ಎಲ್ಲ ಸಮುದಾಯ ಭವನಗಳಲ್ಲಿ ಜ್ಞಾನ ಕೇಂದ್ರ ಆರಂಭ : ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ

8
Published on

ಮೈಸೂರು: ಅಂಬೇಡ್ಕರ್ ಸಮುದಾಯ ಭವನಗಳನ್ನು ಜ್ಞಾನ ಕೇಂದ್ರವನ್ನಾಗಿಸುವ ಯೋಜನೆ ರೂಪಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ, ತಥಾಗತ ಬುದ್ಧ ವಿಹಾರ-ನಂಜನಗೂಡು, ವಿಶ್ವಮೈತ್ರಿ ಬುದ್ಧ ವಿಹಾರ-ಮೈಸೂರು, ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘಗಳ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾನವ ಮೈತ್ರಿ ಸಂಪದ ಸಮ್ಮೇಳನದಲ್ಲಿ ಎರಡನೇ ದಿನ ನಡೆದ ‘ಅಂಬೇಡ್ಕರ್ ಭವನಗಳನ್ನು ಜ್ಞಾನಕೇಂದ್ರಗಳನ್ನಾಗಿಸಲು ಇರುವ ಬಿಕ್ಕಟ್ಟು ಮತ್ತು ಪರಿಹಾರಗಳು’ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಸಮುದಾಯ ಭವನಗಳಲ್ಲಿ ಜ್ಞಾನ ಕೇಂದ್ರ ಆರಂಭಿಸಬೇಕು ಎನ್ನವುದು ನನ್ನ ಬಯಕೆ ಆಗಿದೆ. ಡಿಜಿಟಲ್ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನಕ್ಕೆ ಪುಸ್ತಕಗಳು ಸಿಗಬೇಕು. ಜತೆಗೆ ಪರೀಕ್ಷೆಗೆ ತರಬೇತಿ ಕೊಡಿಸುವ ಕಾರ್ಯವಾಗಬೇಕು. ಈ ಸವಲತ್ತುಗಳನ್ನು ಒದಗಿಸಬೇಕೆಂದರೆ ಸರ್ಕಾರದಿಂದ ಯೋಜನೆ ರೂಪಿಸಬೇಕು ಎಂದರು.

ಸಮುದಾಯ ಭವನವನ್ನು ಕೇಂದ್ರವಾಗಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾವನೆ ಸಲ್ಲಿಸಲಿ. ಜಿಲ್ಲೆಯವರೇ ಅದ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿದ್ದಾರೆ. ಹಾಗಾಗಿ ಕೂಡಲೇ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ನಾನು ಕೂಡ ಸರ್ಕಾರದ ಗಮನಕ್ಕೆ ತರುವೆ. ಜತೆಗೆ ಗ್ರಂಥಾಲಯಕ್ಕಾಗಿ ಶಾಸಕರು, ವಿಧಾನ ಪರಿಷತ್ತ ಸದಸ್ಯರ ಅನುದಾನದಲ್ಲಿಯೂ ಹಣ ನೀಡಲಾಗುದಾಗಿ ಅವರು ಭರವಸೆ ನೀಡಿದರು.

ಮೀಸಲಾತಿ ಇರುವುದರಿಂದ ಶಾಸಕಾಂಗದಲ್ಲಿ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ಲಭಿಸಿದೆ. ಕಾರ್ಯಾಂಗ, ನ್ಯಾಯಾಂಗ, ಉದ್ಯಮ, ಮಾಧ್ಯಮ ಕ್ಷೇತ್ರಗಳಲ್ಲಿ ಶೋಷಿತ ಸಮುದಾಯಗಳ ಪ್ರಾತಿನಿಧ್ಯ ಸಿಗಬೇಕು. ಇದಕ್ಕಾಗಿ ಶೋಷಿತ ಸಮುದಾಯಗಳು ಶಿಕ್ಷಿತರಾಗಬೇಕು ಎಂದರು.

ಶೋಷಿತ ಸಮುದಾಯ ಹಿಂದೂ ಧರ್ಮದಲ್ಲಿ ಅನುಭವಿಸಿದ ಶೋಷಣೆಯಿಂದ ಬಿಡುಗಡೆಗೊಳಿಸಲು ರಾಜಕೀಯವಾಗಿ, ಸಾಮಾಜಿಕವಾಗಿ ಜೀವನದುದ್ದಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ನಡೆಸಿದರು. ಹಿಂದು ಧರ್ಮದಲ್ಲಿ ಸುಧಾರಣೆ ಪ್ರಯತ್ನ ಪಟ್ಟರು. ಆದರೆ, ಆ ಧರ್ಮದಲ್ಲಿ ಸುಧಾರಣೆ ಕಾಣುವುದು ಅಸಾಧ್ಯವಾಗಿತ್ತು ಎಂದರು.

