

ಸರಗೂರು: ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಒತ್ತು ನೀಡಬೇಕಿದ್ದು, ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಯಾಗಲಿದೆ ಎಂದು ತಹಸೀಲ್ದಾರ್ ಮೋಹನಕುಮಾರಿ ಹೇಳಿದರು.
ಪಟ್ಟಣದ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಹೆಚ್ಚಿನ ಸಮಯವನ್ನು ಶಿಕ್ಷಕರೊಂದಿಗೆ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ಹಾಗಾಗಿ ಪ್ರತಿ ವಿದ್ಯಾರ್ಥಿ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲೂ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೀಪಕ್, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳು ಹೊಣೆಗಾರಿಕೆ ಬಹುಮುಖ್ಯವಾದರೂ ಪಾಲಕರ ಜವಾಬ್ದಾರಿಯೂ ಅಷ್ಟೇ ಇದೆ ಎಂದು ಅಭಿಪ್ರಾಯಪಟ್ಟರು.
ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಗತಿ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಧರ್ಮದರ್ಶಿ ರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ಚೆಲುವ ಕೃಷ್ಣ, ಧರ್ಮದರ್ಶಿ ಎಚ್.ಎಲ್.ಶಶಿಧರ್, ಶಾಲಾ ಸಲಹೆಗಾರ ಭೀಮನಹಳ್ಳಿ ಮಹಾದೇವು, ಎಂ. ಕೆಂಡಗಣ್ಣಸ್ವಾಮಿ, ನಾಗಣ್ಣ, ಡಾ.ಸುರೇಶ್‌ಕುಮಾರ್, ಡಿ.ಪಿ.ನಟರಾಜು, ಸಂಸ್ಥೆ ಕಾರ್ಯದರ್ಶಿ ಪಿ.ಆರ್.ಪಳನಿ ಸ್ವಾಮಿ ಇತರರಿದ್ದರು.