವನೂರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net