ವೇದ ಕಾಲದಲ್ಲಿನ ಅನಿಷ್ಠ ಪಿಡುಗುಗಳನ್ನು ಬುದ್ಧ ತಿರಸ್ಕರಿಸಿದರು. ವರ್ಣ ವ್ಯವಸ್ಥೆ ಮಾನವ ನಿರ್ಮಿತ ಎಂದು ಪ್ರತಿಪಾದಿಸಿದರು. ಆ ಕಾಲದಲ್ಲಿಯೇ ಮಹಿಳೆಯರಿಗೆ ಅಧ್ಯಾತ್ಮಿಕ ಜ್ಞಾನ ಸಿಗಬೇಕು ಎಂದು ಬಿಕ್ಕುಗಳನ್ನು ಮಾಡಿದರು. ಹಿಂದು ಧರ್ಮದಲ್ಲಿ ಆಧ್ಯಾತ್ಮಿಕ ಜ್ಞಾನ ಪಡೆಯಲು ಸಂಸ್ಕೃತ ಕಲಿಯಬೇಕಿತ್ತು. ಸಂಸ್ಕೃತವನ್ನು ತಳ ಸಮುದಾಯಗಳು ಕಲಿಯಲು ಆಗುತ್ತಿರಲಿಲ್ಲ. ಹೀಗಾಗಿ ಬುದ್ಧ ಜನ ಮಾತನಾಡುವ ಪಾಲಿ ಭಾಷೆಯಲ್ಲಿ ಧಮ್ಮ ಬೋಧನೆ ಮಾಡಿದರು ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ವಾತನಾಡಿ, ಪಾಲಕರು ಮಗುವಿನ ಕೈಹಿಡಿದು ನಡೆಸಿದಂತೆ ಸಂವಿಧಾನ ನಮ್ಮ ದೇಶವನ್ನು ಕೈ ಹಿಡಿದು ನಡೆಸುತ್ತಿದೆ. ಇಲ್ಲಿನ ಜನರಿಗೆ ನಡವಳಿಕೆ ಮತ್ತು ನಡತೆಯನ್ನು ಕಲಿಸಿದೆ. ಹೀಗಾಗಿ ನಮ್ಮ ದೇಶದ ಸಂವಿಧಾನವೂ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.

ಸವಾಜದ ಮೇಲ್ವರ್ಗದ ನೀಡಿದ ನೋವನ್ನು ಮೆಟ್ಟಿನಿಂತು ಪೂಜನೀಯ ಸ್ಥಾನದಲ್ಲಿ ನಿಂತ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರೇಮ ಪ್ರತಿಯೊಬ್ಬರಿಗೂ ಪ್ರೇರಣೆ ಆಗಬೇಕು. ಅವರ ಆದರ್ಶ, ತತ್ವ ಪಾಲನೆ ಮಾಡಬೇಕು ಎಂದು ಹೇಳಿದರು.

ಶಾಸಕ ಕೆ.ಹರೀಶ್‌ಗೌಡ, ಚಾಮರಾಜ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಶೇ.90ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಇವರಿಗೆ ಉದ್ಯೋಗ ಸಿಗಬೇಕು. ಮಹಿಳೆಯರ ಅಭಿವೃದ್ಧಿಯ ಮೇಲೆ ದೇಶದ ಅಭಿವೃದ್ಧಿ ನಿರ್ಧಾರವಾಗಲಿದೆ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಮಾತಿನಂತೆ ಇವರಿಗೆ ಉದ್ಯೋಗ ಕೊಡಿಸುವ ಉದ್ದೇಶ ಖಾಸಗಿ ವಲಯ ಮತ್ತು ಕಾರ್ಖಾನೆಗಳಲ್ಲಿ ಮೀಸಲಾತಿ ತರಬೇಕು ಎಂದು ಒತ್ತಾಯಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನನ್ನ ಕ್ಷೇತ್ರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಗಳನ್ನು ಜ್ಞಾನ ಕೇಂದ್ರವಾಗಿಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಸಮುದಾಯ ಭವನ ನಿರ್ಮಾಣಕ್ಕೆ 7.60 ಕೋಟಿ ರೂ.ಹಣ ಬಿಡುಗಡೆಯಾಗಿದೆ. ಈಗಾಗಲೇ ಹಲವಾರು ಸಮುದಾಯ ಭವನಗಳ ಕಾಮಗಾರಿಗಳು ನಡೆಯುತ್ತಿವೆ. ಪ್ರತಿಯೊಂದು ಸಮುದಾಯವ ಭವನವೂ ಗ್ರಂಥಾಲಯವಾಗಬೇಕು. ಬುದ್ಧನ ಉಪದೇಶಗಳು ಹೇಳುವ ಕೇಂದ್ರಗಳಾಗಬೇಕು. ಇವನ್ನೆಲ್ಲ ಮಾಡಲು ಸ್ಥಳೀಯರ ಸಹಕಾರವೂ ಮುಖ್ಯವಾಗಲಿದೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ಅಹಿಂದ ಜವರಪ್ಪ ಮಾತನಾಡಿ, ಮೇಲ್ವರ್ಗದ ಸಮುದಾಯಗಳು ತಮ್ಮ ಜಾತಿಯ ಶಿಕ್ಷಣ ಸಂಸ್ಥೆಗಳು ತೆರೆದಿವೆ. ಆದರೆ ನಮ್ಮ ಸಮುದಾಯದ ಈ ಕೆಲಸ ಆಗಿಲ್ಲ. ಶೋಷಿತ ಸಮುದಾಯಗಳ ಶಿಕ್ಷಣದ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು ಎಂದರು.

ತಿ.ನರಸೀಪುರ ತಾಲೂಕಿನ ಕೊಳತ್ತೂರು ಬುದ್ಧ ವಿಹಾರದ ಬಂತೆ ಸುಗತಪಾಲ, ಮಾತೆ ಗೌತಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net