

ಹೊಳೆನರಸೀಪುರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ಪಠ್ಯಕ್ಕಿಂತ ಹೆಚ್ಚು ಜ್ಞಾನ ದೊರೆಯಲಿದೆ ಎಂದು ಸಂಸದ ಶ್ರೇಯಶ್ ಪಟೇಲ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ನಿಯರಿಗಾಗಿ ತಾಲೂಕಿನ ಎಲೆಚಾಗಹಳ್ಳಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಭಾನುವಾರ ರಕ್ತದಾನ ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎನ್‌ಎಸ್‌ಎಸ್ ಕ್ಯಾಂಪ್‌ಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರು, ರೈತರ ಬದುಕು, ಬವಣೆಗಳ ಪರಿಚಯವಾಗುತ್ತದೆ. ವಿದ್ಯಾರ್ಥಿಗಳೊಂದಿಗೆ ಹಳ್ಳಿಯ ಜನರು ನಡೆದುಕೊಳ್ಳುವ ರೀತಿ ಬಾಂಧವ್ಯದ ಅನುಭವ ತರುತ್ತದೆ. ಪದವಿ ವಿದ್ಯಾರ್ಥಿನಿಯರು, ಚೆನ್ನಾಗಿ ವ್ಯಾಸಂಗ ಮಾಡಿ ಅತ್ಯುತ್ತಮ ಅಂಕಗಳಿಸಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆದ್ದರೆ ಉತ್ತಮ ಬದುಕು ರೂಪಸಿಕೊಳ್ಳಬಹುದು. ಇಂತಹ ಶಿಬಿರಗಳು ನಿಮಗೆ ಅನೇಕ ಮಾರ್ಗದರ್ಶನ ನೀಡುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ನಡೆಸುವ ಇಂತಹ ಶಿಬಿರಗಳಿಗೆ ಗ್ರಾಮೀಣ ಪ್ರದೇಶದ ಜನರು ಸಹಕಾರ ನೀಡಿ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದರು. ಪ್ರಾಂಶುಪಾಲೆ ಆಶಾ ಜ್ಯೋತಿ ಶಿಬಿರಕ್ಕೆ ಎಲೆಚಾಗಹಳ್ಳಿ ಜನರು ಉತ್ತಮವಾಗಿ ಸಹಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಂಯೋಜಕಿ ಫಕೀರಮ್ಮ ಮುರಗೋಡು ಮಾತನಾಡಿ, ರಕ್ತಕ್ಕೆ ಬದಲಾಗಿ ಮತ್ತೊಬ್ಬ ವ್ಯಕ್ತಿಯ ರಕ್ತವನ್ನೇ ನೀಡಬೇಕಾಗಿರುವ ಕಾರಣ ರಕ್ತದಾನ ಮಾಡಿ ಜನರ ಪ್ರಾಣ ಉಳಿಸಿ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಧ್ಯಾಪಕ ರಾಧಾ ಕೃಷ್ಣಮೂರ್ತಿ, ಶ್ವೇತಾನಾಯಕ್, ಜಯಚಂದ್ರ, ಜಗದೀಶ್, ರಾಘವೇಂದ್ರ, ಕರಿಯಪ್ಪ, ಜಿತೇಂದ್ರ, ನಾಗೇಂದ್ರ, ಗ್ರಾಮದ ಮುಖಂಡರಾದ ಶಿವಕುಮಾರ್, ಹೇಮಚಂದ್ರ, ಸಂತೋಷ್, ನರಸಿಂಹೇಗೌಡ, ಸತೀಶ್ ಇತರರು ಭಾಗವಹಿಸಿದ್ದರು.